Skip to main content

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು


ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು
ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮಾ ರವರನ್ನು ಡೆಕತ್ಲಾನ್ ಗೆ ಕರೆದೊಯ್ದು ಚಾರಣಕ್ಕೆ ಸಂಬಂದಿಸಿದ ಬಟ್ಟೆ ಬರೆಗಳನ್ನು ಖರೀದಿಸಲು ಸಹಕರಿಸಿದೆ ಹಾಗೂ ಮೂರ್ತಿಯನ್ನು ಇಂಡಿಯಾ ಹೈಕ್ ಸಂಸ್ಥೆಯ ಕಚೇರಿಗೆ ಕರೆದೊಯ್ದು ಸಂಸ್ಥೆಯ ಸ್ಥಾಪಕರಾದ ಅರ್ಜುನ್ ಮಜುಮದಾರರಿಗೆ ಪರಿಚಯಿಸಿದೆ.
ಏಪ್ರಿಲ್ ೧೦ ರಂದು ನಾವು ನಾಲ್ಕೂ ಜನರು ಬೆಂಗಳೂರಿನಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿ ನಂತರ ಅಲ್ಲಿಂದ ಮಧ್ಯಾನ್ಹ ಜನಶತಾಬ್ದಿ ರೈಲಿನಲ್ಲಿ ಡೆಹರಾಡೂನ್ ಗೆ ಪ್ರಯಾಣಿಸಿ ರಾತ್ರೆ ೯.೩೦ಕ್ಕೆ ತಲುಪಿ ರೈಲ್ವೆ ರಿಟೈರಿಂಗ್ ರೂಮಿನಲ್ಲಿ ತಂಗಿದೆವು. ಮೂರ್ತಿ ಹಾಗೂ ಉಮಾ ರವರಿಗೆ ಮೊದಲೇ ಪರಿಚಯವಾಗಿದ್ದ ಮತ್ತೊಬ್ಬ ಚಾರಣಿಗಳಾದ (ಟ್ರೆಕ್ಕರ್) ಹೆಮಾಲಿಯವರು ವಿಮಾನದಲ್ಲಿ ಬಂದಿದ್ದರು. ಡೆಹರಾಡೂನ್ ನಲ್ಲಿ ಮೂರ್ತಿ ಹಾಗೂ ಉಮಾ ಹೆಮಾಲಿಯನ್ನು ಅವರು ತಂಗಬೇಕಿದ್ದ ಹೋಟೆಲಿಗೆ ಬಿಟ್ಟು ಬಂದರು. ನಂತರ ನಾವು ರಾತ್ರೆಯ ಊಟವನ್ನು ಮುಗಿಸಿ ರೂಮಿನಲ್ಲಿ ಮಲಗಿದೆವು.
ಮೊದಲನೇದಿನ: ಡೆಹಾರಾಡೂನ್ ನಿಂದ ಸಾಂಕ್ರಿ (೧೯೦ ಕಿ.ಮೀ) ಪ್ರಯಾಣ ಭಾನುವಾರ ಬೆಳಗ್ಗೆ ಬೇಗನೆ ಎದ್ದು ನಮ್ಮ ಹೆಗಲು ಚೀಲವನ್ನು ಪ್ಯಾಕ್ ಮಾಡಿ ರೈಲ್ವೆ ನಿಲ್ದಾಣದಿಂದ ನಾವು ನಾಲ್ಕೂ ಚಾರಣಿಗರು ಹೊರಬಂದೆವು. ರೈಲ್ವೆನಿಲ್ದಾಣದ ಎದುರು ನಾಲ್ಕು IH stikar ಹೊಂದಿದ ವಾಹನಗಳನ್ನು ಗುರುತಿಸಿ ಅದರಲ್ಲಿನ ಒಂದು ವಾಹನದಲ್ಲಿ ನಮ್ಮ ಬ್ಯಾಕ್ ಪ್ಯಾಕ್ಗಳನ್ನು ಇರಿಸಿ ಅಲ್ಲಿಗೆ ಆಗಲೇ ಬಂದಿದ್ದ ಕೆಲವು ಚಾರಣಿಗರನ್ನು ಪರಿಚಯ ಮಾಡಿಕೊಂಡೆವು. ಅನಂತರ ನಾವು ಚಹಾ ಸೇವಿಸಲು ಹೋದೆವು.

ಡೆಹಾರಾಡೂನ್ ನಿಂದ ಸಾಂಕ್ರಿಯೆಡಗಿನ ೧೯೦ ಕಿ.ಮೀ ಪ್ರಯಾಣವು ಮುಸ್ಸೋರಿಯ ಮುಖಾಂತರ ಅತ್ಯಂತ ಮನೋಹರವಾಗಿರುತ್ತದೆ ಎಂದು ಹೇಳಬೇಕಿಲ್ಲ. ಆದರೆ ನಮ್ಮ ಪ್ರಯಾಣವು ಅಲ್ಲಿಂದ ಮತ್ತೂ ಮನೋಹರವಾಗಿರುವುದು ಎಂಬುದನ್ನು ನಮ್ಮ ಪ್ರಯಾಣದಲ್ಲಿ ನಾವು ಕಂಡುಕೊಂಡೆವು.
ಬೆಳಗಿನ ಪ್ರಯಾಣದಲ್ಲಿ ನಾವು ದಾರಿಯುದ್ದಕ್ಕೂ ಮನಮೋಹಕ ಪೈನ್ ವೃಕ್ಷಗಳು ಸೂರ್ಯಕಿರಣಗಳನ್ನು ತಡೆದು ತಡೆದು ಬಿಡುತ್ತಿರುವುದು ಮತ್ತು ತಂಪಾದ ಗಾಳಿಯು ನಮ್ಮ ಕೆನ್ನೆಗಳನ್ನು ಸವರುತ್ತಿರುವ ಅತ್ಯಂತ ಮೋಹಕವಾದ ಮಾರ್ಗದಲ್ಲಿ ಮೊತ್ತ ಮೊದಲಿಗೆ ಪ್ರಯಾಣಿಸುತ್ತಿದ್ದೆವು. ಮಾರ್ಗದಲ್ಲಿ ನಾವು ಅತ್ಯಂತ ಸುಂದರವಾದ ಹಾಗೂ ಅತಿ ಸಣ್ಣದಾದ ನೌಗಾವ್, ಪುರೋಲ, ಮೋರಿ, ನೈಟ್ವಾರ ಹಳ್ಳಿಗಳನ್ನು ಹಾದು ಸಾಂಕ್ರಿ ಶಿಬಿರವನ್ನು ಸಂಜೆ ೪.೦೦ ಕ್ಕೆ ತಲುಪಿದೆವು. ಮಾರ್ಗಮಧ್ಯದಲ್ಲಿ ಬೆಳಗಿನ ಉಪಹಾರ ಹಾಗೂ ಪುರೋಲದಲ್ಲಿ ಮಧ್ಯಾನ್ಹದ ಊಟವನ್ನು ಮುಗಿಸಿ ಹಾಗೇ ಒಂದು ಸೂಕ್ತಪ್ರದೇಶದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ಯಮುನಾ ನದಿಯ ಕಡೆಗೆ ಇಳಿದು ಹೋಗಿ ತಂಪಾದ ನೀರಿನಲ್ಲಿ ನಮ್ಮ ಮುಖವನ್ನು ತೊಳೆದು ಆಯಾಸ ಪರಿಹಾರ ಮಾಡಿಕೊಂಡೆವು. ಪುರೋಲ ಹಳ್ಳಿಯಿಂದ ಪ್ರಕೃತಿ ಸೌಂದರ್ಯವು ಅತ್ಯಂತ ನಯನ ಮನೋಹರವಾಗಿತ್ತು.
ಸಾಂಕ್ರಿ ಶಿಬಿರದ ಹತ್ತಿರ ಬರುತ್ತಿದ್ದಂತೆ ನಮಗೆ ಮೊತ್ತ ಮೊದಲನೇಬಾರಿಗೆ ಹಿಮಾಲಯದ ಹಿಮಾವೃತ ಶಿಖರಗಳು ಕಾಣಿಸಿದವು. ಇವುಗಳನ್ನು ನೋಡಿ ಎಲ್ಲರೂ ಸಂತೋಷಪಟ್ಟೆವು
ನಮ್ಮ ಕಡೆಯ ಹಂತದ ಪ್ರಯಾಣದಲ್ಲಿ ನಾವುಗಳು ದೂರದಲ್ಲಿ ಬೆಟ್ಟಗಳ ಆಚೆಗೆ ಹಿಮಾವೃತ ಶಿಖರಗಳನ್ನು ನೋಡಿ ಬಹುಷಃ ಅದರಲ್ಲಿನ ಒಂದು ಶಿಖರವನ್ನು ನಾವು ಹತ್ತುತ್ತೇವೆಂದು ನನ್ನ ಒಳಮನಸ್ಸು ಹೇಳುತ್ತಿತ್ತು.
ಕಡೆಗೆ ನಾವು ಗೋವಿಂದ್ ರಾಷ್ಟ್ರೀಯ ಉದ್ಯಾನದ ಬಾಗಿಲಿಗೆ ಬಂದು ತಲುಪಿದೆವು. ಇಲ್ಲಿ ನಮ್ಮಗಳ ಪರಿಚಯ ಪತ್ರಗಳನ್ನು ಉದ್ಯಾನದ ಅಧಿಕಾರಿಗಳಿಗೆ ತೋರಿಸಿ ಅಲ್ಲೇ ಕೆಲವು ಭಾವ ಚಿತ್ರಗಳನ್ನು ತೆಗೆದುಕೊಂಡು ಅಲ್ಲಿಂದ ೧೧ ಕಿ.ಮೀ ದೂರದ ಸಾಂಕ್ರಿಯೆಡೆಗೆ ಪ್ರಯಾಣಿಸಿದೆವು.
ಸಾಂಕ್ರಿ ತಲುಪಿದೊಡನೆ ನಮಗೆ ಹೊಸದಾದ ವೈಲ್ಡ್ ಆರ್ಚಿಡ್ಸ್ ಹೋಟಲಿನಲ್ಲಿ ತಂಗಲು ಅನುಕೂಲಮಾಡಿಕೊಟ್ಟರು. ಅಲ್ಲಿ ನಾವು ಮೊದಲಿಗೆ ಚಾರಣದ ಮುಖಂಡರಾದ ಶ್ರೀ.ಅಭಿರು ಅವರನ್ನು ಭೇಟಿಮಾಡಿದೆವು. ಹೋಟೆಲಿನ ಕೋಣೆಗೆ ತೆರಳಿ ಸ್ವಲ್ಪ ವಿಶ್ರಾಂತಿಯ ನಂತರ ಎಲ್ಲರೂ ಮೇಲ್ಗಡೆಯಲ್ಲಿರುವ ವಿಶಾಲವಾದ ಹಾಲಿನಲ್ಲಿ ಸೇರಿ ನಮ್ಮ ಪರಿಚಯ ಪತ್ರಗಳನ್ನು ಅಭಿರುರವರಿಗೆ ಸಲ್ಲಿಸಿದೆವು. ನಂತರ ಚಹಾ, ಪಕೋಡ ಸೇವಿಸಿ ಪರಸ್ಪರ ಪರಿಚಯ ಮಾಡಿಕೊಂಡೆವು. ಅಭಿರು ತನ್ನ ಹಾಗೂ ಚಾರಣದ ಮಾರ್ಗದರ್ಶಿ ಶ್ರೀ.ರೂಪ್ ಮೋಹನ್ ರವರ ಪರಿಚಯವನ್ನು ಮಾಡಿಕೊಂಡರು. ಅನಂತರ ಮುಂದಿನ ನಾಲ್ಕುದಿನಗಳ ಚಾರಣದ ಸೂಕ್ಷ್ಮ ಪರಿಚಯವನ್ನು ಅಭಿರುರವರು ಮಾಡಿಕೊಟ್ಟರು. ಹೋಟಲಿನ ಬಾಲ್ಕನಿಯಿಂದ ಕಾಣಿಸುತ್ತಿದ್ದ ವಿಶಾಲವಾದ ಕಣಿವೆ ಹಾಗೂ ಅದರ ತಳಭಾಗದಲ್ಲಿ ಹರಿಯುತ್ತಿರುವ ಸುಪಿನ್ ನದಿಯ ದೃಶ್ಯಗಳು ಅತ್ಯಂತ ಸುಂದರಾಗಿತ್ತು. ಅಲ್ಲೇ ನಿಂತು ನಾನು ನಮ್ಮ ಜೊತೆಗಿದ್ದ ಇತರ ಸಹಚಾರಣಿಗರೊಂದಿಗೆ ನನ್ನ ಮೊದಲನೇ ಬಾರಿಯ ಸಾಂಕ್ರಿ ಚಾರಣದ ಅನುಭವಗಳನ್ನು ಹಂಚಿಕೊಂಡೆ.
ನಾವುಗಳು ಮಾರನೇದಿನದ ಜುದಾ ಕ ತಲ್ಲಾಬ್ ಕಡೆಗಿನ ಟ್ರೆಕ್ ನ್ನು ನೆನೆಸಿಕೊಂಡು ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಳಲು ರಾತ್ರೆ ನಿದ್ರಾದೇವಿಯ ಮಡಿಲಿಗೆ ಜಾರಿದೆವು.
ಎರಡನೇ ದಿನ: ಸಾಂಕ್ರಿ (೬೪೫೦ ಅಡಿ) ಶಿಬಿರದಿಂದ ಜುದಾ ಕ ತಲಾಬ್ ಕಡೆಗೆ (೯೧೫೦) ಬೆಳಗಿನ ಕೊರೆಯುವ ಛಳಿಯಲ್ಲಿ ನಾನು, ಮೂರ್ತಿ ಹಾಗೂ ಶ್ರೀಕಾಂತ್ ಎದ್ದು ಬಿಸಿಯಾದ ಚಹಾವನ್ನು ಕುಡಿದು ಛಳಿಯಲ್ಲಿ ಸ್ನಾನದ ಚಿಂತೆಯನ್ನು ಮರೆತು ನಮ್ಮ ಬ್ಯಾಕ್ ಪ್ಯಾಕ್ ಗಳನ್ನು ಬಟ್ಟೆಗಳಿಂದ ತುಂಬಿಸಿದೆವು. ನಂತರ ಬಿಸಿ ಬಿಸಿ ಉಪಹಾರವನ್ನು ಸೇವಿಸಿ ಉಳಿದ ಪದಾರ್ಥಗಳನ್ನು ಪ್ಯಾಕ್ ಮಾಡಿ ಮ್ಯೂಲ್ ಮೇಲೆ ಕಳುಹಿಸಬೇಕಾದ ಬ್ಯಾಕ್ ಪ್ಯಾಕ್ ಗಳನ್ನು ಹೊರಗೆ ತಂದಿಟ್ಟೆವು. ಹೊರಗೆ ಆಕಾಶವು ಶುಭ್ರಬಾಗಿ ಸೂರ್ಯನ ಬೆಳಕು ಚೆನ್ನಾಗಿ ಬೆಳಗುತ್ತಿತ್ತು. ಇದನ್ನು ಶುಭ ಸೂಚನೆಯೆಂದು ತಿಳಿದು ನಮಗೆ ಸಂತೋಷವಾಯಿತು.
ತಲೆ ಮೇಲೆತ್ತಿನೋಡಿದರೆ ನಮಗೆ ಸಾಂಕ್ರಿಯಿಂದ ಬೇರೆ ಬೇರೆ ಕಡೆಗೆ ಹೋಗುವ ಸೂಚನಾಫಲಕ ಕಾಣಿಸಿತು. ಜುದಾ ಕ ತಲಾಬ್ ಗೆ ಹೋಗಲು ಕೇವಲ ೩ ಕಿ.ಮೀ ದೂರವಷ್ಟೆ!
ಎಲ್ಲರೂ ಬಂದನಂತರ ಒಟ್ಟಾಗಿ ರಸ್ತೆಯಲ್ಲಿ ನಡೆಯಲು ಶುರುಮಾಡಿದೆವು. ನಾವು ಒಟ್ಟು ೨೧ ಮಂದಿ ಅದರಲ್ಲಿ ನಾವು ಮೂರು ಜನ (ನಾನು, ಮೂರ್ತಿ ಹಾಗೂ ಶ್ರೀಕಾಂತ್) ಹಿರಿಯ ನಾಗರೀಕರು, ಹಾಗೂ ಶ್ರೀಮತಿ ಉಮಾ ಮೂರ್ತಿಯು ಹಿರಿಯ ನಾಗರೀಕರಿಗೆ ಹತ್ತಿರದ ವಯಸ್ಸಿನವರು ಮತ್ತೆ ಉಳಿದವರೆಲ್ಲಾ ಯುವಕ/ ಯುವತಿಯರು. ನನಗೆ ಕೇದಾರಕಾಂತ ಶಿಖರಾರೋಹಣವು ಎರಡಾನೇಯಬಾರಿ ಹಾಗೂ ಉಳಿದವರಿಗೆ ಹಿಮಾಲಯ ಶಿಖರಾರೋಹಣವು ಮೊದಲಬಾರಿ. ಎಲ್ಲರೂ ಬಹಳ ಸಂತೋಷ ಹಾಗೂ ಹುಮ್ಮಸ್ಸಿನಿಂದ ಪರ್ವತಾರೋಹಣಕ್ಕೆ ಕಾತುರರಾಗಿದ್ದರು. ಮೊದಲ ೧೦ ನಿಮಿಷ ರಸ್ತೆಯಲ್ಲಿ ನಡೆದು ನಂತರ ಬಲಕ್ಕೆ ತಿರುಗಿ ಏರುದಾರಿಯಲ್ಲಿ ಹತ್ತಲು ಶುರುಮಾಡಿದೆವು. ಸ್ವಲ್ಪ ಸಮಯದಲ್ಲೇ ಬ್ಯಾಕ್ ಪ್ಯಾಕನ್ನು ಹೊತ್ತು ಬರುತ್ತಿದ್ದ ಹಲವರಿಗೆ ಆಯಾಸವಾಗಿ ಹೆಗಲುಚೀಲವನ್ನು ಕೆಳಗಿರಿಸಿ ವಿಶ್ರಾಂತಿಯನ್ನು ತೆಗೆದುಕೊಂಡರು. ನಾವು ದಟ್ಟವಾದ ಓಕ್ ವೃಕ್ಷಗಳಿಂದ ಕೂಡಿದ ಕಾಡಿನಲ್ಲಿ ಏರು ಹಾದಿಯಲ್ಲಿ ಮೇಲೇರತೊಡಗಿದೆವು. ೩೦ ನಿಮಿಷಗಳಲ್ಲಿ ನಾವು ಒಂದು ಮರದ ಮನೆಯನ್ನು ತಲುಪಿದೆವು. ಅಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಪಡೆದು ಮರದ ಮನೆಯ ಹತ್ತಿರ ಕೆಲವು ಫೋಟೋಗಳನ್ನು ತೆಗೆದು ನಂತರ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಕಾಡಿನ ಮತ್ತೊಂದು ಜಾಗದಲ್ಲಿ ನಾನು ಮೂರ್ತಿ, ಉಮಾ ಹಾಗೂ ಶ್ರೀಕಾಂತ್ ರವರ ಒಂದು ಅಗಾಧವಾದ ಓಕ್ ಮರವನ್ನು ತಬ್ಬಿ ಹಿಡಿದಿರುವ ಬೇರೆ ಬೇರೆ ಫೋಟೋಗಳನ್ನು ತೆಗೆದುಕೊಂಡೆ. ಮಧ್ಯಾನ್ಹ ೧.೩೦ ಕ್ಕೆ ಕಡೆಗೆ ಇಂಡಿಯಾ ಹೈಕ್ ದ ಒಂದು ಬ್ಯಾನರನ್ನು ಕಂಡೆವು. ಆಗ ತಿಳಿಯಿತು ನಾವು ಜುದಾ ಕ ತಲಾಬ್ (೯೧೫೦ ಅಡಿ) ಶಿಬಿರವನ್ನು ತಲುಪಿದೆವೆಂದು ತಿಳಿಯಿತು. ಶಿಬಿರದ ಸುತ್ತಲಿನ ಸೌಂದರ್ಯವು ನಯನ ಮನೋಹರವಾಗಿದ್ದರೂ ನನಗೆ ಸ್ವಲ್ಪ ನಿರಾಶೆಯಾಯಿತು. ಏಕೆಂದರೆ ಜುದಾ ಕ ತಲಾಬ್ ಕೊಳವು ಕಡಿಮೆ ನೀರಿನಿಂದ ಹಾಗೂ ಕೊಳಕಾಗಿ ಕಾಣುತ್ತಿತ್ತು ಹಾಗೂ ಅಲ್ಲಿ ಸುತ್ತಲೂ ಹಿಮವಿರುತ್ತಿತ್ತೆಂದು ನಿರೀಕ್ಷಿಸಿದ್ದೆ. ಆದರೆ ಅದರ ಬದಲು ಸುತ್ತಲೂ ಹಸಿರಿನ ಮೈದಾನವಿತ್ತು. ಎಲ್ಲರೂ ಅಲ್ಲಿನ ವಾತಾವರಣವನ್ನು ವೀಕ್ಷಿಸಿ ಅತ್ಯಂತ ಸಂತೋಷಪಟ್ಟೆವು.
ನಮಗಾಗಿ ೮ ಶಿಬಿರಗಳನ್ನು ನಿರ್ಮಿಸಿದ್ದರು ಹಾಗೂ ಎಡಭಾಗದಲ್ಲಿ ಆಕಾಶವನ್ನು ಮುತ್ತಿಡುವ ದಟ್ಟವಾದ ಮರಗಳು, ಬಲಭಾಗದಲ್ಲಿ ಹುಲ್ಲುಗಾವಲು ಹಾಗೂ ಎದುರುಗಡೆ ದೂರದಲ್ಲಿ ಹಿಮದಿಂದಾವೃತವಾದ ನಯನಮನೋಹರವಾದ ಶಿಖರಗಳು.
ರುಚಿ ರುಚಿಯಾದ ಊಟದ ನಂತರ ಎಲ್ಲರೂ ಕ್ಯಾಂಪ್ ಸುತ್ತ ಅಡ್ಡಾಡಿ ಫೋಟೋಗಳನ್ನು ತೆಗೆದು ನಂತರ ಹರಟೆ ಹೊಡೆಯಲು ಶುರುಮಾಡಿದೆವು. ಸಂಜೆಗೆ ಚಹಾ ಹಾಗೂ ಸ್ನ್ನ್ಯಾಕ್ಸ್ ಸೇವನೆಯ ನಂತರ ಅಭಿರೂ ರವರು ಎಲ್ಲರ ರಕ್ತದೊತ್ತಡವನ್ನು ಪರೀಕ್ಷಿಸಿದರು. ಬಿಸಿ ಬಿಸಿ ಸೂಪ್ ನ್ನು ಸೇವಿಸಿದನಂತರ ಎಲ್ಲರೂ ಅರ್ಧಚಂದ್ರಾಕೃತಿಯಲ್ಲಿ ಸೇರಿ ಎಲ್ಲರ ಹೆಸರುಗಳನ್ನು ನೆನಪಿಸುವ ಒಂದು ಆಟವನ್ನು ಆಡಿದೆವು. ಈ ಆಟವು ಎಲ್ಲರನ್ನೂ ಮತ್ತಷ್ಟು ಹತ್ತಿರ ಸೇರಿಸಿತು. ಅನಂತರ ರಾತ್ರೆಯ ಭೋಜನದ ನಂತರ ಎಲ್ಲರೂ ಸ್ಲೀಪಿಂಗ್ ಬ್ಯಾಗ್ ಒಳಗೆ ನುಸುಳಿ ನಿದ್ರಾದೇವಿಗೆ ಶರಣಾದೆವು.

ಮೂರನೇ ದಿನ: ಜುದಾ ಕ ತಲಾಬ್(೯೧೫೦) ನಿಂದ ಕೇದಾರಕಾಂತ ಬೇಸ್ ಶಿಬಿರದೆಡೆಗೆ (೧೧೨೫೦)ಬೆಳಗ್ಗೆ ೬ ಘಂಟೆಗೆ ಎದ್ದು ಚಹಾ ಸೇವನೆಯ ನಂತರ ಸ್ವಲ್ಪ ಹೊತ್ತು ಹರಟೆ ಹೊಡೆದು ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ೭ ಕ್ಕೆ ಉಪಹಾರವನ್ನು ಸೇವಿಸಿ ೮ ಕ್ಕೆ ಜುದಾ ಕ ತಲಾಬ್ ಶಿಬಿರಕ್ಕೆ ವಿದಾಯ ಹೇಳಿ ಮುಂದಿನ ಶಿಬಿರದೆಡೆಗೆ ಹೊರಟೆವು. ಹವಾಮಾನವು ಅತ್ಯಂತ ಹಿತಕರವಾಗಿತ್ತು. ಆಕಾಶವು ಶುಭ್ರವಾಗಿತ್ತು. ದಾರಿಯುದ್ದಕ್ಕೂ ನೋಟವು ಅತ್ಯಂತ ನಯನಮನೋಹರವಾಗಿ ಹಾಗೂ ಹಸಿರು ಹುಲ್ಲುಗಾವಲಿನಿಂದ ಕೂಡಿತ್ತು. ಹಾದಿಯಲ್ಲಿ ನಮಗೆ ದೇವದಾರು, ಪೈನ್ ಹಾಗೂ ಅಲ್ಲಲ್ಲಿ ಮ್ಯಾಪಲ್ ವೃಕ್ಷಗಳು ಅತ್ಯಂತ ಹೇರಳವಾಗಿ ಕಾಣಿಸುತ್ತಿದ್ದವು.
ಮಧ್ಯಾನ್ಹದ ಹೊತ್ತಿಗೆ ೩-೪ ಕಿ.ಮೀ ನಡೆಗೆ ಹಾಗೂ ೨೧೦೦ ಅಡಿ ಎತ್ತರದ ಹಾದಿಯನ್ನು ನಡೆದು ಕೆ.ಕೆ.ಬೇಸ್ ಕ್ಯಾಂಪ್ ತಲುಪಿದೆವು. ಇಲ್ಲಿಯೂ ಕೂಡ ನಮಗೆ ಶಿಬಿರದಲ್ಲಿ ಹಿಮವು ಇರಲಿಲ್ಲ. ನಾನು ಕಳೆದಬಾರಿ ಇಲ್ಲಿಗೆ ಬಂದಿದ್ದಾಗ ಶಿಬಿರದ ಸುತ್ತ ಮುಟ್ಟಲು ಹಾಗೂ ಕಣ್ಣು ಕಾಣಿಸುವಷ್ಟು ದೂರದವರೆಗೂ ಹಿಮವಿತ್ತು. ಶಿಬಿರದಿಂದ ದೂರ ನೋಡಿದರೆ ನಮಗೆ ಮೊಟ್ಟ ಮೊದಲನೇಬಾರಿಗೆ ಕೆ.ಕೆ. ಶಿಖರವು ಕಾಣಿಸಿತ್ತಿತ್ತು. ಮಧ್ಯಾನ್ಹದ ಊಟದ ನಂತರ ಎಲ್ಲರೂ ಸುತ್ತಲಿನ ಹುಲ್ಲಿನ ಮೈದಾನವನ್ನು ವೀಕ್ಷಿಸಲು ಬೇರೆ ಬೇರೆ ದಿಕ್ಕಿಗೆ ಹೋದೆವು.
ಸಂಜೆಯ ಚಹಾಸೇವನೆಯ ನಂತರ ಟ್ರೆಕ್ ಮುಖಂಡ ಅಭಿರೂ ಎಲ್ಲರಿಗೂ ಮಾರನೇ ದಿನದ ಕಾರ್ಯಕ್ರಮವನ್ನು ವಿವರಿಸಿದರು. ನಂತರ ರಾತ್ರಿಯ ಊಟವನ್ನು ಮುಗಿಸಿ ಬೆಳಗಿನ ೩ ಘಂಟೆಗೆ ಏಳುವುದನ್ನು ನೆನಸಿಕೊಂಡು ಮಲಗಿದೆವು. ನಮ್ಮಲ್ಲಿ ಕೆಲವರು ೨.೩೦ಕ್ಕೆ ಎದ್ದು ಹೊರಗೆ ಬಂದು ನಕ್ಷತ್ರ ವೀಕ್ಷಣೆಯನ್ನು ಮಾಡತೊಡಗಿದರು. ಎಲ್ಲರೂ ೪ ಕ್ಕೆ ಬೆಳಗಿನ ಉಪಹಾರವನ್ನು ಸೇವಿಸಿ ಕ್ರ್ಯಾಂಪ್ ಆನ್ ಹಾಗೂ ಗೈಟರ್ಸ್ ಗಳನ್ನು ಧರಿಸಿ ೪.೫೦ಕ್ಕೆ ಕೆ.ಕೆ.ಶಿಖರವನ್ನು ಏರಲು ತಯಾರಾದೆವು.

ನಾಲ್ಕನೇ ದಿನ: ಕೆ.ಕೆ. ಬೇಸ್ ಶಿಬಿರದಿಂದ (೧೧೨೫೦) ಕೆ.ಕೆ.ಶಿಖರದೆಡೆಗೆ (೧೨೫೦೦) ನಂತರ ಹರ್ಗಾಂವ್ ಶಿಬಿರದೆಡೆಗೆ (೮೯೦೦)ಬೆಳಗಿನ ಝಾವ ೪.೫೦ಕ್ಕೆ ಎಲ್ಲರೂ ಒಬ್ಬರ ಹಿಂದೆ ಒಬ್ಬರಂತೆ ಸಾಲಾಗಿ ಟಾರ್ಚ್ ಗಳ ಸಹಾಯದಿಂದ ಸುತ್ತಲೂ ಕಪ್ಪಗಿನ ದೇವದಾರು ವೃಕ್ಷಗಳನ್ನೊಳಗೊಂಡ ಕಡಿದಾದ ಆದರೆ ಹಿಮರಹಿತ ಹಾದಿಯನ್ನು ೩೦ ನಿಮಿಷ ನಡೆದನಂತರ ಎತ್ತರದ ಪೂರ್ವದಿಕ್ಕಿನಿಂದ ಸೂರ್ಯನ ಮಸುಕಾದ ಬೆಳಕು ಕಾಣಿಸತೊಡಗಿತು. ನಮ್ಮ ಟಾರ್ಚಗಳನ್ನು ಆರಿಸಿ ಮುಂದುವರೆಯ ತೊಡಗಿದೆವು. ಹಾದಿಯುದ್ದಕ್ಕೂ ಶಿಖರವು ನಮ್ಮ ಹತ್ತಿರದಲ್ಲೇ ಇರುವಂತೆ ಭಾಸವಾಗುತ್ತಿದ್ದರೂ ಅದು ಇನ್ನೂ ಎತ್ತರದಲ್ಲಿತ್ತು. ಅದನ್ನು ತಲುಪಲು ನಾವು ಬಹಳ ಉತ್ಸಾಹದಿಂದ ನಡೆಯ ತೊಡಗಿದೆವು. ಸ್ವಲ್ಪ ಸಮಯದ ನಂತರ ನಮ್ಮ ಹಾದಿ ಸಂಪೂರ್ಣವಾಗಿ ಹಿಮಾವೃತವಾಗ ತೊಡಗಿತು. ಇಲ್ಲಿಂದ ನಮ್ಮ ನಡಿಗೆಯು ನಿಧಾನವಾಗತೊಡಗಿತು.
ನಮಗೆ ಈ ದಿನ ಚಂದ್ರಾಸ್ತಮಾನ ಹಾಗೂ ಸೂರ್ಯೋದಯ ಎರಡನ್ನೂ ನಮ್ಮ ಚಾರಣದಲ್ಲಿ ನೋಡುವ ಅವಕಾಶವು ಲಭಿಸಿತು. ಸುಮಾರು ೭.೩೦ ಕ್ಕೆ ಒಂದು ಸಮತಟ್ಟಾದ ಸ್ಥಳವನ್ನು ತಲುಪಿ ಅಲ್ಲಿಂದ ಸೂರ್ಯೋದಯವನ್ನು ವೀಕ್ಷಿಸಿದೆವು. ಇಲ್ಲಿ ಹಲವಾರು ಫೋಟೊಗಳನ್ನು ತೆಗೆದ ನಂತರ ನಮ್ಮಲ್ಲಿ ಬಹಳ ಮಂದಿಯ ಕ್ಯಾಮರ/ಮೊಬೈಲ್ಗಳಲ್ಲಿನ ಚಾರ್ಜ್ ಮುಗಿಯಿತು.
ಇಲ್ಲಿಂದ ಹಾದಿಯು ಅತ್ಯಂತ ಕಡಿದಾಗತೊಡಗಿತು. ಎಲ್ಲರೂ ಬಹಳ ಸುಸ್ತಾಗಿದ್ದರೂ ಶಿಖರವನ್ನೇರುವ ಉತ್ಸಾಹ ಕಡಿಮೆಯಾಗಿರಲಿಲ್ಲ. ನಾವು ಮುನ್ನಡೆಯುತ್ತಿದ್ದಂತೆ ಮುಂದಿನ ಹಾಗೂ ಸುತ್ತಮುತ್ತಲಿನ ದೃಶ್ಯಗಳು ಹೆಚ್ಚು ಹೆಚ್ಚು ಸುಂದರವಾಗಿ ಕಾಣಿಸತೊಡಗಿತು.
ನನಗೆ ಈಗಲೂ ನೆನಪಾಗುತ್ತಿರುವುದೇನೆಂದರೆ ನಾನು ಶಿಖರವನ್ನು ತಲುಪಿದಕೂಡಲೇ ಹಿಂದೆ ಕಂಡ ಅದೇ ಶಿವ ಪಾರ್ವತಿಯರ ಚಿಕ್ಕದಾದ ಕಲ್ಲಿನಿಂದಾವೃತವಾದ ಮಂದಿರ ಹಾಗೂ ಸಣ್ಣ ಗಣಪತಿಯ ವಿಗ್ರಹಗಳು ನೋಡಲು ದೊರಕಿದವು. ಎದುರಿಗೇ ಒಂದು ತ್ರಿಶೂಲವಿತ್ತು. ಅಲ್ಲೇ ನಿಂತು ನಾನು ಶಿವನನ್ನು ಮನಸಾರೆ ಧ್ಯಾನಿಸಿ ಎರಡನೇ ಬಾರಿಗೆ ಇಲ್ಲಿಗೆ ಬರಲು ಶಕ್ತಿಯನ್ನು ನೀಡಿದ ಭಗವಂತನಿಗೆ ನನ್ನ ನಮನಗಳನ್ನು ಸಲ್ಲಿಸಿದೆ.
ನಾನು ಮಾಡಿದ ಪ್ರಾರ್ಥನೆಯೆಂದರೆ

“ಓಂ ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ ಮಹಾದೇವಾಯ ತ್ರಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ಮಹಾದೇವಾಯ ನಮಃ” ಹಾಗೂ

“ಓಂ ನಮೋ ಹಿರಣ್ಯಬಾಹವೇ ಹಿರಣ್ಯ ವರ್ಣಾಯ ಹಿರಣ್ಯ ರೂಪಾಯ ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ ಪಶುಪತಯೇ ನಮಃ”
ನಂತರ ಶ್ರೀ.ಅಭಿರು ರವರು ಎಲ್ಲರನ್ನೂ ಒಂದೆಡೆಗೆ ಕರೆದು ಸುತ್ತ ಮುತ್ತ ಕಾಣಿಸುವ ಮುಖ್ಯವಾದ ಶಿಖರಗಳ ಹೆಸರುಗಳನ್ನು ಪರಿಚಯಿಸಿದರು. ಬಂದರ್ಪೂಂಚ್ ಪರ್ವತಶ್ರೇಣಿ, ಕಾಲನಾಗ್ ಶಿಖರ, ಸ್ವರ್ಗಾರೋಹಿಣಿ - ೧,೨,೩,೪, ಹರ ಕಿ ದುನ್ ಕಣಿವೆ ಹಾಗೂ ಬಲಗಡೆ ತುದಿಯಲ್ಲಿ ಕಾಣುವ ಗೋಯ್ಚಾಲ ಕಣಿವೆ. ನಂತರ ಎಲ್ಲರೂ ಸೇರಿದ ಒಂದು ಗ್ರೂಪ್ ಫೋಟೋವನ್ನು ತೆಗೆಸಿಕೊಂಡೆವು. ಸ್ವಲ್ಪ ಸಮಯದ ನಂತರ ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿಯತೊಡಗಿದೆವು. ನಮ್ಮ ಗೈಡ್ ನಮಗೆ ಎರಡು ಸಲಹೆಗಳನ್ನು ಅಂದರೆ ಹಿಮದ ಹಾದಿಯನ್ನು ಕಾಲ್ನಡಿಗೆಯಿಂದ ಇಳಿಯುವುದು ಅಥವಾ ಹಲವಾರು ಕಡೆ ಕುಳಿತು ಜಾರುವುದು. ಎಲ್ಲರೂ ಎರಡನೇ ಸಲಹೆಯನ್ನು ಸ್ವೀಕರಿಸಿದೆವು. ಮೊದಲಿನ ಸುಮಾರು ೨೦೦ ಅಡಿಯ ಜಾರುವ ಹಾದಿಯಲ್ಲಿ ನಾನೇ ಮೊದಲಿಗೆ ಸಲೀಸಾಗಿ ಜಾರಿದೆ. ನನ್ನ ನಂತರ ಎಲ್ಲರೂ ಜಾರತೊಡಗಿದರು. ಎಲ್ಲರೂ ಈ ಜಾರುವಿಕೆಯಲ್ಲಿ ಮಗುವಂತೆ ಸಂತೋಷಪಟ್ಟರು. ನಂತರ ಮತ್ತೆ ಮೂರು ಕಡೆಗಳಲ್ಲಿ ಹೆಚ್ಚಿನ ಹಾದಿಯನ್ನು ಜಾರಿ ಇಳಿದೆವು. ಅಲ್ಲಿಂದ ಎಲ್ಲರೂ ಬೇರೆ ಬೇರೆಯಾಗಿ ತಮಗೆ ತೋಚಿದ ಹಾದಿಯಲ್ಲಿ ಹಿಮದ ಮೇಲೆ ನಡೆದು ಕೆ.ಕೆ.ಬೇಸ್ ಕ್ಯಾಂಪ್ ನ್ನು ತಲುಪಿದೆವು. ಸ್ವಲ್ಪ ವಿಶ್ರಾಂತಿಯ ನಂತರ ಊಟವನ್ನು ಮುಗಿಸಿ ೩೦ ನಿಮಿಷ ವಿಶ್ರಾಂತಿಯ ನಂತರ ಅಲ್ಲಿಂದ ೫೦ ನಿಮಿಷದ ನಡಿಗೆ ಮೂಲಕ ಎಲ್ಲರೂ ಮತ್ತೊಂದು ಸುಂದರವಾದ ಹರ್ಗಾವ್ ಶಿಬಿರವನ್ನು ತಲುಪಿದೆವು. ದಿನದ ಉಳಿದ ಸಮಯವನ್ನು ಉಳಿದವರೊಡನೆ ಮಾತುಕಥೆಯೊಡನೆ ಹಾಗೂ ಸುತ್ತಲಿನ ಸುಂದರ ದೃಶ್ಯಗಳನ್ನು ನೋಡುತ್ತಾ ಹಾಗೂ ಸುತ್ತಾ ಅಡ್ಡಾಡುತ್ತಾ ಕಳೆದೆವು. ಸಂಜೆಯ ಸೂಪ್ ಕುಡಿದ ನಂತರ ಎಲ್ಲರೂ ಡೈನಿಂಗ್ ಟೆಂಟ್ ನಲ್ಲಿ ಸೇರಿ ತಮ್ಮ ತಮ್ಮ ಚಾರಣದ ಅನುಭವಗಳನ್ನು ಹಂಚಿಕೊಂಡೆವು. ಅನಂತರ ಟ್ರೆಕ್ ಲೀಡರಾದ ಶ್ರೀ. ಅಭಿರು ರವರು ಅಡಿಗೆಯವರ ಸಹಾಯದಿಂದ ಒಂದು ಕೇಕ್ ನ್ನು ಒಂದು ಪಾತ್ರೆಯಲ್ಲಿ ಮುಚ್ಚಿ ತಂದು ಅದನ್ನು ಶ್ರೀ.ಗುಂಜನ್ ಹಾಗೂ ಅವರ ಪತ್ನಿ ಶ್ರೀಮತಿ ರೂಪಾಲಿ ಯವರನ್ನು ತೆರೆಯಲು ತಿಳಿಸಿದರು. ಅದನ್ನು ತೆರೆದು ನೋಡಿದಾಗ ಅವರಿಬ್ಬರಿಗೂ ಅತ್ಯಂತ ಸಂತೋಷವಾಯಿತು. ಎಲ್ಲರೂ ಅವರಿಬ್ಬರನ್ನೂ ಅವರ ವಿವಾಹವಾದ ವಾರ್ಷಿಕ ಸಂದರ್ಭದ ಸಲುವಾಗಿ ಹಾರ್ದಿಕವಾಗಿ ಅಭಿನಂದಿಸಿದೆವು. ಅವರೂ ಕೂಡ ತಮ್ಮ ಸಂತೋಷವನ್ನು ಎಲ್ಲರೊಡನೆ ಹಂಚಿಕೊಂಡರು. ಅದಾದ ನಂತರ ರಾತ್ರೆ ವಿಶೇಷವಾದ ಊಟವನ್ನು ಮಾಡಿ ಎಲ್ಲರೂ ಕೆ.ಕೆ. ಟ್ರೆಕ್ ನ ಕಡೆಯ ಪರ್ವತದ ತಪ್ಪಲಿನ ರಾತ್ರೆಯನ್ನು ಸಂತೋಷದಿಂದ ಹಾಯಾಗಿ ನಿದ್ರಿಸಿದೆವು.

ಐದನೇ ದಿನ: ಹರ್ಗಾಂವ್ ನಿಂದ ಸಾಂಕ್ರಿಯೆಡೆಗೆ ಐದನೇದಿನ ಬೆಳಗ್ಗೆ ಎಲ್ಲರೂ ನಿಧಾನವಾಗಿ ಎದ್ದು ಸೂರ್ಯನ ಬೆಳಕಿನಲ್ಲಿ ಬಿಸಿಲು ಕಾಯಿಸಿಕೊಳ್ಳುತ್ತಾ ಚಹಾ ಸೇವಿಸತೊಡಗಿದೆವು. ಅನಂತರ ಯಾರಿಗೂ ಅಲ್ಲಿಂದ ಹೊರಡಲು ಇಷ್ಟವೇ ಇಲ್ಲದೆ ಸುತ್ತಲಿನ ಸುಂದರ ಹುಲ್ಲುಗಾವಲಿನಲ್ಲೇ ಅಡ್ಡಾಡತೊಡಗಿದರು. ನಾನೂ ಕೂಡ ನನ್ನ ಬೈನಾಕ್ಯುಲರ್ನಿಂದ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ನೋಡಿ ಎಲ್ಲರಿಗೂ ಅದನ್ನು ಕೊಟ್ಟು ಹಿಮಾವೃತ ಶಿಖರಗಳನ್ನು ಮತ್ತೊಮ್ಮೆ ನೋಡಲು ಪ್ರೇರೇಪಿಸಿದೆ. ಎಲ್ಲರೂ ಬೈನಾಕ್ಯುಲರ ಮೂಲಕ ಸುತ್ತಲಿನ ಸೌಂದರ್ಯವನ್ನು ವೀಕ್ಷ್ಸಿಸಿದರು. ವಾತಾವರಣವು ಅತ್ಯಂತ ಹಿತಕರವಾಗಿತ್ತು. ಎಲ್ಲರ ಮಖದಲ್ಲೂ ಸಾಂಕ್ರಿಯಿಂದ ಹೊರಡುವಾಗ ಏನನ್ನು ಸಾಧಿಸಬೇಕೆಂದುಕೊಂಡಿದ್ದರೋ ಅದನ್ನು ಸಾಧಿಸಿದ ತೃಪ್ತಿ ಮನೆಮಾಡಿತ್ತು. ಇಲ್ಲಿಂದ ಹೊರಡು ಮೊದಲು ಉಳಿದ ಸಮಯವನ್ನು ಪ್ರಕೃತಿಯೊಡನೆ ಸಂಪೂರ್ಣವಾಗಿ ಕಳೆಯಲು ಎಲ್ಲರೂ ನಿರ್ಧರಿಸಿದಂತಿತ್ತು. ನನಗೆ ನನ್ನ ಪ್ರತಿಯೊಂದು ಟ್ರೆಕ್ ಮುಗಿಯುವ ಹಂತದಲ್ಲೂ ಇದೇ ಭಾವನೆ ಕಂಡುಬರುತ್ತಿತ್ತು.
ಈ ದಿನ ಟ್ರೆಕ್ ಲೀಡರಿನ ಬೇಗ ಹೊರಡುವ ಒತ್ತಾಯವಿಲ್ಲದೆ ಎಲ್ಲರೂ ಸಾವಧಾನವಾಗಿ ತಮ್ಮದೇ ಆದ ಆರಾಮ ಗತಿಯಲ್ಲಿ ರೆಡಿಯಾಗಿ ಟ್ರೆಕ್ ನ ಕಡೆಯ ಬ್ರೀಫಿಂಗ್ ಆಲಿಸಲು ಒಂದೆಡೆ ಸೇರಿದೆವು.
ನಂತರ ಎಲ್ಲರೂ ಕಡೆಯ ಶಿಬಿರದಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆವು. ಎಂದಿನಂತೆ ಶುಭ್ರವಾದ ಆಕಾಶ ಹಾಗೂ ಹಿತವಾದ ಸೂರ್ಯನ ಬೆಳಕಿನಲ್ಲಿ ಕಾಡಿನ ಹಾದಿಯನ್ನು ಕ್ರಮಿಸತೊಡಗಿದೆವು. ದಾರಿಯುದ್ದಕ್ಕೂ ಹಚ್ಚ ಹಸಿರು, ರೋಡೋಡೆಂಡ್ರಾನ್ ಹೂವುಗಳನ್ನೊಳಗೊಂಡ ಸುಂದರ ಗಿಡಗಳು ನಮ್ಮ ದಾರಿಯನ್ನು ಸುಂದರವಾಗಿರಿಸಿದವು. ನಡು ನಡುವೆ ಅಲ್ಲಲ್ಲಿ ಶೀತಲವಾದ ನೀರಿನಿಂದ ಕೂಡಿದ ತೊರೆಗಳು ನಮ್ಮನ್ನು ಮುದಗೊಳಿಸುತ್ತಿದ್ದವು. ಕೆಲವರು ಸುತ್ತಲಿನ ದೃಶ್ಯಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆಹಿಡಿಯುತ್ತಾ ನಿಧಾನವಾಗಿ ನಡೆಯುತ್ತಿದ್ದರೆ, ಮತ್ತೆ ಕೆಲವರು ಅಲ್ಲಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಹಾಡುಗಳನ್ನು ಕೇಳುತ್ತಿದ್ದರು, ಮತ್ತುಳಿದವರು ದಾರಿಯಲ್ಲಿ ಸಿಕ್ಕಿದ ಸೇತುವೆಯ ಬಳಿ ಕುಳಿತು ಕೆಳಗಿನ ಹರಿಯುವ ನೀರನ್ನು ನೋಡುತ್ತಾ ತಮ್ಮಬಳಿಯಿದ್ದ ಡ್ರೈಫ್ಹ್ರೂಟ್ಸ್ ಗಳನ್ನು ಉಳಿದವರಿಗೆ ಹಂಚಿ ತಿನ್ನುತ್ತಿದ್ದರು.
ಸುಮಾರು ೧೧ ಘಂಟೆಗೆ ನಾನು ಹಾಗು ಶ್ರೀಕಾಂತ್ ಒಂದು ಸೇತುವೆಯನ್ನು ತಲುಪಿದೆವು. ಅಲ್ಲಿ ಕೆಲವು ಸಮಯ ವಿಶ್ರಾಂತಿಯನ್ನು ಪಡೆದು ಸುತ್ತಲಿನ ಮ್ಯಾಪಲ್, ದೇವದಾರು ಹಾಗೂ ಪೈನ್ ವೃಕ್ಷಗಳನ್ನು ಕಡೆಯ ಬಾರಿಗೆ ಸುಮಾರು ಹೊತ್ತು ವೀಕ್ಷಿಸುತ್ತಿದ್ದಾಗ ಅಲ್ಲಿಗೆ ಕೃತ್ತಿಕ, ಪ್ರಿಯ ಹಾಗೂ ದಿವ್ಯ ಬಂದರು. ಅವರೂ ನಮ್ಮ ಜೊತೆ ಸ್ವಲ್ಪ ಹೊತ್ತು ಮಾತನಾಡುತ್ತಾ ಡ್ರೈಫ್ರೂಟ್ಸ್ ಗಳನ್ನು ಎಲ್ಲರಿಗೂ ಹಂಚಿದರು. ನಮ್ಮಲ್ಲಿನ ಉಳಿದ ಸಂಗಾತಿಗಳು ಬಹಳ ಹಿಂದೆ ಉಳಿದಿದ್ದರು. ೧೧ ಘಂಟೆಗೆ ಅಲ್ಲಿಂದ ಹೊರಟು ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿಯತೊಡಗಿದೆವು. ೧೨.೩೦ ಕ್ಕೆ ಸಾಂಕ್ರಿಯ ಮುಖ್ಯ ರಸ್ತೆಯನ್ನು ತಲುಪಿದೆವು. ಟ್ರೆಕ್ ಲೀಡರ್ ನಮ್ಮನ್ನು ಎಲ್ಲರೂ ಅಲ್ಲಿಗೆ ಬರುವತನಕ ಅಲ್ಲಿಯೇ ಇರಲು ಹೇಳಿದ್ದರಿಂದ ನಾವು ಅಲ್ಲಿಯೇ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿಗೆ ಮೂರ್ತಿ, ಉಮಾ ಹಾಗೂ ಉಳಿದವರು ನಿಧಾನವಾಗಿ ತಲುಪಿದರು. ಎಲ್ಲರೂ ಪರಸ್ಪರ ಟ್ರೆಕ್ ನ್ನು ಮುಗಿಸಿದ್ದಕ್ಕೆ ಅಭಿನಂದಿಸಿದೆವು. ಸಾಂಕ್ರಿಯ ಕೆಲವು ಮಕ್ಕಳು ಎಲ್ಲರಿಗೂ ಹಲೋ, ಹಾಯ್ ಎಂದು ಹೇಳುತ್ತಿದ್ದರು. ಅವರನ್ನು ನೋಡಿ ನಮಗೆಲ್ಲರಿಗೂ ಸಂತೋಷವಾಯಿತು ಹಾಗೂ ಉಮಾ ತನ್ನಲ್ಲಿದ್ದ ಚಾಕಲೇಟನ್ನು ಎಲ್ಲ ಮಕ್ಕಳಿಗೂ ಹಂಚಿದರು. ನಂತರ ಎಲ್ಲರೂ ನಿಧಾನವಾಗಿ ಹೋಟೆಲನ್ನು ತಲುಪಿದೆವು.
ನಾನು, ಶ್ರೀಕಾಂತ್ ಮೊದಲಿಗೆ ಹೋಟಲನ್ನು ತಲುಪಿ ಮೊದಲನೇ ತಳ ಅಂತಸ್ತಿನಲ್ಲಿ ಕೋಣೆಯನ್ನು ಪಡೆದೆವು. ನಮ್ಮ ಬ್ಯಾಕ್ ಪ್ಯಾಕ್ ನ್ನು ತೆಗೆದುಕೊಂಡು ಕೋಣೆಯನ್ನು ಪ್ರವೇಶಿಸಿದೆವು. ಸ್ವಲ್ಪ ಹೊತ್ತಿಗೆ ಮೂರ್ತಿ ಸಹ ಬಂದನು. ಎಲ್ಲರೂ ಸ್ವಲ್ಪ ವಿಶ್ರಾಂತಿಯ ನಂತರ ಸ್ನಾನ ಮಾಡಿದೆವು. ಅನಂತರ ಊಟವನ್ನು ಮಾಡಿ ಸ್ವಲ್ಪ ವಿಶ್ರಾಂತಿಯನ್ನು ಪಡೆದೆವು. ಸಂಜೆಗೆ ನಾನು, ಮೂರ್ತಿ, ಉಮಾ ಹಾಗೂ ಶ್ರೀಕಾಂತ್ ಸಾಂಕ್ರಿಯ ಮುಖ್ಯಬೀದಿಯಲ್ಲಿ ಹಿತವಾದ ಹವೆಯ ಸುಖವನ್ನನುಭವಿಸುತ್ತಾ ಸುತ್ತಾಡಿದೆವು. ದಾರಿಯಲ್ಲಿ ಕೆಲವರನ್ನು ಭೇಟಿಯಾಗಿ ಹಲವಾರು ವಿಷಯವನ್ನು ಚರ್ಚಿಸಿದೆವು. ಅಲ್ಲೇ ಒಂದು ಹೋಟೆಲಿನಲ್ಲಿ ರುಚಿಯಾದ ಚಹಾ ವನ್ನು ಸೇವಿಸಿ ಮರಳಿ ಹೋಟೆಲಿಗೆ ಬಂದೆವು. ಹೋಟೆಲಿನಲ್ಲಿ ಮತ್ತೊಮ್ಮೆ ಚಹಾ, ಕುರುಕಲು ತಿಂಡಿಯನ್ನು ಸೇವಿಸಿದ ನಂತರ ಟ್ರೆಕ್ ಲೀಡರ ಅಭಿರು ಎಲ್ಲರನ್ನೂ ಕರೆದು ಟ್ರೆಕ್ ಸುಸೂತ್ರವಾಗಿ ಮುಗಿಸಿದ್ದಕ್ಕೆ ಧನ್ಯವಾದವನ್ನು ತಿಳಿಸಿ ಎಲ್ಲರಿಗೂ ಟ್ರೆಕ್ ಮುಗಿಸಿದ್ದಕ್ಕೆ ಪ್ರಮಾಣ ಪತ್ರವನ್ನು ಕೊಟ್ಟರು. ಅನಂತರ ಎಲ್ಲರೂ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಎಲ್ಲರೂ ಇಂಡಿಯಾ ಹೈಕ್ ರವರ ನೀಲಿ ಬಣ್ಣದ ಶರ್ಟನ್ನು ಕೊಂಡು ಅದನ್ನು ಹಾಕಿಕೊಂಡರು. ಟ್ರೆಕ್ ಸಮಯದಲ್ಲಿ ಅಡಿಗೆಯವರು ಒಮ್ಮೆ ಮಾಡಿದ್ದ ತಿಂಡಿ/ಊಟವನ್ನು ಮತ್ತೊಮ್ಮೆ ಮಾಡದೇ ವಿವಿಧ ತಿನಿಸುಗಳನ್ನು ನಮಗೆ ರುಚಿ ರುಚಿಯಾಗಿ ಉಣಬಡಿಸಿದ್ದನ್ನು ನೆನಸಿಕೊಂಡು ಎಲ್ಲರೂ ಅಡಿಗೆಯವರು ಹಾಗೂ ಗೈಡ್ ರೂಪ್ ಮೋಹನ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸಿ ಎಲ್ಲರೂ ಕೊಡಮಾಡಿದ್ದ ಸಣ್ಣ ಕಾಣಿಕೆಯನ್ನು ಎಲ್ಲರ ಪರವಾಗಿ ಶ್ರೀ.ಪ್ರೃಥ್ವಿ ನಾಗರಾಜ್ ರವರು ಸಲ್ಲಿಸಿದರು. ಅನಂತರ ರಾತ್ರೆಯ ಭೋಜನದ ನಂತರ ಹಾಡು, ನೃತ್ಯದೊಂದಿಗೆ ಬಹಳ ಹೊತ್ತು ಮನರಂಜನೆಯನ್ನು ಪರಸ್ಪರ ನೀಡಿ ರಾತ್ರೆ ೧೦.೦೦ ಕ್ಕೆ ಎಲ್ಲರೂ ತಮ್ಮ ತಮ್ಮ ಕೋಣೆಗೆ ತೆರಳಿ ನಿದ್ರಿಸಿದೆವು.
ನನ್ನ ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳುವುದನ್ನು ಮುಗಿಸುವ ಮೊದಲು ಹೇಳಲೇಬೇಕಾದ ಬಹು ಮುಖ್ಯವಿಷಯವೆಂದರೆ:
● ಹಲವಾರು ಸ್ನೇಹಿತರಿಗೆ ನನ್ನ ಧನ್ಯವಾದವನ್ನು ತಿಳಿಸಬೇಕು. ಅದರಲ್ಲಿ ಮುಖ್ಯವಾದವರು ಶ್ರೀಕಾಂತ್ ಕೊಲ್ಹಾರ - ನಾನು ಶ್ರೀಕಾಂತ್ ಗೆ ಟ್ರೆಕ್ ಬಗ್ಗೆ ತಿಳಿಸಿದಾಗ ಕೂಡಲೇ ಯಾವುದೇ ಸಬೂಬನ್ನು ಹೇಳದೆ ತಾನೂ ಬರುವುದಾಗಿ ತಿಳಿಸಿ ನನ್ನ ಜೊತೆ ಸಂತೋಷದಿಂದ ಎಲ್ಲ ಕಷ್ಟಗಳನ್ನು ಲೆಕ್ಕಿಸದೇ ಟ್ರೆಕ್ ಮಾಡಿದರು. ಇನ್ನು ನನ್ನ ತಮ್ಮ ಶ್ರೀ.ಮೂರ್ತಿ, ಅವನ ಪತ್ನಿ ಶ್ರೀಮತಿ ಉಮಾ ಮೂರ್ತಿ ಯವರು ನಾನು ಟ್ರೆಕ್ ಬಗ್ಗೆ ಒಂದೇ ಸಾಲಿನ ಈ ಮೇಲ್ ಕಳುಹಿಸಿದ ಕೂಡಲೇ ನನ್ನ ಜೊತೆಗೆ ಬರಲು ಒಪ್ಪಿ ನನಗೆ ದಾರಿಯಲ್ಲಿ ತಿನ್ನಲು ರುಚಿ ರುಚಿಯಾದ ತಿಂಡಿ, ಕುರುಕಲುಗಳನ್ನು ಮನೆಯಲ್ಲೇ ಮಾಡಿ ತಂದು ನನ್ನೊಂದಿಗೆ ಹಂಚಿಕೊಂಡರು. ನನಗೆ ಟ್ರೆಕ್ ಮಾಡಲು ಕಷ್ಟವಾದಾಗ ಅವರು ನನಗೆ ಧೈರ್ಯವನ್ನು ಹಲವಾರು ಬಾರಿ ತುಂಬಿದರು.
● ಪೃಥ್ವಿ ನಾಗರಾಜ್, ದಿವ್ಯ ಸಿಸೋದಿಯ, ಕೃತ್ತಿಕ, ದಿವ್ಯ, ಪ್ರಿಯ, ಜ್ಯೋತಿ, ಹೇಮಾಲಿ, ರೂಪಾಲಿ, ಗುಂಜನ್, ಸಪ್ತರ್ಷಿ, ರಘು, ಹಾಗೂ ಟ್ರೆಕ್ ಲೀಡರ್ ಶ್ರೀ.ಅಭಿರು, ಗೈಡ್ ರೂಪ್ ಮೋಹನ್, ನೀಲ್, ಅಡಿಗೆಯವರು, ಎಲ್ಲರಿಗೂ ನನ್ನ ಧನ್ಯವಾದಗಳು.
ನನ್ನ ಮುಂದಿನ ಟ್ರೆಕ್ ಹಿಮಾಚಲದಲ್ಲಿನ ಬಲೇನಿ ಪಾಸ್ ಅಥವಾ ಬುರಾನ್ ಘಾಟಿ.






Comments

Popular posts from this blog

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018 ನವೆಂಬರ್ 2018 ರಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಗುಜರಾತ್ ಶಾಖೆಯ ಕಾರ್ಯದರ್ಶಿಯಾದ ಶ್ರೀ ಅನಂತ್ ಪಾರಮಾರ್ ಅವರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತರಾದ ಐದು ಜನ ಅಧಿಕಾರಿಗಳಿಗೆ ಜುನಾಘಡ್ ನಲ್ಲಿನ ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ವಿಶೇಷವಾದ ಆಹ್ವಾನ ಬಂದಿತು . ಈ ಐದು ನಿವೃತ್ತ ಅಧಿಕಾರಿಗಳೆಂದರೆ ಸರ್ವಶ್ರೀ . ಪಾಲಹಳ್ಳಿ ರಮೇಶ , ಕೆ . ವೆಂಕಯ್ಯಸುಬ್ಬಯ್ಯ , ಸುರೇಶ ಬಾಬು , ಹೆಚ್ . ಆರ್ . ಗುರುರಾಜ್ ಹಾಗೂ ಈ ಲೇಖನ ಪ್ರಸ್ತುತಿ ಪಡಿಸುತ್ತಿರುವ ಗುರುಪ್ರಸಾದ್ ಹಾಲ್ಕುರಿಕೆ . ಈ ಆಹ್ವಾನ ಬರಲು ತೆರೆ ಮರೆಯಲ್ಲಿ ಕೆಲಸಮಾಡಿದವರೆ ಶ್ರೀ . ರಮೇಶ್ . ಈ ಚಾರಣದ ಬಗ್ಗೆ ಚರ್ಚಿಸಲು ಐದೂ ಜನರು ಒಂದೆಡೆ ಸೇರಿದೆವು . ರಮೇಶ್ ಅವರು ಚಾರಣದ ಜೊತೆಗೆ ಸುತ್ತ ಮುತ್ತಲಿನ ಕೆಲವು ತೀರ್ಥ ಕ್ಷೇತ್ರ ಹಾಗೂ ಚಾರಿತ್ರಿಕ ಸ್ಥಳಗಳನ್ನೂ ಸಂದರ್ಶಿಸಬಹುದೆಂದು ಸಲಹೆ ನೀಡಿದರು . ರಮೇಶನು ಹೇಳಿದನೆಂದ ಮೇಲೆ ಅದರ ಬಗ್ಗೆ ಬೇರೆಯವರು ಮಾತನಾಡುವುದುಂಟೆ ! ಎಲ್ಲರೂ ಅದಕ್ಕೆ ಒಪ್ಪಿದೆವು . ಮೊದಲಿಗೆ ಚಾರಣದ ವಿವರಗಳು ಈ ರೀತಿಯಾಗಿತ್ತು : ವೈಹೆಚ್ಎಐ ಬೇಸ್ ಕ್ಯಾಂಪ್ - ಪಂಡಿತ್ ದೀನ ದಯಾಳ್ ಉಪಾಧ್ಯಾಯಿ ಪರ್ವತಾ ರೋಹಣ ಸಂಸ್ಥೆ . ●       ವೈಹೆಚ್ಎಐ ಬೇಸ್ ಕ್ಯಾಂಪ್ - ಸಕ್

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು ಏಪ್ರಿಲ್ 22 ರಂದು ಸ್ಯಾನ್ ಫ್ರಾನ್ಸಿಸ್ಕೊ   ವಿಮಾನದಲ್ಲಿ ಬಂದು ಅಲ್ಲಿಂದ 40 ಮೈಲಿ ದೂರದ ಸನ್ನಿವೇಲ್ ನಗರಕ್ಕೆ ಬಂದು ನನ್ನ ಮಗನ ಮನೆಗೆ ತಲುಪಿದ ನಂತರ ಎರಡು ದಿನ ವಿಶ್ರಾ o ತಿಯ ನಂತರ ಶನಿವಾರದಂದು ನನ್ನನ್ನು   ನನ್ನ ಮಗನು ಇಲ್ಲಿಂದ 40 ಮೈಲಿ ದೂರದಲ್ಲಿರುವ ಲ್ಯಾಂಡ್ ಆಫ್ ಮೆಡಿಸನ್ ಬುದ್ಧ ಎಂಬ ಸುಂದರ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದನು . ಅಲ್ಲಿಗೆ ಹೋಗುವ ಮೊದಲು ಆ ಪ್ರದೇಶದ ಬಗ್ಗೆ ಕೆಲವು ವಿವರಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡೆ . ಅದರ ಸಂಕ್ಷಿಪ್ತ ವಿವರಣೆ ಹೀಗಿದೆ : ಈ ಪ್ರದೇಶವು ಸಾಂತಾಕ್ರೂಜ್ ಪರ್ವತದ ತಪ್ಪಲಿನಲ್ಲಿರುವ ಸೋಕ್ವಿಲ್ ಹಳ್ಳಿಯಿಂದ ಒಂದೂವರೆ ಮೈಲಿ ದೂರದಲ್ಲಿ ಸುಂದರ ಅರಣ್ಯ ಪ್ರದೇಶದಲ್ಲಿದೆ . ಇಲ್ಲಿ ಉಪನ್ಯಾಸ , ಧ್ಯಾನ , ಪ್ರಾರ್ಥನೆ , ಏಕಾಂತದಲ್ಲಿ ಉಳಿದುಕೊಳ್ಳುವ ಅನುಕೂಲವುಳ್ಳ ಹಾಗೂ ಸಮುದಾಯ ಸೇವೆಯ ಕಾರ್ಯಕ್ರಮಗಳನ್ನು ನಡೆಸಲಾಗುವುದು . ಹೆಸರೇ ಹೇಳಿರುವಂತೆ ಇದು ಮಹಾಯಾನ ಬೌದ್ಧ ಪರಂಪರೆಗೆ ಸೇರಿದ್ದು . ಇಲ್ಲಿ 6 ಮೈಲಿ ಸುತ್ತಳತೆಯ ಚಾರಣ ಮಾಡಲು ಹಾದಿಯಿರುವ (TREKKING TRAIL) ವಿಷಯವನ್ನು ತಿಳಿದು ಅಲ್ಲಿ ಕೆಲವು ದೂರ ನಡೆದೆವು . ಈ ಹಾದಿಯು ಕಡಿದಾದ ಏರುವಿಕೆಯನ್ನು ಹೊಂದಿದ್ದು ನನ್ನ ಪತ್ನಿಗೆ ಬಹಳ ದೂರ ನಡೆಯಲು ಸಾಧ್ಯವಾಗದಿದ್ದರಿಂದ 2 ಮೈಲಿ ನಡೆದು ಮರಳಿದೆವು . ಅಲ್ಲಿ ಕಂಡ ಕೆಲವು ಸುಂದರ ದೃಶ್ಯಗಳನ್ನು ಈ ಕೆಳಗೆ ನೋಡಿರಿ