ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು 
ಚಾರಣದ ಉದ್ದೇಶ, ಸವಾಲುಗಳು ಹಾಗೂ ಪ್ರತ್ಯಕ್ಷ ವೀಕ್ಷಣೆ  
- ನಿಮಗೆ ಗೊತ್ತಿರುವ ಸ್ಥಳದಿಂದ ದೂರಹೋಗಿ ಅಲ್ಲಿಯ ಹೊಸ ಹಾದಿಯನ್ನು, ಮತ್ತಿಷ್ಟು ಹಾದಿಯನ್ನು ಕ್ರಮಿಸಿ, ಅತ್ಯಂತ ರಮಣೀಯವಾದ ಪ್ರಕೃತಿ ಸಂಪತ್ತನ್ನು ಪತ್ತೆಹಚ್ಚುವುದಕ್ಕೋಸ್ಕರ ಚಾರಣ ಮಾಡಬೇಕು.
 - ನೀವು ಅನುಭವಿ ಅಥವಾ ಆರಂಭಿಕ ಚಾರಣಿಗರೇ ಆಗಿದ್ದರೂ ಚಾರಣವು ಒಡ್ಡುವ ಸವಾಲುಗಳನ್ನು ಎದುರಿಸಿ ಆನಂದಿಸುವ ಅವಕಾಶಗಳನ್ನು ನೀಡುತ್ತದೆ.
 - ಎಲ್ಲೋ ಯಾವುದೋ ಪುಸ್ತಕದಲ್ಲಿ ಓದಿರಬಹುದಾದ ಅಥವಾ ಸಾಕ್ಷ್ಯ ಚಿತ್ರಗಳಲ್ಲಿ ನೋಡಿದ, ಪ್ರತ್ಯಕ್ಷವಾಗಿ ವೀಕ್ಷಿಸಬೇಕೆಂದು ಕನಸು ಕಂಡಿರಬಹುದಾದ ಸ್ಥಳಗಳಿಗೆ ಹೋಗಿ ಅಲ್ಲೆಲ್ಲಾ ಸುತ್ತಾಡಿ ಆನಂದಿಸುವ ಅವಕಾಶಗಳನ್ನು ಚಾರಣವು ಒದಗಿಸುತ್ತದೆ.
 - ಚಾರಣದಲ್ಲಿ ನಮ್ಮನ್ನು ಮತ್ತೊಮ್ಮೆ ಕಂಡುಕೊಳ್ಳುವ ಅವಕಾಶವೂ ದೊರಕುತ್ತದೆ. ಯಾವುದೇ ಹಿಂಜರಿಕೆಯ ಸೋಗಿಲ್ಲದೆ ಕಂಡರಿಯದ ಹಾದಿಯಲ್ಲಿ ನಿಮ್ಮನ್ನು ನೀವು ಮತ್ತೊಮ್ಮೆ ಹುಡುಕಿಕೊಳ್ಳಲು ಚಾರಣವು ಸಂದರ್ಭವನ್ನು ಒದಗಿಸುತ್ತದೆ.
 - ಚಾರಣವು ಒಂದು ಸಾಮೂಹಿಕ ಚಟುವಟಿಕೆ ಹಾಗೂ ಈ ಹವ್ಯಾಸವು ನಿಮ್ಮಲ್ಲಿನ ದೈಹಿಕ ಶಕ್ತಿಯನ್ನು ಅಭಿವ್ಯಕ್ತಿಸುತ್ತದೆ. ಚಾರಣವು ರಮ್ಯವಾದ ಪ್ರಕೃತಿಯ ನಡುವೆ ಸುಂದರವಾದ ಸಮುದಾಯ ಹುಟ್ಟಿಕೊಳ್ಳುತ್ತದೆ ಅಲ್ಲದೆ ಹೊಸ ಹೊಸ ಗೆಳೆಯರನ್ನು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೂ ನೀವು ಕ್ರಮಿಸುವ ಮೈಲಿಗಳೇ ನಿಮ್ಮ ನೆನಪಾಗಿ ಉಳಿಯುತ್ತದೆ.
 
ಹಿಮಾಲಯದಲ್ಲಿನ ನನ್ನ ೨೪ನೇ ಚಾರಣ ಮಾಡುವ ಮೊದಲು ನನಗೆ ಬಂದ ಆಲೋಚನೆಯೇನೆಂದರೆ ಯಾಕೆ ನಾನು ನನ್ನ ಕೆಲವು ಸ್ನೇಹಿತರನ್ನೂ ನನ್ನೊಂದಿಗೆ ಚಾರಣಕ್ಕೆ ಕರೆದೊಯ್ಯಬಾರದು ಎಂದು. ಅದರಂತೆ ಡಿಸೆಂಬರ ೨೦೧೬ ರಲ್ಲೇ ನನ್ನ ಕೆಲವರು ಸ್ನೇಹಿತರನ್ನು ಚಾರಣಕ್ಕೆ ಆಹ್ವಾನಿಸಿದೆ. ಅವರಲ್ಲಿ ಸರ್ವಶ್ರೀ. ಪಿ.ಎಸ.ರಮೇಶ, ಮುನಿಶಂಕರಪ್ಪ, ವೆಂಕಟಸುಬ್ಬಯ್ಯ, ಕೆ.ವಿ.ಆಚಾರ್ಯ, ಎಸ.ವಿಜಯಕುಮಾರ ಬರಲು ಸಮ್ಮತಿಸಿದರು. ಈಗ ಯಾವ ಕಡೆಗೆ ಚಾರಣ ಹೋಗುವುದೆಂದು ತೀರ್ಮಾನಿಸುವ ಸಂದರ್ಭ ಬಂದಾಗ ನಾನು ಈಗಾಗಲೇ ಚಾರಣ ಮಾಡಿರುವ “ದೇವಾರಿತಲ - ಚಂದ್ರಶಿಲೆ” ಕಡೆಗೆ ಚಾರಣ ಮಾಡುವ ಸಲಹೆಯನ್ನು ಎಲ್ಲರ ಮುಂದಿಟ್ಟೆ. ಎಲ್ಲರೂ ಅದಕ್ಕೆ ಸಮ್ಮತಿಸಿದರು. ಅದರಂತೆ ಡಿಸೆಂಬರ ೩೧ರಂದು “ಇಂಡಿಯಾ ಹೈಕ್” ಸಂಸ್ಥೆಯವರಲ್ಲಿ ಮಾರ್ಚ್ ೧೯ರಿಂದ ನಡೆಯಲಿರುವ ಚಾರಣಕ್ಕೆ ಸ್ಥಳಗಳನ್ನು ಎಲ್ಲರಿಗೂ ಕಾಯ್ದಿರಿಸಿದೆನು.
ಈ ಮಧ್ಯೆ ಡಿಸೆಂಬರ ಕಡೇ ವಾರದಲ್ಲಿನ ಒಂದು ಸಂಜೆ ನಾನು ಸಂಜೆಯ ನಡಿಗೆಯನ್ನು ಮುಗಿಸಿ ಮರಳಿ ಮನೆಗೆ ಬರುತ್ತಿದ್ದಾಗ ಗಿರಿನಗರ ಚೌಕದಲ್ಲಿ ಶ್ರೀಮಾನ್ ಚಂದ್ರಶೇಖರ ಹಾಗೂ ಅವರ ಪತ್ನಿ ನನಗೆ ಭೇಟಿಯಾದರು. ಅವರಿಗೆ ನನ್ನ ಚಾರಣದ ಬಗ್ಗೆ ಮಾಹಿತಿಯನ್ನು ನೀಡಿ ನಾನು ಮಾರ್ಚ್ ನಲ್ಲಿ ಹೊಗಲಿರುವ ಚಾರಣದ ಬಗ್ಗೆ ವಿವರಿಸಿದೆ. ನಂತರ ನಾವುಗಳು ಚಾರಣಕ್ಕೆ ಸ್ಥಳವನ್ನು ಕಾಯ್ದಿರಿಸಿದ ನಂತರ ಚಂದ್ರು ಅವರು ತಾವೂ ಬರುವುದಾಗಿ ತಿಳಿಸಿದರು. ಅದರಂತೆ ಅವರಿಗೂ ಸ್ಥಳವನ್ನು ಕಾಯ್ದಿರಿಸಿ ನಮ್ಮ ಪ್ರಯಾಣಕ್ಕೆ ವಿಮಾನದಲ್ಲಿ ಎಲ್ಲರಿಗೂ ಸ್ಥಳಗಳನ್ನು ಕಾಯ್ದಿರಿಸಿದೆ. ಅಲ್ಲದೇ ದೆಹಲಿಯಿಂದ ಹರಿದ್ವಾರ, ಹರಿದ್ವಾರದಲ್ಲಿ ರೈಲ್ವೆ ರಿಟೈರಿಂಗ್ ಕೋಣೆಯಲ್ಲಿ ರಾತ್ರೆ ತಂಗುವ ವ್ಯವಸ್ಥೆಯನ್ನು ಹಾಗೂ ರೈಲಿನಲ್ಲಿ ಮಧ್ಯಾನ್ಹದ ಊಟದ ವ್ಯವಸ್ಥೆಯನ್ನೂ ಮಾಡಿ ಮುಗಿಸಿದೆ. ನಂತರ ನಾನು ಚಂದ್ರು ಅವರ ಮನೆಗೆ ಹೋಗಿ ದೇವಾರಿಯಾ ತಲದ ಚಾರಣದ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಸಿದೆ.
ಇದಾದ ನಂತರ ನಾನು ನಮ್ಮ ಶಾರೀರಿಕ ತಯಾರಿ ಮಾಡಿಕೊಳ್ಳಲು ಪ್ರಾರಂಭಿಸಿದೆ. ಅದರಂತೆ ನಾನು ವಿಜಯಕುಮಾರನ ಮನೆಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹೋಗಿ ನಾವಿಬ್ಬರೂ ಹತ್ತಿರದಲ್ಲಿನ ರಾಮಾಂಜನೇಯ ಗುಡ್ಡದೆಡೆಗೆ ಹೋಗಿ ಅಲ್ಲಿನ ಗುಡ್ಡವನ್ನು ಹತ್ತಿ ಬರಲು ಪ್ರಾರಂಭಿಸಿದೆವು. ಸ್ವಲ್ಪ ದಿನಗಳ ನಂತರ ಬನಶಂಕರಿ ಎರಡನೇ ಹಂತದ ಬಳಿ ಇರುವ ಬನಗಿರಿ ಉದ್ಯಾನವನಕ್ಕೆ ಹೋಗಿ ಪ್ರತಿದಿನವೂ ಅಲ್ಲಿರುವ ೧೩೬ ಮೆಟ್ಟಲುಗಳನ್ನು ೫ ಬಾರಿ ಹತ್ತಿ, ಇಳಿದು ಬರತೊಡಗಿದೆವು. ಸ್ವಲ್ಪ ದಿನಗಳ ನಂತರ ಚಂದ್ರು ಅವರನ್ನೂ ಬೆಳಗಿನ ಝಾವದ ನಡಿಗೆಗೆ ಆಹ್ವಾನಿಸಿ ಅದರಂತೆ ನಡೆಯತೊಡಗಿದೆವು. ನಮ್ಮ ಪ್ರತಿದಿನದ ನಡೆದಾಟದ ಪ್ರಗತಿಯನ್ನು “ರನ್ ಕೀಪರ್” ಅಪ್ಲಿಕೇಶನ್ ಮೂಲಕ ದಾಖಲಿಸಲು ವಿಜಯಕುಮಾರನು ಸಹಾಯ ಮಾಡಿದನು. ಇದು ನಮಗೆ ಅತ್ಯಂತ ಅನುಕೊಲಕರವಾಗಿತ್ತು ಹಾಗೂ ನಮ್ಮ ಶಾರೀರಿಕ ತಯಾರಿಯಬಗ್ಗೆ ನಮಗೆ ಸಾಕಷ್ಟು ಸಮಾಧಾನವನ್ನು ತಂದಿತು.
ಈಗ ದೇವಾರಿಯ ತಲ - ಚಂದ್ರಶಿಲೆಯ ಚಾರಣದ ಬಗ್ಗೆ ಕೆಲವು ವಿವರಗಳನ್ನು ಮೊದಲು ತಿಳಿಯುವುದು ಸೂಕ್ತವೆನಿಸುತ್ತದೆ. ದೇವಾರಿಯಾ ತಲ-ಚಂದ್ರಶಿಲೆಯು ಉತ್ತರಾಖಂಡದ ಗಢವಾಲ್ ಪ್ರಾಂತದಲ್ಲಿರುವುದು. ಈ ಸ್ಥಳಕ್ಕೆ ಚಾರಣ ಮಾಡಬೇಕಾದಲ್ಲಿ ಮೊದಲು ನಾವು “ಸಾರಿ” ಎಂಬ ಹಳ್ಳಿಗೆ ಹೋಗಬೇಕು. ಅಲ್ಲಿಗೆ ಹರಿದ್ವಾರದಿಂದ ಸುಮಾರು ೨೦೦ ಕಿ.ಮೀ ಪ್ರಯಾಣ ಮಾಡಬೇಕು.
ಮೂಲ ಶಿಬಿರವಾದ ಸಾರಿ ಹಳ್ಳಿಯಿಂದ ಸುಮಾರು ೩ ಕಿ.ಮೀ ಚಾರಣ ಮಾಡಿದನಂತರ ಸಿಗುವುದೇ ಸುಂದರವಾದ ದೇವಾರಿಯಾ ತಲ.
ದೇವಾರಿಯಾ ಸರೋವರವು ಅತಿ ಸುಂದರವಾದ ಸರೋವರ ಹಾಗೂ ಇಲ್ಲಿಂದ ನಾವುಗಳು ದೂರದ ಚೌಕಾಂಬದ ೪-೩-೨ ಶಿಖರಗಳನ್ನು ವೀಕ್ಷಿಸಬಹುದು. ದೇವರಿಯಾ ತಲವು ಮಹಾಭಾರತದಲ್ಲಿ ಯುಧಿಷ್ಠಿರನು ಯಕ್ಷನ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ತನ್ನ ಸಹೋದರರನ್ನು ಬದುಕಿಸಿಕೊಂಡ ಸ್ಥಳ ಎಂದೇ ಪ್ರಸಿದ್ದಿಯಾಗಿದೆ. ಇಲ್ಲಿಂದ ಸುಮಾರು ೭ ಕಿ.ಮೀ ನಡೆದರೆ ನಮಗೆ ಸಿಗುವುದೇ ಕಾಲಾ ಪರ್ವತ ಹಾಗೂ ಬಿಸುರಿ ಪರ್ವತ ಹಾಗೂ ಈ ಪರ್ವತದ ತಪ್ಪಲಿನಲ್ಲಿ ಇರುವುದೇ ಬಿಸುರಿ ಸರೋವರ. ಈ ಸರೋವರದಬಳಿ ಇರುವ ಪುರಾತನ ವೃಕ್ಷದಲ್ಲೇ ಪಾಂಡವರು ತಮ್ಮ ಅಜ್ಞಾತವಾಸವು ಪ್ರಾರಂಭವಾಗುವ ಮೊದಲು ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದರೆಂದು ಪ್ರತೀತಿ.
ದೇವಾರಿಯಾ ಸರೋವರದಿಂದ ರೋಹಿಣೀ ಹುಲ್ಲುಗಾವಲನ್ನು ದಾಟಿ ಚಂದ್ರಶಿಲೆಯಿಂದ ಹುಟ್ಟಿ ಹರಿದುವರುವ ಆಕಾಶಕಾಮಿನಿ ತೊರೆಯನ್ನು ಕಣ್ತುಂಬ ವೀಕ್ಷಿಸಿ ಸುಮಾರು ಒಂದು ಘಂಟೆ ಚಾರಣ ಮಾಡಿದರೆ ೧೭ ಕಿ.ಮೀ ದೂರದ ಚೋಪ್ತಾ ಶಿಬಿರವನ್ನು ತಲುಪಬಹುದು.
ಚೋಪ್ಟಾದಿಂದ ತುಂಗನಾಥ ಮಂದಿರದ ಮಾರ್ಗವಾಗಿ ೪ ಕಿ.ಮೀ ಎತ್ತರದ ಚಂದ್ರಶಿಲಾ ಶಿಖರವನ್ನು ಹತ್ತುವುದು.
ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪುವ ಮಾರ್ಗ ಮಧ್ಯದಲ್ಲೇ ನಮಗೆ ಮೊದಲಿನ ವಿಘ್ನವು ಎದುರಾಯಿತು. ಅದೇನೆಂದರೆ ಮಾರ್ಗದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಎಲ್ಲ ವಾಹನಗಳೂ ಹಿಂತಿರುಗಿಸಿ ಮತ್ತೊಂದು ರಸ್ತೆಯಲ್ಲಿ ಹೊರಡಲು ಆತುರರಾಗಿದ್ದರು. ನಾವೂ ಕೂಡಾ ವಿಧಿಯಿಲ್ಲದೇ ಅದೇ ಮಾರ್ಗವನ್ನು ಅನುಸರಿಸಬೇಕಾಯಿತು. ನಂತರ ವಿಮಾನ ನಿಲ್ದಾಣವನ್ನು ತಲುಪಿ ನಮ್ಮ ಹೆಗಲು ಚೀಲವನ್ನು ಚೆಕ್ ಇನ್ ಮಾಡಿಸಿ ನಂತರ ನಾನು ವಿಜಯಕುಮಾರನನ್ನು ಪವರ ಬ್ಯಾಂಕ್ ಹಾಗೂ ಮೊಬೈಲ್ ಚಾರ್ಜರ ಗಳನ್ನು ಹ್ಯಾಂಡ್ ಬ್ಯಾಗ್ನಲ್ಲಿ ಇಟ್ಟುಕೊಂಡಿರುವೆಯಾ ಎಂದು ಪ್ರಶ್ನಿಸಿದಾಗ ಅವನು ಅದನ್ನು ಚೆಕ್ ಇನ್ ಬ್ಯಾಗ್ನಲ್ಲೇ ಹಾಕಿರುವೆ ಎಂದು ತಿಳಿಸಿದ. (ಇದು ವಿಮಾನಯಾನ ಸಂಸ್ಥೆಯವರ ಸೂಚನೆಗಳಿಗೆ ವಿರುದ್ಧವಾಗಿತ್ತು). ಅಲ್ಲದೇ ಏನು ಆಗುವುದಿಲ್ಲವೆಂದು ತಿಳಿಸಿದ. ನಾನು ಸುಮ್ಮನಾದೆ. ಈ ಮಧ್ಯೆ ಆಚಾರ್ಯ ಅವರು ತಮ್ಮ ಕನ್ನಡಕವನ್ನು ತೆಗೆದು ಸ್ಕ್ಯಾನ್ ಆಗುವ ಟ್ರೇಯಲ್ಲಿ ಇಟ್ಟಿದ್ದರು. ಸೆಕ್ಯೂರಿಟಿ ಚೆಕ್ ಆದ ನಂತರ ಅವರು ಅದನ್ನು ತೆಗೆದುಕೊಳ್ಳಲು ಮರೆತು ಬೋರ್ಡಿಂಗ್ ಗೇಟ್ ಬಳಿ ಬಂದು ಬಿಟ್ಟರು. ಸ್ವಲ್ಪ ಸಮಯದ ನಂತರ ನೆನಪಿಗೆ ಬಂದು ಮರಳಿ ಸೆಕ್ಯೂರಿಟಿ ಚೆಕ್ ಮಾಡುವ ಬಳಿ ಹೋಗಿ ಹುಡುಕಾಡಿದಾಗ ಅವರಿಗೆ ಕನ್ನಡಕವು ಸಿಗಲಿಲ್ಲ.
ಅನಂತರ ವಿಮಾನದಲ್ಲಿ ದೆಹಲಿಗೆ ಮಧ್ಯಾನ್ಹ ೧.೧೫ಕ್ಕೆ ಬಂದು ನಮ್ಮ ನಮ್ಮ ಬ್ಯಾಗ್ಗಳನ್ನು ತೆಗೆದುಕೊಂಡೆವು. ಆದರೆ ವಿಜಯಕುಮಾರನ ಬ್ಯಾಗ್ ಬಂದಿರಲೇ ಇಲ್ಲ. ಅಲ್ಲಿ ವಿಚಾರಿಸಿದಾಗ ನಮಗೆ ತಿಳಿದುಬಂದದ್ದೇನೆಂದರೆ ಅವನ ಬ್ಯಾಗ್ ನಲ್ಲಿ ಮೂರು ಪವರ ಬ್ಯಾಂಕ್ ಇದ್ದಿದ್ದರಿಂದ ಅದನ್ನು ವಿಮಾನದೊಳಗೆ ಕಳಿಸೇ ಇರಲಿಲ್ಲ. ಇದರಿಂದ ಬೇಸರಗೊಂಡ ವಿಜಯಕುಮಾರನು ತಾನು ಚಾರಣಕ್ಕೆ ಬರುವುದಿಲ್ಲವೆಂದೂ ಹಾಗೂ ಬೆಂಗಳೂರಿಗೆ ಮರಳುವನೆಂದು ಎಲ್ಲರಿಗೂ ತಿಳಿಸಿದ. ಆದರೆ ನಾನು ಅದಕ್ಕೆ ಒಪ್ಪದೇ ಚಾರಣಕ್ಕೆ ಬರಲೇ ಬೇಕೆಂದು ಒತ್ತಾಯಿಸಿ, ವಿಮಾನ ಸಂಸ್ಥೆಯವರಲ್ಲಿ ಅವನ ಬ್ಯಾಗನ್ನು ಬೆಂಗಳೂರಿನಿಂದ ಬರುವ ಮುಂದಿನ ವಿಮಾನದಲ್ಲಿ ಕಳಿಸಿರೆಂದು ವಿನಂತಿಸಿಕೊoಡೆವು. ಅವರು ಅದಕ್ಕೆ ಸಮ್ಮತಿಸಿದರು. ಆದರೆ ನಮ್ಮ ದುರಾದೃಷ್ಟಕ್ಕೆ ಬೆಂಗಳೂರಿನಿಂದ ಸಂಜೆ ೬ರರ ವರೆಗೂ ಯಾವುದೇ ವಿಮಾನವು ಹೊರಡುವುದಿಲ್ಲವೆಂದು ಸಂಸ್ಥೆಯವರು ತಿಳಿಸಿದರು. ವಿಧಿ ಇಲ್ಲದೆ ಎಲ್ಲರೂ ವಿಮಾನ ನಿಲ್ದಾಣದಲ್ಲೇ ಸಮಯವನ್ನು ಕಳೆಯಬೇಕಾಯಿತು. ಹೊರಗೆ ಹೋದರೆ ಮತ್ತೆ ಒಳಗೆ ಬಿಡುತ್ತಿರಲಿಲ್ಲ. ರಾತ್ರೆ ೯.೩೦ಕ್ಕೆ ಬಂದ ವಿಮಾನದಲ್ಲಿ ನಮಗೆ ಬ್ಯಾಗ್ ಸಿಕ್ಕಿತು. ಈ ಮಧ್ಯೆ ದೆಹಲಿಯಿಂದ ಹರಿದ್ವಾರಕ್ಕೆ ೩.೧೫ಕ್ಕೆ ಹೊರಡಲಿರುವ ರೈಲಿನಲ್ಲಿ ನಾವು ಕಾಯ್ದಿರಿಸಿದ್ದ ಅವಕಾಶವೂ ನಮ್ಮ ಕೈ ತಪ್ಪಿತು. ಅಲ್ಲದೇ ನಾನು ಎಲ್ಲರಿಗೂ ರೈಲಿನಲ್ಲಿ ಜೈನ ಥಾಲಿ (ಊಟ)ವನ್ನು ಕಾಯ್ದಿರಿಸಿದ್ದೆ. ಅದೂ ಕೂಡಾ ನಮ್ಮ ಕೈ ತಪ್ಪಿತು. ನಂತರ ಒಂದು ಚತುಶ್ಚಕ್ರ ವಾಹನವನ್ನು ಹರಿದ್ವಾರದವರೆಗೂ ಹೋಗಲು ಬಾಡಿಗೆಗೆ ಪಡೆದು ಅಲ್ಲಿಂದ ಹೊರಟು ಹರಿದ್ವಾರವನ್ನು ಬೆಳಗಿನ ಝಾವ ೪.೦೦ ಕ್ಕೆ ತಲುಪಿದೆವು.
೬.೩೦ಕ್ಕೆ ಸರಿಯಾಗಿ ನಾವುಗಳೆಲ್ಲರೂ ರೈಲ್ವೆ ನಿಲ್ದಾಣದ ಮುಂದೆ ನಮಗಾಗಿ ಕಾಯುತ್ತಿದ್ದ ವಾಹನದಲ್ಲಿ ಜಯಂತ್ ದೀದಿಯ ಅವರನ್ನು ಕೂಡಿಕೊಂಡು ಸಾರಿ ಹಳ್ಳಿಯ (ಬೇಸ್ ಕ್ಯಾoಪ್) ಕಡೆಗೆ ಹೊರಟೆವು. ಮಾರ್ಗ ಮಧ್ಯದಲ್ಲಿ ಅಲಕನಂದಾ ಹಾಗೂ ಭಾಗೀರಥೀ ಸಂಗಮವಾದ ದೇವಪ್ರಯಾಗದಲ್ಲಿ ವಾಹನವನ್ನು ನಿಲ್ಲಿಸಿ ಅಲ್ಲಿಂದ ೧೬೭ ಮೆಟ್ಟಲುಗಳನ್ನು ಉತ್ಸಾಹದಿಂದ ಇಳಿದು ಸಂಗಮವನ್ನು ತಲುಪಿ ಎಲ್ಲರೂ ಸಂಗಮದಲ್ಲಿ ಸ್ನಾನವನ್ನು ಮಾಡಿ ನಂತರ ೧೦೮ ದಿವ್ಯ ದೇಶಗಳೊಲ್ಲೊಂದಾದ ಪವಿತ್ರ ರಘುನಾಥನ ಮಂದಿರವನ್ನು ಪ್ರವೇಶಿಸಿ ದೇವರ ದರ್ಶನವನ್ನು ಮಾಡಿ ನಮ್ಮ ಚಾರಣವು ಸರಾಗವಾಗಿ ಆಗಲೆಂದು ಪ್ರಾರ್ಥಿಸಿ ನಂತರ ನಮ್ಮ ಪ್ರಯಾಣವು ಸಾರಿ ಹಳ್ಳಿಯೆಡೆಗೆ - ರುದ್ರಪ್ರಯಾಗ, ಕರ್ಣಪ್ರಯಾಗ, ಶ್ರೀನಗರ, ಅಗಸ್ತ್ಯಮುನಿ ಪ್ರದೇಶಗಳ ಮೂಲಕ ಸಾಗಿತು. ನಾನು, ರಮೇಶ, ವೆಂಕಟಸುಬ್ಬಯ್ಯ ಅವರನ್ನು ಹೊರತು ಪಡಿಸಿ ಉಳಿದವರಿಗೆ ಇದು ಮೊದಲನೇ ಪ್ರಯಾಣ. ಮಾರ್ಗದಲ್ಲಿ ಕಂಡುಬರುವ ಹಸಿರಿನ ಸೀರೆಯನ್ನುಟ್ಟ ಪ್ರಕೃತಿ ರಮ್ಯವಾದ ಗಗನಚುಂಬಿ ಪರ್ವತಗಳನ್ನು ನೋಡಿ ಉಳಿದವರು ಮೂಕವಿಸ್ಮಿತರಾದರು ಹಾಗೂ ಅವುಗಳ ಹಲವಾರು ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಇದಲ್ಲದೇ ಮಾರ್ಗದುದ್ದಕ್ಕೂ ನಮಗೆ ಅಲಕನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತಿತ್ತು. ದೇವ ಪ್ರಯಾಗದಲ್ಲಿ ಅಲಕನಂದಾ - ಭಾಗೀರತಿ ನದಿಗಳ ಸಂಗಮವು ನಮಗೆದುರಾದರೆ, ರುದ್ರಪ್ರಯಾಗದಲ್ಲಿ ಅಲಕನಂದಾ-ಮಂದಾಕಿನಿ ನದಿಗಳ ಸಂಗಮವು, ಕರ್ಣಪ್ರಯಾಗದಲ್ಲಿ ಅಲಂಕನಂದಾ-ಪಿಂಡಾರಿ ನದಿಗಳ ಸಂಗಮವು ಎದುರಾಗುವುದನ್ನು ವೀಕ್ಷಿಸಿದೆವು. ಇದಲ್ಲದೇ ಉಳಿದ ಎರಡು ಪ್ರಯಾಗಗಳು ನಮಗೆ ಈ ಮಾರ್ಗದಲ್ಲಿ ಸಿಗದೇ ಇರುವುದೆಂದರೆ ನಂದ ಪ್ರಯಾಗ - ಅಲಕನಂದಾ-ನಂದಾಕಿನಿ ನದಿಗಳ ಸಂಗಮ, ವಿಷ್ಣುಪ್ರಯಾಗ - ಅಲಕನಂದಾ-ಧೌಳಿ ಗಂಗಾ ನದಿಗಳ ಸಂಗಮ. ಇದಲ್ಲದೇ ಬದರಿನಾಥ ಕ್ಷೇತ್ರದಲ್ಲಿನ ಮಾನಾ ಹಳ್ಳಿಯ ಬಳಿ ಮತ್ತೊಂದು ಪ್ರಯಾಗ ಸಿಗುವುದೆಂದರೆ ಕೇಶವ ಪ್ರಯಾಗ - ಇಲ್ಲಿ ಅಲಕನಂದಾ-ಸರಸ್ವತೀ ನದಿಗಳ ಸಂಗಮವಿದೆ.
ಹೀಗೆ ನಾವುಗಳು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಪಯಣಿಸುತ್ತಾ ಊಖಿಮಠ-ಗೋಪೇಶ್ವರ ಮಂಡಲದ ರಸ್ತೆಯೆಡೆಗೆ ತಿರುಗಿ ಪಯಣಿಸಿದಾಗ ಮೊತ್ತ ಮೊದಲನೇ ಬಾರಿಗೆ ಹಿಮಾಲಯದ ಹಿಮ ಪರ್ವತದ ವೀಕ್ಷಣೆಯಾಯಿತು. ಮೊದಲ ಬಾರಿಗೆ ಈ ಮಾರ್ಗದಲ್ಲಿ ಬರುತ್ತಿರುವ ನಮ್ಮ ಗೆಳೆಯರೆಲ್ಲಾ ಅದನ್ನು ವೀಕ್ಷಿಸಿ, ಫೋಟೋವನ್ನು ತೆಗೆದುಕೊಂಡು ಸಂತೋಷ ಪಟ್ಟರು. ನನಗೆ ಈ ಪ್ರದೇಶದ ಪಯಣವು ಎರಡನೇ ಬಾರಿ. ಇಷ್ಟರಲ್ಲಾಗಲೇ ಸೂರ್ಯನು ಪಶ್ಚಿಮದಿಕ್ಕಿಗೆ ಪಯಣಿಸಿ ಸಂಜೆಯಾಗತೊಡಗಿತು. ಮಾರ್ಗವು ಅತ್ಯಂತ ಸುಂದರವಾಗಿತ್ತು. ಅಲ್ಲಲ್ಲೇ ಸ್ವಲ್ಪ ಸ್ವಲ್ಪ ಮಳೆಯೂ ಬಂದಿತ್ತು.
- ಸಾರಿ ಹಳ್ಳಿಯು ಅತ್ಯಂತ ಸುಂದರವಾದ ಒಂದೇ ರಸ್ತೆಯದ್ದಾಗಿತ್ತು. ಆಧುನಿಕತೆಯು ಸ್ವಲ್ಪ ಸ್ವಲ್ಪವಾಗಿ ಈ ಪ್ರದೇಶದಲ್ಲಿ ಇಣುಕುತ್ತಿರುವುದನ್ನು ಗಮನಿಸಿದೆ. ರಸ್ತೆಯುದ್ದಕ್ಕೂ ಸಣ್ಣ ಸಣ್ಣ ಹೋಟೆಲುಗಳು, ಅಂಗಡಿಗಳು, ಹೋಮ್ ಸ್ಟೇ ಗಳು ಉದ್ಭವಿಸುತ್ತಿರುವುದನ್ನು ಗಮನಿಸಿದೆ. ಎಡಗಡೆಯ ರಸ್ತೆಯಿಂದ ಕೆಳಗೆ ನೋಡಿದರೆ ದೂರದಲ್ಲಿ ಸುಂದರವಾದ ಹಸಿರಿನ ಗೋಧಿ ತೆನೆಗಳೊಂದಿಗಿನ ಗದ್ದೆಗಳು ಕಾಣಿಸಿತ್ತಿತ್ತು. ಹತ್ತಿರದಲ್ಲಿ ಕೆಳಗಡೆ ಹಳ್ಳಿಗರು ವಾಸಿಸುವ ಮನೆಗಳು, ದೂರದಲ್ಲಿ ಒಂದು ಶಾಲೆಯು ಗೋಚರಿಸುತ್ತಿತ್ತು. ಉತ್ತರದಿಕ್ಕಿನಲ್ಲಿ ಹಿಮಾವೃತ ಕೆಲವು ಶಿಖರಗಳು ಗೋಚರಿಸುತ್ತಿತ್ತು. ಪಶ್ಚಿಮದಿಕ್ಕಿನಲ್ಲಿ ದೂರದ ಬೆಟ್ಟಗಳ ಹಿಂದಿನಿಂದ ಸೂರ್ಯನ ಕಿರಣಗಳು ತೂರಿ ಬರುತ್ತಿದ್ದ ಸುಂದರ ದೃಶ್ಯಗಳು ನೋಡಲು ಅಂದವಾಗಿತ್ತು. 
 
ಕಡೆಗೆ ನಮ್ಮ ವಾಹನವು ಒಂದು ಸಣ್ಣ ಹೊಟೇಲಿನಬಳಿ ನಿಂತಾಗ ನಾವುಗಳು ಇಲ್ಲೇ ಇಳಿಯಬೇಕೆಂದು ಭಾಸವಾಯಿತು. ಅದರಂತೆ ಇಳಿದು ನಮ್ಮ ಜೊತೆ ತಂದಿದ್ದ ಎಲ್ಲ ಸಾಮಾನುಗಳನ್ನು ಇಳಿಸಿಕೊಂಡೆವು. ಅನಂತರ IH ಸಂಸ್ಥೆಯ ಒಬ್ಬ ಸದಸ್ಯನು ನಮಗೆ ಇಳಿದುಕೊಳ್ಳಲು ಕೋಣೆಗಳನ್ನು ತೋರಿಸಿದನು. ಸ್ವಲ್ಪ ಸಮಯದಲ್ಲಿ ನಮಗೆಲ್ಲರಿಗೂ ಸ್ವಾಗತ ಚಹಾವನ್ನು ನೀಡಲಾಯಿತು. ಅನಂತರ ಸಂಜೆಯಾಗುತ್ತಿದ್ದಂತೆ ಚಳಿಯು ಶುರುವಾಯಿತು. ಎಲ್ಲರೂ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಚಾರಣದ ನಾಯಕನಾದ ಶ್ರೀಮಾನ್ ವೆಂಕಟ್ ಅವರಬಳಿ ತೆರಳಿ ನಮ್ಮ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಲು ನೀಡಿದೆವು. ಸುಮಾರು ಅರ್ಧ ಘಂಟೆಯ ನಂತರ ಎಲ್ಲರೂ ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಂಡರು. ನಾವುಗಳು ಒಟ್ಟು ೨೩ ಚಾರಣಿಗರಿದ್ದೆವು. ಅದರಲ್ಲಿ ಬಹಳ ಚಾರಣಿಗರು ಹಿಮಾಲಯ ಚಾರಣಕ್ಕೆ ಮೊದಲ ಬಾರಿ ಬಂದಿದ್ದವರು. ನಂತರ ಚಾರಣದ ನಾಯಕ, ಮಾರ್ಗದರ್ಶಕ ಹಾಗೂ ಮತ್ತೊಬ್ಬ ನಾಯಕ ಶ್ರೀಮಾನ್ ದುಷ್ಯoತ್ ಎಲ್ಲರನ್ನೂ ಉದ್ದೇಶಿಸಿ ಚಾರಣದ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿದರು. ಅದರಲ್ಲಿ ಚಾರಣಿಗರು ಹೇಗೆ ಚಾರಣ ಮಾಡಬೇಕು, ಮಾರ್ಗಗಳನ್ನು ಹೇಗೆ ಕಸಮುಕ್ತವಾಗಿ ಇರುವಂತೆ ನೋಡಿಕೊಳ್ಳಬೇಕು, ಬಿಡಾರದಲ್ಲಿ ಹೇಗೆ ವಾಸಿಸಬೇಕು, ಶೌಚಾಲಯಗಳನ್ನು ಹೇಗೆ ಉಪಯೋಗಿಸಬೇಕು ಇತ್ಯಾದಿ ವಿಷಯಗಳು ಚರ್ಚೆಯಲ್ಲಿ ಬಂದು ಹೋದವು. ಅನಂತರ ಮಾರನೇ ದಿನದ ಚಾರಣದ ಬಗ್ಗೆ ಮಾಹಿತಿಯನ್ನು ಎಲ್ಲರಿಗೂ ವೆಂಕಟ್ ಅವರು ನೀಡಿದರು. ರಾತ್ರೆಯ ಔತಣವು ರುಚಿಯಾಗಿತ್ತು. ಎಲ್ಲರೂ ಊಟವನ್ನು ಮುಗಿಸಿ ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಳಲು ಮಲಗಿದೆವು.
ಮಾರನೇದಿನದ ಅಂದರೆ ಮೊದಲಿನ ದಿನದ ಚಾರಣವು ಕೇವಲ ೨.೫ ಕಿ.ಮೀ ಮಾತ್ರವಾಗಿದ್ದದ್ದರಿಂದ ವೆಂಕಟ್ ಅವರು ನಮಗೆ ಬೆಳಗ್ಗೆ ೭ ಕ್ಕೆ ಚಹಾ, ೮ ಕ್ಕೆ ಬೆಳಗಿನ ಉಪಹಾರ ಹಾಗೂ ೯ ಕ್ಕೆ ಚಾರಣವನ್ನು ಪ್ರಾರಂಭಿಸುವುದೆಂದು ಮೊದಲೇ ತಿಳಿಸಿದ್ದರು. ನಾನು ಬೆಳಗ್ಗೆ ೬ ಕ್ಕೆ ಎದ್ದು ಸೂರ್ಯೋದಯವನ್ನು ವೀಕ್ಷಿಸಲು ಹೊರಗೆ ಬಂದೆ. ಸ್ವಲ್ಪ ದೂರ ನಡೆದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಬೆಳಗಿನ ಚಳಿಯಲ್ಲಿ ಸುಮಾರು ಒಂದು ಕಿ.ಮೀ ದೂರ ನಡೆದೆ. ಅನಂತರ ಮರಳಿ ಬಂದು ಚಹಾ ಸೇವಿಸಿ ರಮೇಶ್, ವಿಜಯಕುಮಾರ ಹಾಗೂ ಚಂದ್ರು ಅವರನ್ನು ಕೂಡಿ ರಸ್ತೆಯಿಂದ ಕೆಳಗೆ ಇಳಿದುಹೋಗಿ ದೂರದಲ್ಲಿರುವ ಹಸಿರು ಗದ್ದೆಯ ನಡುವೆ ಇರುವ ಶಾಲೆಯ ಬಳಿಗೆ ಹೋಗಿ ಸ್ವಲ್ಪ ಹೊತ್ತು ಅಲ್ಲಿಂದ ಪ್ರಕೃತಿ ಸೌಂದರ್ಯವನ್ನು ಸವಿದು ಮರಳಿ ಬಿಡಾರದೆಡೆಗೆ ಬಂದೆವು. .
ನಂತರ ಬೆಳಗಿನ ಉಪಹಾರವನ್ನು ಸೇವಿಸಿ ನಮ್ಮ ಹೆಗಲು ಚೀಲವನ್ನು ವೆಂಕಟ್ ಅವರ ವಶಕ್ಕೆ ಕೊಟ್ಟು ೯.೨೦ಕ್ಕೆ ಎಲ್ಲರೂ ಚಾರಣವನ್ನು ಪ್ರಾರಂಭಿಸಿದೆವು. ಮೊದಲಿಗೆ ಸ್ವಲ್ಪ ದೂರ ರಸ್ತೆಯಲ್ಲಿ ನಡೆದು ನಂತರ ಬಲಕ್ಕೆ ತಿರುಗಿ ಒಂದು ಬೆಟ್ಟವನ್ನು ಹತ್ತಲು ಶುರುಮಾಡಿದೆವು. ಎಲ್ಲರೂ ಮೇಲೆ ನಡೆಯುತ್ತಿದ್ದಾಗ ವಿಜಯಕುಮಾರನು ಮಾತ್ರ ಸ್ವಲ್ಪ ಮೆಟ್ಟಲುಗಳನ್ನು ಹತ್ತಿ ಅಲ್ಲೇ ನಿಂತಿದ್ದನು. ನಮಗೆ ಸ್ವಲ್ಪ ಆಶ್ಚರ್ಯವಾಯಿತು. ನಂತರ ವೆಂಕಟ್ ಅವರನ್ನು ವಿಚಾರಿಸಿದಾಗ ತಿಳಿದು ಬಂದಿದ್ದೇನೆಂದರೆ ವಿಜಯಕುಮಾರನು ಚಾರಣ ಮಾಡಲು ಆಗುವುದಿಲ್ಲವೆಂದು ಮರಳಿ ಹೋಟೆಲಿಗಿ ಹೋಗುವುದಾಗ ಹೇಳಿದನೆಂದು. ಇದು ನಮಗೆ ಒಂದು ವಿಷಾದನೀಯ ಸಂಗತಿಯಾಗಿತ್ತು. ನಮ್ಮ ಗುಂಪಿನ ಪ್ರಥಮ ಚಾರಣಿಗನು ಮರಳಿದ್ದು ನನಗೆ ಬಹಳ ನಿರಾಶೆಯಾಯಿತು. ಆದರೆ ಒಂದು ಸಂತೋಷದ ಸಂಗತಿಯೇನೆಂದರೆ ಮೊದಲಬಾರಿಗೆ ಚಾರಣ ಮಾಡಲು ಬಂದಿರುವ ಚಂದ್ರು ಅವರು ಸಂತೋಷದಿಂದ ಚಾರಣ ಮಾಡುತ್ತಿರುವುದು. ಉಳಿದ ಚಾರಣಿಗರಾದ ರಮೇಶ್, ಆಚಾರ್ಯ, ವೆಂಕಟಸುಬ್ಬಯ್ಯ ಹಾಗೂ ಮುನಿಶಂಕರಪ್ಪ ಅವರುಗಳಿಗೆ ಚಾರಣಮಾಡಿದ ಅನುಭವವಿತ್ತು. ಅಲ್ಲಲ್ಲೇ ವಿಶ್ರಾoತಿಯನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ನಡೆದು ಮೇಲಿನ ಒಂದು ಹುಲ್ಲುಗಾವಲನ್ನು ತಲುಪಿದೆವು. ದಾರಿಯುದ್ದಕ್ಕೂ ನಮಗೆ ನೀರನ್ನು ಕುಡಿಯಿರೆಂದು ವೆಂಕಟ್ ಅವರು ಸೂಚನೆ ಕೊಡುತ್ತಿದ್ದರು. ಮಾರ್ಗದಲ್ಲಿ ನಮಗೆ ಮೊತ್ತ ಮೊದಲಿಗೆ ಕೆಂಪು ಬಣ್ಣದ Rhododendron ಹೂವುಗಳಿಂದ ಕೂಡಿದ ಗಿಡಗಳು ಹಾಗೂ ಮೇಪಲ್ ವೃಕ್ಷಗಳು ನೋಡಲು ಸಿಕ್ಕಿತು. ದಾರಿಯಲ್ಲಿ ನಾವುಗಳು ಚೌಖಂಬಾ ಪರ್ವತವನ್ನು ವೀಕ್ಷಿಸಿದೆವು. ಮಧ್ಯಾನ್ಹ ೧.೩೦ಕ್ಕೆ ನಿಧಾನವಾಗಿ ನಡೆದು ದೇವಾರಿಯಾ ಸರೋವರದ ಬಿಡಾರವನ್ನು ತಲುಪಿದೆವು. ಹವಾಗುಣವು ಅತ್ಯಂತ ಹಿತಕರವಾಗಿತ್ತು. ಸರೋವರವು ಶುಭ್ರವಾದ ನೀರಿನಿಂದ ಕಂಗೊಳಿಸುತ್ತಿತ್ತು. ಸರೋವರದ ಬಲಗಡೆ ದಟ್ಟವಾದ ಮರಗಳಿಂದ ಕೂಡಿತ್ತು. ಸರೋವರದ ಎದುರಿಗೆ ನಮಗೆ ಚೌಖಂಬ ಪರ್ವತವು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಎಲ್ಲರೂ ಅನೇಕ ಫೋಟೋಗಳನ್ನು ತೆಗೆದುಕೊಂಡರು. ಬಿಸಿ ಬಿಸಿಯಾದ ಊಟವನ್ನು ಮಾಡಿ ಸ್ವಲ್ಪ ಹೊತ್ತಿನ ಸುಧಾರಿಸಿಕೊಂಡನಂತರ ನಾನು, ಚಂದ್ರು, ರಮೇಶ್, ಆಚಾರ್ಯ, ಮುನಿಶಂಕರಪ್ಪ, ವೆಂಕಟಸುಬ್ಬಯ್ಯ ಹಾಗೂ ಬರೋಡಾದಿಂದ ಬಂದು ನಮ್ಮೊಡನಿದ್ದ ಜಯಂತ್ ಎಲ್ಲರನ್ನೂ ಸರೋವರವನ್ನು ಒಂದು ಸುತ್ತು ಹಾಕಲು ಹೊರಟೆವು. ಎಲ್ಲರೂ ನಿಧಾನವಾಗಿ ಸರೋವರದ ಸುತ್ತಾ ನಡೆಯುತ್ತಾ ಫೋಟೋಗಳನ್ನು ತೆಗೆಯುತ್ತಾ ಇದ್ದಾಗ ಒಂದು ಭಾಗದಲ್ಲಿ ಸ್ವಲ್ಪ ಹಿಮವು ಇರುವುದು ಗೋಚರವಾಯಿತು. ಅದರ ಬಳಿ ಹೋಗಿ ಹಿಮವನ್ನು ಚಂಡಿನಾಕಾರದಲ್ಲಿ ಹಿಡಿದು ಪರಸ್ಪರ ಎಸೆಯುತ್ತಾ ಸ್ವಲ್ಪ ಸಮಯ ಸಂತೋಷದಿಂದ ಆಡಿದೆವು.
ಸಂಜೆಯಾಗುತ್ತಿದ್ದಂತೆ ವೆಂಕಟ್ ಅವರು ನಮ್ಮನ್ನೆಲ್ಲಾ ಸರೋವರದ ಪಕ್ಕದಿಂದ ಸ್ವಲ್ಪ ಮೇಲೆ ಹತ್ತಿ ಒಂದು ವೀಕ್ಷಣಾ ಸ್ಥಳಕ್ಕೆ ಕರೆದ್ದೊಯ್ದರು. ವೀಕ್ಷಣಾ ಸ್ಥಳವು ಸುಂದರವಾದ ಜಾಗ ಹಾಗೂ ಅಲ್ಲಿಂದ ದೂರದ ಚೌಖಂಬಾ ಹಿಮ ಶಿಖರಗಳು ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲಿಂದ ಎಲ್ಲರೂ ಫೋಟೋಗಳನ್ನು ತೆಗೆದುಕೊಂಡು ಶಿಬಿರದೆಡೆಗೆ ಹೊರಟೆವು.
ಇಳಿದು ಬರುವಾಗ ರಮೇಶ್ ಅವರು ತಮ್ಮ ಕನ್ನಡಕವನ್ನು ಎಲ್ಲೋ ಬೀಳಿಸಿಕೊಂಡರು. ಶಿಬಿರಕ್ಕೆ ಬಂದ ನಂತರ ವೆಂಕಟ್ ಅವರು ಎಲ್ಲರ ರಕ್ತದೊತ್ತಡವನ್ನು ಪರೀಕ್ಷಿಸಿದರು. ಶ್ರೀಮಾನ್ ಜಯಂತ್, ರಮೇಶ್ ಹಾಗೂ ಆಚಾರ್ಯ ಅವರ ರಕ್ತದೊತ್ತಡವು ೧೬೦ಕ್ಕಿಂತ ಹೆಚ್ಚಾಗಿತ್ತು. ವೆಂಕಟ್ ಅವರು ಇದನ್ನು ನನ್ನ ಬಳಿ ತಿಳಿಸಿ ರಕ್ತದೊತ್ತಡವು ೧೬೦ಕ್ಕಿಂತ ಹೆಚ್ಚಾಗಿರುವುದರಿಂದ ಅವರನ್ನು ಮರಳಿ ಮೂಲ ಶಿಬಿರಕ್ಕೆ ಕಳುಹಿಸಬೇಕಾಗುತ್ತದೆಂದು ತಿಳಿಸಿದರು. ಇದನ್ನು ಮೂವರಿಗೂ ತಿಳಿಸಿದ್ದರು. ರಾತ್ರೆ ಊಟದ ನಂತರ ವೆಂಕಟ್ ಅವರು ಮಾರನೇ ದಿನದ ಚಾರಣದ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಎಲ್ಲರೂ ಬಿಡಾರದೊಳಗೆ ಹೋಗಿ ಮಲಗಿ ಕೊಂಡೆವು.
ವೆಂಕಟ್ ಅವರು ತಿಳಿಸಿದ ಪ್ರಕಾರ ಎರಡನೇ ದಿನದ ಚಾರಣವು ೧೪ ಕಿ.ಮೀ ದೂರದ ಚೋಪ್ಟಾ ಶಿಬಿರದೆಡೆಗೆ. ಇದು ಅತಿ ದೀರ್ಘ ಪ್ರಯಾಣ. ಎರಡನೇ ದಿನ ಬೆಳಗಿನ ಚಹಾ ಸೇವಿಸಿದ ನಂತರ ವೆಂಕಟ್ ಅವರು ಎಲ್ಲರ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ, ನಾಡಿ ಬಡಿತದ ವೇಗವನ್ನು ಆಕ್ಸಿಮೀಟರ ಮೂಲಕ ಪರಿಶೀಲಿಸಿ ಹಾಗೂ ಅದರೊಡನೆ ರಕ್ತದೊತ್ತಡವನ್ನೂ (BP) ಪರೀಕ್ಷಿಸಿದರು.
ಎಲ್ಲರೂ ತಮ್ಮ ತಮ್ಮ ನೀರಿನ ಬಾಟಲಿಗಳಲ್ಲಿ ಸಾಕಷ್ಟು ನೀರನ್ನು ಶೇಖರಿಸಿಕೊಂಡು ಊಟದ ಡಬ್ಬಿಯಲ್ಲಿ ಪಲಾವ್ ನ್ನು ತುಂಬಿಕೊಂಡು ಚಾರಣವನ್ನು ಪ್ರಾರಂಭಿಸಿದೆವು. ದೇವರಿಯಾ ಸರೋವರ - ಚಂದ್ರಶಿಲಾ ಚಾರಣದಲ್ಲಿ ಹಿಂದಿನ ವರ್ಷಗಳಲ್ಲಿ ದೇವಾರಿಯಾ ಸರೋವರದಿಂದ ೭ ಕಿ.ಮೀ ಚಾರಣ ಮಾಡಿದ ನಂತರ ರೋಹಿಣಿ ಹುಲ್ಲುಗಾವಲಿನಲ್ಲಿ ಬಿಡಾರ ಹೂಡಲು ಅವಕಾಶವಿತ್ತು. ಈ ಬಿಡಾರವು ಅತ್ಯಂತ ಸುಂದರವಾದ ಹುಲ್ಲುಗಾವಲಿನಲ್ಲಿ ಇತ್ತು. ಆದರೆ ಈ ಸಂವತ್ಸರದಲ್ಲಿ ಇಲ್ಲಿ ಬಿಡಾರವನ್ನು ಹೂಡಲು ಅರಣ್ಯ ಇಲಾಖೆಯವರು ಅನುಮತಿ ನೀಡದೇ ಇರುವ ಕಾರಣದಿಂದ ನಾವುಗಳು ರೋಹಿಣಿ ಹುಲ್ಲುಗಾವಲು ಮುಖಾಂತರ ಇನ್ನೂ ೭ ಕಿ.ಮೀ ಕ್ರಮಿಸಬೇಕಿತ್ತು. ಮೊದಲ ಒಂದು ಕಿ.ಮೀ ಸಮತಟ್ಟಾದ ಹುಲ್ಲುಗಾವಲಿನಲ್ಲಿ ನಡೆದೆವು. ನಾನು ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದೆ. ಮಧ್ಯದಲ್ಲಿ ಚಂದ್ರು, ವೆಂಕಟಸುಬ್ಬಯ್ಯ ಮತ್ತು ಮುನಿಶಂಕರಪ್ಪನವರು ಬರುತ್ತಿದ್ದರು. ದಾರಿಯುದ್ದಕ್ಕೂ ಚೌಖಂಬಾ, ಕೇದಾರ ಶಿಖರಗಳು ಅತಿ ಸುಂದರವಾಗಿ ಕಾಣಿಸುತ್ತಿದ್ದವು.
ಸ್ವಲ್ಪ ಸಮಯದನಂತರ ದಾರಿಯ ಇಕ್ಕೆಲಗಳಲ್ಲೂ ಕೆಂಪು ಬಣ್ಣದ Rhododendron ಹೂವುಗಳನ್ನೊಳಗೊಂಡ ಗಿಡಗಳು ಪ್ರಾರಂಭವಾದವು. ಅಲ್ಲದೇ ಮಾರ್ಗಮಧ್ಯದಲ್ಲೆ ಕೆಂಪು ಹೂವುಗಳು ನೆಲದ ಮೇಲೆ ಚೆಲ್ಲಿ ದಾರಿಯು ಕೆಂಪಾಗಿ ಸುಂದರವಾಗಿ ಕಾಣಿಸುತ್ತಿದ್ದವು. ಹದಿನೈದು ನಿಮಿಷದ ನಡಿಗೆಯ ನಂತರ ಚಂದ್ರಶಿಲಾ ಶಿಖರವು ಗೋಚರಿಸತೊಡಗಿತು ಹಾಗೂ ಮೇಲಿನಿಂದ ಕೆಳಗೆ ನೋಡಿದಾಗ ದೂರದಲ್ಲಿ ಸಾರಿ ಹಳ್ಳಿಯು ಗೋಚರಿಸುತ್ತಿತ್ತು.
ಸ್ವಲ್ಪ ದೂರ ನಡೆದ ಮೇಲೆ ಹಾದಿಯ ಎಡಗಡೆ ಒಂದು ದಿಬ್ಬವು ಕಾಣಿಸಿತು. ಅದರ ತುದಿಯಲ್ಲಿ ಒಂದು ಜಾಡು ಕಾಣಿಸಿತು. ಮಾರ್ಗದರ್ಶಕನನ್ನು ಆ ಜಾಡು ಎಲ್ಲಿಗೆ ಕರೆದುಕೊಂಡು ಹೋಗುತ್ತದೆಂದು ವಿಚಾರಿಸಿದಾಗ ತಿಳಿದುಬಂದದ್ದೆಂದರೆ ಅದು ಮಧ್ಮಹೇಶ್ವರ ಮಂದಿರಕ್ಕೆ ಹಾಗೂ ನಂದಿ ಕುಂಡಕ್ಕೆ ಹೋಗುವ ಹಾದಿ ಎಂದು. ಮಧ್ಮಹೇಶ್ವರ ಮಂದಿರವು ಪಂಚ ಕೇದಾರಗಳಲ್ಲೊಂದು. ಇಲ್ಲಿಂದ ತೀವ್ರ ಆರೋಹಣವು ನಮಗೆದುರಾಯಿತು. ಸುಮಾರು ೩೦ ನಿಮಿಷಗಳ ಆರೋಹಣದ ನಂತರ Jhandidhar (ಒಂದು ಬಾವುಟವನ್ನು ನೆಟ್ಟಿರುವ ಎತ್ತರದ ಪ್ರದೇಶ) ನ್ನು ತಲುಪಿದೆವು.
ಅಷ್ಟರಲ್ಲಿ ಎಲ್ಲರಿಗೂ ತೀವ್ರ ಆಯಾಸವಾಗಿತ್ತು. ಅಲ್ಲೇ ಸ್ವಲ್ಪ ಹೊತ್ತು ಕುಳಿತು ಹಸಿವನ್ನು ತಡೆಯಲಾರದೇ ಜೊತೆಗೆ ತಂದಿದ್ದ ಬುತ್ತಿಯನ್ನು ಅಲ್ಲೇ ಕೆಲವರು ತಿಂದರು. ಅಲ್ಲಿಂದ ಚೋಪ್ತಾದ ಅರಣ್ಯವನ್ನು ಪ್ರವೇಶಿಸಿ ಸುತ್ತಾ ಗುಲಾಬಿ ಬಣ್ಣದ Rhododendron ವೃಕ್ಷಗಳ ನಡುವೆ ಇಳಿಯುತ್ತಾ ಬಹಳ ದೂರ ನಡೆದು ಒಂದು ಘಂಟೆ ನಂತರ ಕೆಂಪುಬಣ್ಣದ Rhododendron ಹೂವುಗಳನ್ನೊಳಗೊಂಡ ಕೇದಾರನಾಥ ಅಭಯಾರಣ್ಯವನ್ನು ಪ್ರವೇಶಿಸಿದೆವು.
ಈ ಅರಣ್ಯಪ್ರದೇಶದೊಳಗೆ ಸುಮಾರು ೧.೩೦ ಘಂಟೆಗಳಷ್ಟು ನಡೆದ ಮೇಲೆ ರೋಹಿಣಿ ಹುಲ್ಲುಗಾವಲು ಎದುರಾಯಿತು. ಇಲ್ಲಿ ಸುಮಾರು ೩೦ ನಿಮಿಷಗಳಷ್ಟು ಹೊತ್ತು ಕುಳಿತಿದ್ದು ಆಯಾಸವನ್ನು ಪರಿಹರಿಸಿಕೊಂಡೆವು. ಇಲ್ಲಿ ಮತ್ತಷ್ಟು ಚಾರಣಿಗರು ಸೇಬನ್ನು ತಿಂದು ನೀರು ಕುಡಿದರು. ಇಷ್ಟು ಹೊತ್ತಿಗೆ ಎಲ್ಲರ ಬಳಿಯೂ ನೀರು ಖಾಲಿಯಾಗತೊಡಗಿತು. ಇಲ್ಲಿಂದ ೪೫ ನಿಮಿಷ ನಡೆದರೆ ನಮಗೆ ಒಂದು ದಿಬ್ಬವು ಎದುರಾಗುತ್ತದೆ. ಅದರ ಹೆಸರು ತಿಕಡಿ ಖಾಲ್ ಎಂದು. ಅದನ್ನು ಹತ್ತಿದರೆ ನಮಗೆ ಎರಡು ಮಾರ್ಗಗಳು ಎದುರಾಗುತ್ತವೆ. ಅವುಗಳಲ್ಲಿ ಒಂದು ಮಾರ್ಗವು ಬಿಸುರಿತಾಲ್, ಕಾಲ ಪರ್ವತ ಹಾಗು ನಂದಿ ಕುಂಡ್ ಕಡೆಗೆ ಹೋಗುತ್ತದೆ ಹಾಗೂ ಎರಡನೇ ಮಾರ್ಗವು ತೀವ್ರ ಇಳಿಜಾರಿನದ್ದಾಗಿದ್ದು ಇದು ಚಂದ್ರಶಿಲಾ ಪರ್ವತದಿಂದ ಹುಟ್ಟಿ ಹರಿದುಬರುವ ಆಕಾಶ ಕಾಮಿನಿ ನದಿಯೆಡೆಗೆ ಕರೆದುಕೊಂಡುಹೋಗುತ್ತದೆ. ನಾವುಗಳು ಅದರಂತೆ ನಡೆದು ತಿಕಡಿ ಖಾಲ್ ಪ್ರದೇಶವನ್ನು ತಲುಪಿದೆವು. ಇಲ್ಲಿಂದ ಜಾಡು ತೀವ್ರ ಇಳಿಜಾರಿನಿಂದ ಕೂಡಿತ್ತು. ಮತ್ತೆ ಅರ್ಧ ಘಂಟೆ ನಡೆದ ಮೇಲೆ ಆಕಾಶ ಕಾಮಿನಿ ತೊರೆಯು ಹರಿದು ಹೋಗುತ್ತಿರುವ ಪ್ರದೇಶವನ್ನು ತಲುಪಿದೆವು. ಇದು ಅತ್ಯಂತ ಪ್ರಶಸ್ತವಾದ ಪ್ರದೇಶ ಹಾಗೂ ಮರದ ನೆರಳಿನಿಂದ ತಂಪಾಗಿತ್ತು. ಇಲ್ಲಿ ನಾನು, ಚಂದ್ರು, ವೆಂಕಟಸುಬ್ಬಯ್ಯ ಹಾಗೂ ಮುನಿಶಂಕರಪ್ಪ ಅವರು ನಾವು ತಂದಿದ್ದ ಡಬ್ಬಿಯಲ್ಲಿದ್ದ ಪಲಾವ್ ನ್ನು ತಿಂದೆವು. ಅರ್ಧ ಘಂಟೆ ವಿಶ್ರಾoತಿಯ ನಂತರ ಮುಂದಿನ ಮಾರ್ಗವು ಅತ್ಯಂತ ಕಠಿಣ ಹಾಗೂ ತೀವ್ರ ಆರೋಹಣದಿಂದ ಕೂಡಿ ಒಂದು ಘಂಟೆಗಿಂತ ಹೆಚ್ಚಿಗೆ ನಡೆಯಬೇಕಿತ್ತು. ನಾವು ನಾಲ್ಕು ಗೆಳೆಯರೂ ಮೊದಲಿಗೆ ನಡೆಯಲು ಪ್ರಾರಂಭಿಸಿದೆವು. ಸ್ವಲ್ಪ ನಡೆಯುವುದರಲ್ಲೇ ಏದುಸಿರು ಬರತೊಡಗಿತು. ಆದರೂ ಮೇಲೇರತೊಡಗಿದೆವು. ಮಾರ್ಗ ಮಧ್ಯದಲ್ಲಿ ಅನೇಕ ಕಡೆ ನಮ್ಮ ಹಾದಿಯು ಹಿಮದಿಂದ ಕೂಡಿತ್ತು. ಚಂದ್ರು ಅವರಿಗೆ ಇದು ಮೊದಲನೇ ಬಾರಿ ಹಿಮದ ಮೇಲೆ ನಡೆಯುತ್ತಿರುವ ಅನುಭವ. ಅವರು ವೆಂಕಟಸುಬ್ಬಯ್ಯ ಅವರೊಂದಿಗೆ ನಿಧಾನವಾಗಿ ನಡೆದು ಬರುತ್ತಿದ್ದರೆ ನಾನು ಹಾಗೂ ಮುನಿಶಂಕರಪ್ಪ ಮುಂದೆ ನಡೆಯುತ್ತಿದ್ದೆವು.
ಸುಮಾರು ಒಂದು ಘಂಟೆಗಳ ದೀರ್ಘ ನಡಿಗೆಯನಂತರ ಇದ್ದಕ್ಕಿದ್ದಂತೆ ಒಂದು ರಸ್ತೆಯು ಎದುರಾಯಿತು. ಆ ರಸ್ತೆಯು ಚೋಪ್ತಾದೆಡೆಗೆ ಹೋಗುವುದೆಂದು ತಿಳಿಯಿತು. ಅಲ್ಲಿಂದ ಸ್ವಲ್ಪ ದೂರ ರಸ್ತೆಯಲ್ಲಿ ನಾವು ನಾಲ್ಕೂ ಗೆಳೆಯರು ನಿಧಾನವಾಗಿ ನಡೆದು ದಾರಿಯ ಬದಿಯಲ್ಲಿನ ಒಂದು ಚಹಾ ಅಂಗಡಿಯನ್ನು ತಲುಪಿದೆವು. ಎಲ್ಲರೂ ಚಹಾ ಸೇವಿಸಿ ಅಲ್ಲಿಂದ ಒಂದೂವರೆ ಕಿ.ಮೀ ದೂರದ ಮಾರ್ಗವನ್ನು ರಸ್ತೆಯಲ್ಲಿ ನಡೆಯುತ್ತಾ ಹೋದೆವು. ಅಲ್ಲಿಂದ ಬಲಕ್ಕೆ ಹೊರಳಿ ಮೆಟ್ಟಲುಗಳನ್ನು ಇಳಿದು ನಂತರ ಹಿಮದಿಂದಾವೃತವಾದ ನಮ್ಮ ಶಿಬಿರಗಳನ್ನು ಕೆಳಗೆ ನೋಡಿ ಅಲ್ಲಿಗೆ ನಿಧಾನವಾಗಿ ಇಳಿದುಕೊಂಡು ಹೋದೆವು.
ಸ್ವಲ್ಪ ವಿಶ್ರಾoತಿಯ ನಂತರ ಎಲ್ಲರೂ ಹೊರಬಂದು ಬಿಡಾರದ ಸುತ್ತ ಓಡಾಡಿ ನಂತರ ಸಂಜೆಯ ಚಹಾವನ್ನು ಸೇವಿಸಿದೆವು. ಸುತ್ತಲೂ ಪ್ರಕೃತಿಯು ಅತ್ಯಂತ ಸುಂದರವಾಗಿ ಹಸಿರು ಮರಗಳು, ದೂರದ ಬೆಟ್ಟಗಳು ಹಾಗೂ ಹಿಮದಿಂದಾವೃತವಾದ ಸುತ್ತಲಿನ ಪರಿಸರವು ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು.
ರಾತ್ರೆ ಒಂಬತ್ತು ಘಂಟೆಗೆ ನಮಗೆ ತಿಳಿದುಬಂದ್ದಿದ್ದೇನೆಂದರೆ ಸೂರತ್ ನಿಂದ ಚಾರಣಕ್ಕೆ ಬಂದಿದ್ದ ೭ ಚಾರಣಿಗರ ಪೈಕಿ ಇಬ್ಬರ ಆರೋಗ್ಯವು ಬಿಗಡಾಯಿಸಿದುದರಿಂದ ಅವರನ್ನು ಮರಳಿ ಊಖಿಮಠದೆಡೆಗೆ ಕಳುಹಿಸಲು ವೆಂಕಟ್ ಅವರು ತೀರ್ಮಾನಿಸಿದ್ದರು. ಅನಂತರ ನಮಗೆ ತಿಳಿದುಬಂದಿದ್ದೇನೆಂದರೆ ಆ ಚಾರಣಿಗರಿಗೆ ಆಕಾಶ ಕಾಮಿನಿಯಿಂದ ಬೆಟ್ಟವನ್ನು ಹತ್ತುವ ಸಮಯದಲ್ಲೇ ವಿಪರೀತ ಆಯಾಸವಾಗಿ ಉಸಿರಾಟದಲ್ಲಿ ತೀವ್ರ ಏರು ಪೇರಾಯಿತು. ಅವರನ್ನು ಕರೆತರಲು ವೆಂಕಟ್ ಅವರು ಎಲ್ಲರನ್ನೂ ಬಿಟ್ಟು ತಾವೊಬ್ಬರೇ ಸುಮಾರು ಎರಡು ಘಂಟೆಗಳ ಕಾಲ ಶ್ರಮ ಪಡಬೇಕಾಯಿತು. ಸಂಜೆಯಾಗುತ್ತಿದ್ದಂತೆ ಆ ಚಾರಣಿಗರ ಆರೋಗ್ಯವು ವಿಷಮಸ್ಥಿತಿಯನ್ನು ತಲುಪಿ, ರಕ್ತದಲ್ಲಿ ಆಮ್ಲಜನಕದ ಮಟ್ಟವು ತೀವ್ರವಾಗಿ ಕುಸಿಯತೊಡಗಿತು ಹಾಗೂ ಉಸಿರಾಟವು ತೀವ್ರ ಕಷ್ಟಕರವಾಗತೊಡಗಿತು. ಬೇರೆ ಮಾರ್ಗವಿಲ್ಲದೇ ಆ ಚಾರಣಿಗರನ್ನು ಚೋಪ್ಪ್ತಾ ದಿಂದ ಊಖಿಮಠಕ್ಕೆ ಕಳುಹಿಸಲಾಯಿತು. ಅನಂತರ ನಮಗೆ ತಿಳಿದುಬಂದ್ದಿದ್ದೇನೆಂದರೆ ಆ ಚಾರಣಿಗರು ಚಾರಣ ಪ್ರಾರಂಭಿಸುವ ಮೊದಲಿಗೆ ಯಾವುದೇ ಶಾರೀರಿಕ ತಯಾರಿಯನ್ನು ಮಾಡಿಕೊಂಡಿರಲಿಲ್ಲವೆಂದು ಹಾಗೂ ಶಾರೀರಿಕ ತಯಾರಿಯಬಗ್ಗೆ ಸಂಸ್ಥೆಯವರು ಕೇಳಿದ್ದ ಪುರಾವೆಯನ್ನು ಬೇರೊಬ್ಬರ ದಾಖಲೆಯನ್ನು ತಮ್ಮದೆಂದೇ ವಾಟ್ಸ್ ಅಪ್ ಮೂಲಕ ಕಳುಹಿಸಿದ್ದರೆಂದು. ಹೀಗೆ ಶಾರೀರಿಕ ತಯಾರಿಯಿಲ್ಲದೆ ಚಾರಣಕ್ಕೆ ಬಂದರೆ ಚಾರಣವನ್ನು ಮುಗಿಸಲು ಅತಿ ಕಷ್ಟಕರವಾಗುತ್ತದೆ.
ಮಾರ್ಚ್ ೨೨ನೇ ತಾರೀಖು ಎತ್ತರದ ಪ್ರದೇಶದಲ್ಲಿನ ಹವೆಗೆ ಒಗ್ಗಿಕೊಳ್ಳಲು ನಿಗದಿಪಡಿಸಲಾಗಿತ್ತು. ಅದರಂತೆ ರಾತ್ರೆ ಆರಾಮವಾಗಿ ನಿದ್ರೆಯನ್ನು ಮಾಡಿ ಬೆಳಗ್ಗೆ ಸಾವಕಾಶವಾಗಿ ಎದ್ದು ಉಪಹಾರವನ್ನು ಸೇವಿಸಿ ಶಿಬಿರದಿಂದ ೩ ಕಿ.ಮೀ ದೂರದ ನಂದಾದೇವಿ ವೀಕ್ಷಣಾ ಸ್ಥಳಕ್ಕೆ ಚಾರಣವನ್ನು ಪ್ರಾರಂಭಿಸಿದೆವು. ಮೊದಲಿಗೆ ಸ್ವಲ್ಪದೂರ ಹಿಮದಲ್ಲಿ ಆರೋಹಣವನ್ನು ಮಾಡಿ ರಸ್ತೆಯನ್ನು ತಲುಪಿ ಅಲ್ಲಿಂದ ಸುತ್ತಲಿನ ಅನೇಕ ವಿಶಿಷ್ಟವಾದ ಗಿಡ ಮರಗಳನ್ನು ವೀಕ್ಷಿಸುತ್ತಾ ಹಾಗೂ ಲೋಕಾಭಿರಾಮವಾಗಿ ಮಾತನಾಡುತ್ತಾ ರಸ್ತೆ ಮಾರ್ಗದಲ್ಲಿ ನಡೆಯತೊಡಗಿದೆವು. ಬರು ಬರುತ್ತಾ ಸೂರ್ಯನ ತಾಪವು ಹೆಚ್ಚಾಗತೊಡಗಿತು. ಸುಮಾರು ಮೂರು ಕಿ.ಮೀ ನಡೆದ ನಂತರ ಇನ್ನೂ ೨ ಕಿ.ಮೀ ದೂರ ಇಳಿಜಾರಿನ ಮಾರ್ಗದಲ್ಲಿ ನಡೆಯಬೇಕಿತ್ತು. ನಾನು ವೆಂಕಟ್ ಅವರಿಗೆ ಇಷ್ಟೇ ಸಾಕೆಂದು ಹಾಗೂ ಮರಳಿ ಬರುವಾಗ ತೀವ್ರ ಆರೋಹಣವಿರುವುದರಿಂದ ಅದು ಎಲ್ಲರಿಗೂ ಕಷ್ಟವಾಗುತ್ತದೆಂದು ತಿಳಿಸಿದೆ. ಅದರಂತೆ ವೆಂಕಟ್ ಅವರು ಎಲ್ಲರನ್ನೂ ಮರಳಿ ಶಿಬಿರದೆಡೆಗೆ ಹೋಗುವಂತೆ ಆದೇಶಿಸಿದರು. ಮಧ್ಯಾನ್ಹ ಊಟದ ಸಮಯಕ್ಕೆ ಎಲ್ಲರೂ ಮರಳಿ ಶಿಬಿರವನ್ನು ಸೇರಿದೆವು. ಊಟವಾದ ನಂತರ ಸ್ವಲ್ಪ ಹೊತ್ತು ವಿಶ್ರಾoತಿಯ ನಂತರ ಸಂಜೆ ೪.೩೦ಕ್ಕೆ ಚಹಾ ಸೇವನೆಯ ನಂತರ ಎಲ್ಲರಿಗೂ Gaiters ಹಾಗೂ Micro Spikes ಗಳನ್ನು ನೀಡಿ ಮಾರ್ಗದರ್ಶಕರು ಅವುಗಳನ್ನು ಹೇಗೆ ಧರಿಸಿಕೊಳ್ಳಬೇಕೆಂದು ತಿಳಿಸಿದರು. ನನಗೆ ಇದು ಹೊಸದೇನಲ್ಲ. ಉಳಿದವರಿಗೆ ಇದು ಮೊದಲಬಾರಿಯಾಗಿತ್ತು. ಅವುಗಳನ್ನು ಧರಿಸಿ ಹಿಮದ ಮೇಲೆ ನಡೆದಾಡಿ, ಮೇಲೆ ಹತ್ತಿ, ಕೆಳಗಿಳಿದು ಅಭ್ಯಾಸವನ್ನು ಎಲ್ಲರೂ ಮಾಡಿಕೊಂಡರು.
೨೩ನೇ ಮಾರ್ಚ್ ನಮ್ಮ ಚಾರಣದ ಕೊನೆಯ ದಿನ. ಅಂದು ಚಂದ್ರಶಿಲಾರೋಹಣ ಮಾಡಬೇಕಾದದ್ದು. ಚಂದ್ರಶಿಲೆಗೆ ಹೋಗಲು ತುಂಗನಾಥ ಮಂದಿರದ ಮೂಲಕ ಹೋಗಬೇಕು. ಮಾರ್ಗವು ತುಂಬಾ ಹಿಮದಿಂದ ಆವೃತವಾಗಿರುತ್ತದೆಂದು ವೆಂಕಟ್ ಅವರು ತಿಳಿಸಿದ್ದರು. ಶಿಬಿರದಿಂದ ತುಂಗನಾಥ ಮಂದಿರವು ೨.೫ ಕಿ.ಮೀ ದೂರದ ಹಿಮಾವೃತ ಮಾರ್ಗ. ಅಲ್ಲಿಂದ ೧.೫ ಕಿ.ಮೀ ಮಾರ್ಗವು ಅತಿ ಹೆಚ್ಚಿನ ಹಿಮದಿಂದ ಕೂಡಿದ ತೀವ್ರ ಆರೋಹಣದ ಮಾರ್ಗ. ಅದರಂತೆ ಅವರು ಸೂರ್ಯೋದಯಕ್ಕೆ ಮುಂಚೆಯೇ ಅಂದರೆ ೪.೩೦ಕ್ಕೆ ಶಿಬಿರದಿಂದ ಹೊರಡಬೇಕೆಂದು ತಿಳಿಸಿದ್ದರು. ಏಕೆಂದರೆ ಆ ಸಮಯದಲ್ಲಿ ಹಿಮವು ಸ್ವಲ್ಪ ಘಟ್ಟಿಯಾಗಿರುವುದರಿಂದ ನಡೆಯುವುದು ಸುಲಭ ಇಲ್ಲದಿದ್ದಲ್ಲಿ ಬಿಸಿಲಿನಲ್ಲಿ ಹಿಮವು ಕರಗಿದರೆ ಮಾರ್ಗವು ತೀವ್ರ ಜಾರುವಿಕೆಯಿಂದ ಕೂಡಿರುತ್ತದೆಂದು. ಅದರಂತೆ ಎಲ್ಲರೂ ಬೆಳಗ್ಗೆ ೩.೦ ಘಂಟೆಗೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ನಾಲ್ಕಕ್ಕೆ ಬೆಳಗಿನ ಉಪಹಾರವನ್ನು ಸೇವಿಸಿ ಜೊತೆಗೆ ಹಣ್ಣು, ಬಿಸ್ಕತ್ ಗಳನ್ನು ಹೆಗಲು ಚೀಲದಲ್ಲಿ ಹಾಕಿಕೊಂಡು ತಲೆ ದೀವಟಿಗೆಗಳನ್ನು (Head torch) ಧರಿಸಿ ಚಾರಣವನ್ನು ಪ್ರಾರಂಭಿಸಿಯೇ ಬಿಟ್ಟರು. ಒಂದು ಘಂಟೆ ಹಿಮದ ಮೇಲೆ ನಡೆದ ಮೇಲೆ ಸ್ವಲ್ಪ ಸ್ವಲ್ಪವಾಗಿ ಬೆಳಗಾಗತೊಡಗಿತು. ದೀವಟಿಗೆಗಳನ್ನು ಆರಿಸಿ ನಂತರ ಹಿಮಾವೃತ ಮಾರ್ಗದಲ್ಲಿ ಬೆಟ್ಟವನ್ನೇರ ತೊಡಗಿದೆವು.
ಸುಮಾರು ೭.೪೫ ಕ್ಕೆ ತುಂಗನಾಥನ ಮಂದಿರದ ಬಳಿಗೆ ಕಷ್ಟಪಟ್ಟು ನಡೆದು ಬಂದೆವು. ಆಗ ವೆಂಕಟ್ ಅವರು ತುಂಗನಾಥ ಮಂದಿರಕ್ಕೆ ಹೋಗಲು ಬಿಡದೇ ನೇರವಾಗಿ ಚಂದ್ರಶಿಲೆಯೆಡೆಗೆ ಆರೋಹಣ ಮಾಡಲು ತಿಳಿಸಿದರು. ಅದರಂತೆ ಚಂದ್ರಶಿಲೆಯೆಡೆಗೆ ಬೆಟ್ಟವನ್ನು ಹತ್ತಲು ತೊಡಗಿದೆವು. ಈ ಮಧ್ಯೆ ಮುನಿಶಂಕರಪ್ಪನವರು ತಂಪು ಕನ್ನಡಕವನ್ನು ತಮ್ಮೊಂದಿಗೆ ತಂದಿಲ್ಲವೆಂಬುದು ಅವರ ಗಮನಕ್ಕೆ ಬಂದಿತು. ೭.೪೫ ರ ಹೊತ್ತಿಗೆ ನಾವು ತುಂಗನಾಥ ಮಂದಿರದೆಡೆಗೆ ಬಂದಾಗ ಬಿಸಿಲು ಚುರುಕಾಗಿತ್ತು ಹಾಗೂ ಹಿಮದ ಮೇಲೆ ಅದರ ಪ್ರತಿಫಲನೆಯು ನಮ್ಮ ಕಣ್ಣುಗಳಿಗೆ ತೊಂದರೆಯನ್ನುಂಟಾಗುವುದರಿಂದ ನಾವುಗಳು ತಂಪು ಕನ್ನಡಕವನ್ನು ಧರಿಸಿ ಚಂದ್ರಶಿಲೆಯೆಡೆಗೆ ಹತ್ತಬೇಕಾಯಿತು. ಮುನಿಶಂಕರಪ್ಪನವರ ಬಳಿ ತಂಪು ಕನ್ನಡಕವಿಲ್ಲದೇ ಇದ್ದ ಕಾರಣದಿಂದ ಅವರನ್ನು ಮುಂದೆ ಹೋಗಲು ವೆಂಕಟ್ ಅವರು ಬಿಡಲಿಲ್ಲ. ಹೀಗಾಗಿ ಮುನಿಶಂಕರಪ್ಪನವರು ತುಂಗನಾಥ ಮಂದಿರದ ಬಳಿಯೇ ಉಳಿದುಕೊಳ್ಳಬೇಕಾಯಿತು.
ಮಾರ್ಗವು ಅತ್ಯಂತ ಕಡಿದಾಗಿ ಪುಡಿ ಪುಡಿಯಾದ ಹಿಮದಿಂದ ಕೂಡಿತ್ತು. ಕಾಲುಗಳು ಹಿಮದೊಳಗೆ ಹೂತುಹೋಗುತ್ತಿತ್ತು. ಕಷ್ಟಪಟ್ಟು ಹತ್ತತೊಡಗಿದೆವು. ಸುಮಾರು ೪೫ ನಿಮಷದ ಏರುವಿಕೆಯು ಅತ್ಯಂತ ಕಷ್ಟದಿಂದ ಕೂಡಿತ್ತು. ಕೆಲವು ಕಡೆ ತಾಂತ್ರಿಕ ಮಾರ್ಗದರ್ಶಕರು ಕೈ ಹಿಡಿದು ಹತ್ತಿಸಿದರು. ನಂತರದ ೧೫ ನಿಮಿಷಗಳ ಮಾರ್ಗವು ಹಿಮದಿಂದ ಕೂಡಿದ್ದರೂ ನಡೆಯುವುದು ಅಷ್ಟೇನೂ ಕಷ್ಟವಾಗಲಿಲ್ಲ. ಕಡೆಗೆ ಸುಮಾರು ೮.೪೫ ಕ್ಕೆ ಶಿಖರವನ್ನು ತಲುಪಿದೆವು. ನಮಗೆಲ್ಲರಿಗೂ ಅತ್ಯಂತ ಸಂತೋಷವಾಗಿತ್ತು. ಚಂದ್ರು ಅವರಿಗೆ ಇದು ಮೊದಲಿನ ಹಿಮಾಲಯದ ಚಾರಣ ಹಾಗೂ ಅದನ್ನು ಯಶಸ್ವಿಯಾಗಿ ಮುಗಿಸಿದ್ದರಿಂದ ಅತ್ಯಂತ ಸಂತೋಷಪಟ್ಟರು. . ಅವರು ಸಾಧ್ಯವಾದರೆ ತುಂಗನಾಥ ಮಂದಿರದವರೆಗೆ ಹತ್ತಿದರೆ ಸಾಕೆಂದು ಆಶಿಸಿದ್ದರು. ಆದರೆ ಅವರನ್ನು ಚಂದ್ರಶಿಲೆಯವರೆಗೂ ಹತ್ತಲೇ ಬೇಕೆಂದು ವೆಂಕಟ್ ಅವರು ಒತ್ತಾಯಿಸಿದ್ದರು. ಹೀಗಾಗಿ ಅವರು ಅಸಾಧ್ಯವೆಂದುಕೊಂಡಿದ್ದನ್ನು ಸಕಾರಾತ್ಮಕ ಚಿoತನೆಯಿಂದ ಹಾಗೂ ಧೃಢಮನಸ್ಸಿನಿಂದ ಸಾಧಿಸಿದರು. ಇದು ನನಗೆ ಅತ್ಯಂತ ಸಂತೋಷವನ್ನು ನೀಡಿತು.
ಶಿಖರದ ತುದಿಯಲ್ಲಿ ಕೆಲವರು ಕೊಟ್ಟ ಸಿಹಿಯನ್ನು ತಿಂದು ನೀರನ್ನು ಕುಡಿದು ಸ್ವಲ ವಿಶ್ರಾoತಿಯ ನಂತರ ತಾಂತ್ರಿಕ ಮಾರ್ಗದರ್ಶಿಯು ಸುತ್ತಲಿನ ಪರ್ವತ ಶಿಖರಗಳ ಪರಿಚಯವನ್ನು ಮಾಡಿಕೊಟ್ಟನು. ಅದರಂತೆ ನಂದಾದೇವಿ, ತ್ರಿಶೂಲ್, ನಂದಗುಂಟಿ, ಕಾಮೆಟ್, ದ್ರೋಣಗಿರಿ, ಚೌಖಂಬಾ, ಕೇದಾರ ಡೂಮ್, ತಲೈಸಾಗರ, ಜಹಾನುಕೂಟ್, ರಾವಣಶಿಲಾ ಹಾಗೂ ಗಂಗೋತ್ರಿ ಪರ್ವತ ಶ್ರೇಣಿಗಳನ್ನು ವೀಕ್ಷಿಸಿದೆವು.
ಸುಮಾರು ೧೦.೧೫ ಘಂಟೆಗೆ ತುಂಗನಾಥ ಮಂದಿರದೆಡೆಗೆ ಇಳಿದು ಹೋಗಲು ವೆಂಕಟ್ ಅವರು ಸೂಚಿಸಿದರು. ನಾನು ಎಲ್ಲರಿಗಿಂತ ಮುಂಚಿತವಾಗಿ ಅಲ್ಲಿಂದ ಇಳಿಯತೊಡಗಿದೆ. ಕೆಲವು ಕಡೆ ಕುಳಿತು ಜಾರುಬಂಡೆಯಲ್ಲಿ ಜಾರುವಂತೆ ಜಾರಿಕೊಂಡು ಇಳಿದರೆ ಕೆಲವೆಡೆ ಇದ್ದುಕೊಂಡು ಬಿದ್ದುಕೊಂಡು ಇಳಿದು ತುಂಗನಾಥನ ಮಂದಿರವನ್ನು ತಲುಪಿದೆ. ಇದೂ ಕೂಡ ವೆಂಕಟಸುಬ್ಬಯ್ಯ ಹಾಗೂ ಚಂದ್ರು ಅವರಿಗೆ ಹೊಸ ಅನುಭವವೇ ಆಗಿತ್ತು. ಈ ಅನುಭವವನ್ನು ಅತ್ಯಂತ ಸಂತೋಷದಿಂದ ಅವರು ಅನುಭವಿಸಿದರು.
- ಸಾಮಾನ್ಯವಾಗಿ ಯಾವುದೇ ಚಾರಣದಲ್ಲೂ ಚಾರಣದ ಗುರಿಯನ್ನು ತಲುಪಿದನಂತರ ಮರಳಿ ಶಿಬಿರದೆಡಗಿನ ಮರು ಪ್ರಯಾಣವು ನೀರಸವಾಗಿರುತ್ತದೆ. ಇಲ್ಲೂ ಕೂಡ ಅದೇರೀತಿಯದಾಗಿತ್ತು. ನಾನು ತುಂಗನಾಥ ಮಂದಿರದಿಂದ ಇಳಿದು ಮೊದಲಿಗೆ ನಡೆಯತೊಡಗಿದೆ. ಹಿಂದೆ ಚಂದ್ರು, ಮುನಿಶಂಕರಪ್ಪ ಹಾಗೂ ವೆಂಕಟಸುಬ್ಬಯ್ಯನವರು ಬರುತ್ತಿದ್ದರು. ಇಳಿಯುವುದು ಕೆಲವು ಕಡೆ ಸ್ವಲ್ಪ ಕಷ್ಟಕರವಾಗಿತ್ತು. ಎಷ್ಟು ನಡೆದರೂ  ರಸ್ತೆಯು ಕಾಣಿಸಲೇ ಇಲ್ಲ. ನನ್ನ ಜೊತೆ ಯಾರೂ ಇರಲಿಲ್ಲವಾದ್ದರಿಂದ ಕೆಲವು ಕಡೆ ಮಾರ್ಗವನ್ನು ಬೇರೆಯವರಲ್ಲಿ ಕೇಳಿಕೊಂಡು ಸರಿಯಾದದ್ದೆಂದು ಖಚಿತಪಡಿಸಿಕೊಳ್ಳಬೇಕಾಯಿತು. ಈ ಮಧ್ಯೆ ಮುನಿಶಂಕರಪ್ಪನವರು ನಮ್ಮೆಲ್ಲರಿಗಿಂತ ಬೇಗನೆ ಇಳಿದು ಶಿಬಿರವನ್ನು ೧೨.೪೫ ಕ್ಕೆ ತಲುಪಿದ್ದರು. ನಾನು ನಿಧಾನವಾಗಿ ನಡೆದು ಶಿಬಿರವನ್ನು ೧.೧೫ ಕ್ಕೆ ತಲುಪಿದೆ. ಅನಂತರ ಚಂದ್ರು ಹಾಗೂ ವೆಂಕಟಸುಬ್ಬಯ್ಯನವರು ನಿಧಾನವಾಗಿ ಬಂದರು. ಮಧ್ಯಾನ್ಹದ ಊಟವು ಅತ್ಯಂತ ರುಚಿಕರವಾಗಿತ್ತು. ಊಟವಾದ ನಂತರ ಎಲ್ಲರೂ ಶಿಬಿರದ ಸುತ್ತ ಮುತ್ತ ಅಡ್ಡಾಡತೊಡಗಿದೆವು. ಸಂಜೆಯಾಗುತ್ತಿದ್ದಂತೆ ಮಳೆಯೂ ಬರತೊಡಗಿತು. ಎಲ್ಲರೂ ಶಿಬಿರದೊಳಗೆ ಸೇರಿ ಸ್ವಲ್ಪ ಹೊತ್ತು ಮಲಗಿದೆವು.  ಮಳೆ ನಿಂತ ಮೇಲೆ ಹೊರಬಂದು ಕೆಲವರು ಚಾರಣಕ್ಕೆ ಬೇರೆಯಾಗಿ ತಯಾರಿಸಿದ ನೀಲಿ ಬಣ್ಣದ ಅಂಗಿಗಳನ್ನು ಕೊಂಡು ಧರಿಸಿ ಫೋಟೋಗಳನ್ನು ತೆಗೆಸಿಕೊಂಡರು. 
 - ಪ್ರಕೃತಿಯೊಡನೆ ಹಾಗೂ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿನ ಒಂದು ದೀರ್ಘ ಒಡನಾಟ.
 - ಇದು ಒಂದು ತಪಸ್ಸು.
 - ಈ ತಪಸ್ಸಿನಲ್ಲಿ ಬೇರೆ ಚಿತ್ತ ಚಾಂಚಲ್ಯಕ್ಕೆ ಅವಕಾಶವಿರಬಾರದು.
 - ಸಸ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲದ ಬಗ್ಗೆ ಎಷ್ಟು ಮಾಹಿತಿಗಳು ದೊರಕುತ್ತವೋ ಅಷ್ಟನ್ನೂ ಪಡೆದುಕೊಳ್ಳಬೇಕು.
 - ನಮಗೆ ಅಗಾಧ ತಾಳ್ಮೆಯನ್ನು ಕಲಿಸುತ್ತದೆ.
 - ನಾವು ಜೀವನವನ್ನು ನೋಡುವ ರೀತಿಯು ಬದಲಾಗುತ್ತದೆ.
 
ಉಪಸಂಹಾರ ಚಾರಣ ಮುಗಿದ ನಂತರದ ಕೆಲವು ಅನುಭವಗಳು / ಪ್ರಸಂಗಗಳು
೨೪ ಮಾರ್ಚ್, ಶುಕ್ರವಾರ ಬೆಳಗ್ಗೆ ಉಪಹಾರದ ನಂತರ ನಾವು ೮ ಮಂದಿ ಚಾರಣಿಗರು ೮.೩೦ಕ್ಕೆ ಚೋಪ್ಟಾದಿಂದ ಹರಿದ್ವಾರದೆಡೆಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು. ಸುಮಾರು ೮ ಕಿ.ಮೀ ಪ್ರಯಾಣದ ನಂತರ ನಮ್ಮ ವಾಹನವು ಎದುರಿನಿಂದ ಬರುತ್ತಿರುವ ಒಂದು ದೊಡ್ಡ ವಾಹನವು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಮುಂದೆ ಹೋಗಲಾಗಲಿಲ್ಲ. ಸುಮಾರು ವಾಹನಗಳು ನಮ್ಮ ಕಡೆಯಿಂದ ಹಾಗೂ ಎದುರು ಮಾರ್ಗದಿಂದ ಬಂದು ನಿಂತಿದ್ದವು. ಅರ್ಧ ಮುಕ್ಕಾಲು ಘಂಟೆಯ ನಂತರ ಒಂದು ಜೆ.ಸಿ.ಬಿ. ವಾಹನವು ಅಲ್ಲಿಗೆ ಬಂದು ಸಿಕ್ಕಿಹಾಕಿಕೊಂಡಿದ್ದ ವಾಹನವನ್ನು ಕೆಸರಿನಿಂದ ಹೊರಗೆ ಎಳೆದು ಅದು ಮುಂದುವರೆಯಲು ಸಹಾಯಮಾಡಿತು. ಅನಂತರ ನಾವು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.
ಹರಿದ್ವಾರವನ್ನು ತಲುಪಿದ ನಂತರ ನಾವುಗಳೆಲ್ಲರೂ ಸುಮಾರು ಆರು ದಿವಸ ಸ್ನಾನವಿಲ್ಲದೇ ಇದ್ದದ್ದರಿಂದ ಕೂಡಲೇ ಗಂಗಾ ಸ್ನಾನವನ್ನು ಮಾಡೋಣವೆಂದು ಸಲಹೆಯನ್ನಿತ್ತೆ. ಅದರಂತೆ ಎಲ್ಲರೂ ಗಂಗಾ ಸ್ನಾನವನ್ನು ಮುಗಿಸಿದೆವು. ಮಾರನೇದಿನ ಅಂದರೆ ಶನಿವಾರ ಬೆಳಗ್ಗೆ ಮೊದಲಿಗೆ ಎಲ್ಲರೂ ಗಂಗಾ ಸ್ನಾನವನ್ನು ಮುಗಿಸಿ ಹೊರಟು ಮಾರ್ಗದಲ್ಲಿ ತಿಂಡಿಯನ್ನು ತಿಂದು ಕೇಬಲ್ ಕಾರಿನ ಮೂಲಕ ಮಾನಸಾದೇವಿ ಮಂದಿರವನ್ನು ತಲುಪಿ ದೇವಿಯ ದರ್ಶನವನ್ನು ಪಡೆದೆವು. ಸಂಜೆ ನಾಲ್ಕಕ್ಕೆ ಎಲ್ಲರೂ ಹರಕೀಪುರಿ ಸ್ಥಳಕ್ಕೆ ಹೋಗಿ ಗಂಗಾ ಆರತಿಯನ್ನು ವೀಕ್ಷಿಸಿದೆವು. ಈ ಕಾರ್ಯಕ್ರಮವು ಎಲ್ಲರಿಗೂ ಬಹಳ ಸಂತೋಷವನ್ನು ನೀಡಿತು.
ನನ್ನ ಅನಿಸಿಕೆಯ ಪ್ರಕಾರ ಚಾರಣವು
$$$$$$$$$$$$
Comments
Post a Comment