ಕುವರಿ ಪಾಸ್ ಚಾರಣದ ಅನುಭವಗಳು ಹಿಮಾಲಯದಲ್ಲಿನ ಕುವರಿ ಪಾಸ್ ಶಿಖರದ ಚಾರಣ ಮಾಡಲು ನಾನು ಬಹಳ ದಿವಸದಿಂದ ಕಾಯುತ್ತಿದ್ದೆ. ಇದನ್ನು ಎರಡು ಋತುಗಳಲ್ಲಿ ಚಾರಣ ಮಾಡಬಹುದು. ಮೊದಲನೆಯದು ಚಳಿಗಾಲದಲ್ಲಿ ಹಾಗೂ ಎರಡನೆಯದು ಮಳೆಗಾಲ ಕಳೆದ ನಂತರದ ದಿನಗಳಲ್ಲಿ. ಚಳಿಗಾಲದಲ್ಲಿ ಚಾರಣ ಮಾಡಿದರೆ ಹಾದಿಯು ಬಹಳಷ್ಟು ಹಿಮಾವೃತವಾಗಿರುತ್ತದೆ. ಮಳೆಗಾಲ ಕಳೆದನಂತರದ ದಿನಗಳಲ್ಲಿ ಚಾರಣ ಮಾಡಿದರೆ ಹಾದಿಯು ಹಾಗೂ ಇಡೀ ಪರ್ವತಗಳು ಹಸಿರು ಸೀರೆಯನ್ನುಟ್ಟಂತೆ ಕಂಗೊಳಿಸುತ್ತಿರುತ್ತದೆ. ನಾನು ಎರಡನೇ ಋತುವನ್ನು ಆರಿಸಿಕೊಂಡೆ, ಏಕೆಂದರೆ ನನ್ನ ಜೊತೆಗೆ ಶ್ರೀಮಾನ್ ವೆಂಕಟ ಸುಬ್ಬಯ್ಯ ನೂ (ವೇ.ಸು) ಚಾರಣ ಮಾಡಲು ಸಂಮತಿಸಿದ್ದು. ವೇ.ಸು ಗೆ ಇದು ಮೊದಲನೆಯ ಹಿಮಾಲಯದ ಚಾರಣ, ನನಗಾದರೋ ಇದು ೨೧ ನೇ ಹಿಮಾಲಯದ ಚಾರಣವಾಗಿತ್ತು. ಮಾಮೂಲಿನಂತೆ ಚಾರಣವನ್ನು ಮಾಡಲು INDIA HIKES (IH) ಚಾರಣ ಸಂಸ್ಥೆಯ ಮೂಲಕ ಸಪ್ಟೆಂಬರ್ ೨೪ರಿಂದ ೩೦ ರ ವರೆಗೆ ಹೋಗಲು ತೀರ್ಮಾನಿಸಿ ಅದರಲ್ಲಿ ನಮಗಿಬ್ಬರಿಗೆ ಸ್ಥಳವನ್ನು ಕಾಯ್ದಿರಿಸಿದೆ. ಬೆಂಗಳೂರಿನಿಂದ ದೆಹಲಿಗೆ ಹಾಗೂ ಮರುಪ್ರಯಾಣವನ್ನು ವಿಮಾನದಲ್ಲಿ ನಡೆಸಲು ತೀರ್ಮಾನಿಸಿ ಅದರಂತೆ ಪ್ರಯಾಣದ ಚೀಟಿಯನ್ನು ಖರೀದಿಸಿದೆ. ದೆಹಲಿಯಿಂದ ಹರಿದ್ವಾರದೆಡೆಗೆ ರೈಲಿನಲ್ಲಿ ಸ್ಥಳವನ್ನು ಕಾಯ್ದಿರಿಸಿದೆ. ಚಾರಣ ಮಾಡುವ ಮೊದಲು ಅನುಸರಿಸಬೇಕಾದ ನಿಯಮಗಳನ್ನು ವೇ.ಸು ಗೆ ಸಾಕಷ್ಟು ವಿವರಿಸಿದ್ದೆ. ಸಪ್ಟೆಂಬರ್ ೨೩ ರಂದು ಬೆಳಗಿನ ವಿಮಾನದಲ್ಲಿ ಹೊರಟು ಮಧ್ಯಾ...