Skip to main content

ವಾರಂಗಲ್ ನ ಪ್ರೇಕ್ಷಣೀಯ ಸ್ಥಳಗಳು


ವಾರಂಗಲ್ ಪ್ರೇಕ್ಷಣೀಯ ಸ್ಥಳಗಳು

ಭಾರತೀಯ ಸ್ಟೇಟ್ ಬ್ಯಾಂಕ್ ನ ಮೂರು ಹಿರಿಯ ನಾಗರಿಕರಾದ ಸರ್ವಶ್ರೀ.ರಮೇಶ. ಪಿ.ಎಸ್, ವೆಂಕಟಸುಬ್ಬಯ್ಯ ಹಾಗೂ ಗುರುಪ್ರಸಾದ್ ರವರುಗಳು ಹೈದರಾಬಾದಿಗೆ ತೆರಳಿ ಅಲ್ಲಿಂದ ಮತ್ತೊಬ್ಬ ಅದೇ ಬ್ಯಾಂಕಿನ ನಿವೃತ್ತ ಅಧಿಕಾರಿಯೊಂದಿಗೆ ವಾರಂಗಲ್, ಭುವನಗಿರಿ, ಯಡಾದ್ರಿ ಹಾಗೂ ಸುರೇಂದ್ರಪುರಿಗಳನ್ನೊಳಗೊಂಡ ಚಾರಿತ್ರಿಕ, ಪೌರಾಣಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಮೂರು ದಿನದ ಪ್ರವಾಸವನ್ನು ಮುಗಿಸಿ ಮರಳಿ ಬೆಂಗಳೂರಿಗೆ ಇಂದು ಮುಂಜಾನೆ ಆಗಮಿಸಿದರು. ಈ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಮೊದಲು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ಹಾಗೂ ಪೌರಾಣಿಕ ಸಂಕ್ಷಿಪ್ತ ಮಾಹಿತಿಗಳನ್ನು ಈ ಕೆಳಗೆ ವಿವರಿಸಿರುವಂತೆ ಸಂಗ್ರಹಿಸಲಾಯಿತು. ಅದನ್ನು ಎಲ್ಲ ಸಹ ಪ್ರಯಾಣಿಕರಲ್ಲೂ ಹಂಚಿಕೊಂಡು ಅನಂತರ ಪ್ರವಾಸವನ್ನು ಮಾಡಲಾಯಿತು. ಪ್ರವಾಸದ ನಂತರ ಈ ಮಾಹಿತಿಗಳಮೇಲೆ ಮತ್ತೊಮ್ಮೆ ಕಣ್ಣುಹಾಯಿಸಲಾಯಿತು. ಇದರಿಂದ ಎಲ್ಲ ಸದಸ್ಯರಿಗೂ ಹೆಚ್ಚಿನ ಸಂತೋಷವುಂಟಾಯಿತು.
(ವಿ.ಸೂ. ಈ ಮಾಹಿತಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಹಾಗೂ ಬೇರೆ ಯಾರಾದರೂ ಈ ಸ್ಥಳಗಳಿಗೆ ಭೇಟಿಕೊಡುವ ಉದ್ದೇಶವಿದ್ದಲ್ಲಿ ಅವರಿಗೆ ಸ್ವಲ್ಪಮಟ್ಟಿನ ಮಾರ್ಗದರ್ಶನವು ಸಿಗಬಹುದೆಂಬ ಉದ್ದೇಶ ಮಾತ್ರವೇ ಹೊರತು ಬೇರೇನೂ ಇರುವುದಿಲ್ಲ.)

ಪ್ರಸ್ತಾವನೆ :
ವಾರಂಗಲ್ ನಗರವು ವಾರಂಗಲ್ ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೇಂದ್ರ ನಗರ. ತೆಲಂಗಾಣಾ ರಾಜ್ಯದಲ್ಲಿ ಇದು ಹೈದರಾಬಾದ್ ನ ನಂತರದ ಎರಡನೇ ಮಹಾನಗರ. ಇದರ ಸುತ್ತಳತೆ 406.87 ಚದರ ಕಿ.ಮೀ. ಜನಸಂಖ್ಯೆ 811844 (ಅಂದಾಜು). ಕ್ರಿ..1163 ಯಲ್ಲಿ ಸ್ಥಾಪನೆಯಾದ ಈ ಪಟ್ಟಣವು ಕಾಕತೀಯ ವಂಶದ ಆಳ್ವಿಕೆಯಲ್ಲಿ ಇದು ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಕಾಕತೀಯರು ಉಳಿಸಿಹೋದ ಸ್ಮಾರಕಗಳಲ್ಲಿ ಕೋಟೆಗಳು, ಸರೋವರಗಳು, ದೇವಮಂದಿರಗಳು ಹಾಗೂ ಶಿಲಾ ತೋರಣಗಳು ಇಂದಿಗೂ ಪ್ರವಾಸಿಗಳ ಅತಿ ಮುಖ್ಯ ಆಕರ್ಷಣೆಗಳಾಗಿವೆ. ಕಾಕತೀಯ ಕಲಾ ತೋರಣವನ್ನು ತೆಲಂಗಾಣಾ ಪ್ರಭುತ್ವದ ಲಾಂಛನವಾಗಿ ಸ್ವೀಕರಿಸಲಾಗಿದೆ. ಕಾಕತೀಯರ ಆಳ್ವಿಕೆಯಲ್ಲಿ ವ್ಯುತ್ಪತ್ತಿಶಾಸ್ತ್ರದ ಪ್ರಕಾರ ಈ ನಗರವನ್ನು ಓರುಗಲ್ಲು, ಏಕಶಿಲಾ ನಗರ ಅಥವಾ ಒಂಟಿಕೊಂಡ ಎಂಬುದಾಗಿ ಕರೆಯಲಾಗುತ್ತಿತ್ತು. ಇವೆಲ್ಲದರ ಅರ್ಥವೆಂದರೆ ವಾರಂಗಲ್ ಕೋಟೆಯೊಳಗಿರುವ ಏಕಶಿಲೆಯ ಬೃಹತ್ತಾದ ಬೆಣಚುಕಲ್ಲನ್ನು ಪ್ರತಿನಿಧಿಸುತ್ತದೆ. ಕ್ರಿ..1323 ರಲ್ಲಿ ದೆಹಲಿ ಸುಲ್ತಾನ ಜುನಾ ಖಾನನು ಕಾಕತೀಯರನ್ನು ಸೋಲಿಸಿದ ನಂತರ ಈ ನಗರವನ್ನು ಸುಲ್ತಾನ್ ಪುರ ಎಂದು ನಾಮಕರಣ ಮಾಡಿದನು.

ವಾರಂಗಲ್ಲಿನ ಜನಪ್ರಿಯ ಸ್ಥಳಗಳು:

ಭದ್ರಕಾಳಿ ಮಂದಿರ :

ಇದು ಭಾರತದಲ್ಲಿನ ಭದ್ರಕಾಳಿಯ ಅತಿ ಪುರಾತನ ಮಂದಿರಗಳಲ್ಲೊಂದು. ಇದು ಹನುಮಕೊಂಡ ಹಾಗೂ ವಾರಂಗಲ್ ನಡುವೆ ಸರ್ಕಾರಿ ಪಾಲಿಟೆಕ್ನಿಕ್ ನಿಂದ 1.5 ಕಿ.ಮೀ ದೂರದಲ್ಲಿರುವ ಭದ್ರಕಾಳಿ ಸರೋವರದ ದಂಡೆಯಲ್ಲಿರು ಒಂದು ಗುಡ್ಡದ ಮೇಲಿರುವುದು. ಈ ಮಂದಿರವನ್ನು ಕ್ರಿ..625ರಲ್ಲಿ ಚಾಲುಕ್ಯ ವಂಶದ ಎರಡನೇ ಪುಲಿಕೇಶಿಯು ಆಂಧ್ರ ದೇಶದ ವೆಂಗಿ ಭಾಗವನ್ನು ಜಯಿಸಿದ ಸ್ಮರಣಾರ್ಥವಾಗಿ ಕಟ್ಟಿಸಿದನೆಂದು ಮಂದಿರದ ಕಲ್ಲಿನ ಗೋಡೆಯ ಮೇಲೆ ಉಲ್ಲೇಖಿಸಲಾಗಿದೆ.

ನಂತರದ ಕಾಕತೀಯ ಅರಸರು ಈ ಮಂದಿರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಭದ್ರಕಾಲಿಯನ್ನು ತಮ್ಮ ಕುಲದೇವತೆಯಾಗಿ ಸ್ವೀಕರಿಸಿದರು. ಈ ಮಂದಿರದ ಬಳಿ ಗಣಪತಿದೇವ ಅರಸನು 2.5 ಕಿ.ಮೀ ಸುತ್ತಳತೆಯ ಒಂದು ಸರೋವರವನ್ನು ನಿರ್ಮಿಸಿದನು. ದೆಹಲಿ ಸುಲ್ತಾನರ ದಂಡಯಾತ್ರೆಯಲ್ಲಿ ಕಾಕತೀಯರು ಸಂಪೂರ್ಣವಾಗಿ ನಾಶವಾಗಿ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯು ಈ ಮಂದಿರವನ್ನು ನಾಶಪಡಿಸಿ ಭದ್ರಕಾಳಿಯ ಕಿರಿತದಲ್ಲಿ ರಾರಾಜಿಸುತ್ತಿದ್ದ ಕೊಹಿನೂರ್ ವಜ್ರವನ್ನು ಲೂಟಿಮಾಡಿದನು. ಕ್ರಿ..1950ರಲ್ಲಿ ದೇವೀ ಉಪಾಸಕ ಶ್ರೀ. ಗಣಪತಿ ಶಾಸ್ತ್ರಿಯು ಸುತ್ತಲಿನ ಪ್ರಭಾವಶಾಲಿ ವರ್ತಕರು ಹಾಗೂ ಶ್ರೀಮಂತರ ಸಹಾಯದಿಂದ ಈ ಮಂದಿರವನ್ನು ಪುನರುತ್ತಾನಗೊಳಿಸಿದನು. ಅಪರ ಏಕಾದಶಿಯನ್ನು ದೇವಿ ಭದ್ರಕಾಳಿ ಏಕಾದಶಿಯೆಂದು ಆಚರಿಸಲಾಗುವುದು. ಮತ್ತೊಂದು ಹೇಳಿಕೆಯ ಪ್ರಕಾರ ಕೊಹಿನೂರ್ ವಜ್ರವನ್ನು ಕಾಕತೀಯ ವಂಶಸ್ಥರು ದೇವಿ ಭದ್ರಕಾಳಿಯ ಎಡಗಣ್ಣಿನಲ್ಲಿ ಸ್ಥಾಪಿಸಿದ್ದರೆಂದು ಪ್ರತೀತಿ.

ಈ ಮಂದಿರದಲ್ಲಿನ ದೇವಿಯನ್ನು 2.7 ಚದರ ಮೀಟರಿನ ಕಲ್ಲಿನಲ್ಲಿ ತೀಕ್ಷ್ಣವಾದ ಕಣ್ಣುಗಳು ಹಾಗೂ ಎಂಟು ಹಸ್ತಗಳಲ್ಲಿ ಅನೇಕ ಆಯುಧಗಳನ್ನು ಹಿಡಿದಿರುವಂತೆ ಕೆತ್ತಲಾಗಿರುವುದು ಒಂದು ವೈಶಿಷ್ಟ್ಯ. ದೇವಿಯ ವಾಹನ ಸಿಂಹವನ್ನು ಗರ್ಭಗುಡಿಯ ಮುಂದೆ ನಿರ್ಮಿಸಲಾಗಿದೆ. ಮಂದಿರದಲ್ಲಿ ಧ್ವಜಸ್ಥಂಭ ಹಾಗೂ ಬಲಿಪೀಠವನ್ನೂ ನಿರ್ಮಿಸಲಾಗಿದೆ.
ಈ ಮಂದಿರದಲ್ಲಿನ ದೇವಿಯನ್ನು ಭದ್ರಕಾಳಿ ಎಂದು ಕರೆದರೂ, ನಂತರದ ದಿನಗಳಲ್ಲಿ ಈ ದೇವಿಯನ್ನು ಮಂತ್ರಾಶಕ್ತಿಯಿಂದ ಸೌಮ್ಯ ದೇವಿಯನ್ನಾಗಿ ಪರಿವರ್ತಿಸಿ ಪರಿವರ್ತಿತಗೊಂಡ ಆ ದೇವಿಯನ್ನು ಕಾಳೀ ರೂಪವನ್ನೂ ಒಳಗೊಂಡಿರುವತ್ರಿಪುರಸುಂದರಿಎಂದು ನಾಮಕರಣ ಮಾಡಲಾಯಿತು. ತ್ರಿಪುರಸುಂದರಿ ದೇವಿಯನ್ನು ಪ್ರಕೃತಿಯ ಮಹಾನ್ ಅಭಿವ್ಯಕ್ತಿತ್ತ್ವವೆಂದು ಪರಿಗಣಿಸಲಾಗುವುದು ಹಾಗೂ ಇದು ವಿಶ್ವದ ಮಹಾನ್ ಶಕ್ತಿಯ ಸ್ತ್ರೀರೂಪ.
ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ದೇವಿಯನ್ನು ವಿಶೇಷವಾಗಿ ಅಲಂಕರಿಸಿ ಉತ್ಸವವನ್ನು ಆಚರಿಸುವರು.
ಈ ಮಂದಿರವು ಪ್ರತಿಯೊಬ್ಬ ಪ್ರವಾಸಿಯೂ ನೋಡಲೇಬೇಕಾದದ್ದು. ಇಲ್ಲಿಗೆ ಭೇಟಿ ಕೊಡುವ ಮೊದಲು ಈ ಮಂದಿರದ ಐತಿಹಾಸಿಕ, ಪೌರಾಣಿಕ ಹಿನ್ನಲೆಯನ್ನು ಅರಿತಿದ್ದರೆ ಮಂದಿರದ ಭೇಟಿಯು ಅರ್ಥಪೂರ್ಣವಾಗಿರುವುದು.

ವಾರಂಗಲ್ಲಿನ ಸಾವಿರ ಕಂಭದ ಮಂದಿರ.

ಈ ರುದ್ರೇಶ್ವರ ಸ್ವಾಮಿ ಮಂದಿರವೆಂದೂ ಕರೆಯಲ್ಪಡುವ ಈ ಮಂದಿರವನ್ನು ಕ್ರಿ..1175-1324ರಲ್ಲಿ ಕಾಕತೀಯ ವಂಶದ ರುದ್ರದೇವನು ಚಾಲುಕ್ಯರ ಶೈಲಿಯಲ್ಲಿ ಶಿವ, ವಿಷ್ಣು ಹಾಗೂ ಸೂರ್ಯ ದೇವರು ಗಳನ್ನೊಳಗೊಂಡು ನಿರ್ಮಿಸಿರುವನು. ಮೂರು ಮುಖ್ಯ ಗರ್ಭಗೃಹಗಳು (ತ್ರಿಕೂಟಾಲಯ) ಹಾಗೂ ಅನೇಕ ಸಣ್ಣಪುಟ್ಟ ದೇವಮಂದಿರಗಳು ಮತ್ತು ಲಿಂಗಗಳ ಸುತ್ತ ಸುಪ್ರಸಿದ್ಧವಾದ ಸಾವಿರ ಕಂಭಗಳಿರುವುದು. ನಕ್ಷತ್ರದಾಕಾರದ ಮಂದಿರದ ತುಂಬಾ ಕಪ್ಪುಬಣ್ಣದ ಬಸಾಲ್ಟ್ ಕಲ್ಲಿನಿಂದ ಕೆತ್ತಲಾದ 6 ಅಡಿ ಎತ್ತರದ ಏಕಶಿಲೆಯ ನಂದಿಯೊಂದಿಗೆ ಹಲವಾರು  ಪುರಾತನ ಕೆತ್ತನೆಗಳು ಹಾಗೂ ಬೆಟ್ಟದಲ್ಲೇ ಕಡಿದಿರುವ ಆನೆಗಳು ಮತ್ತು ರಂಧ್ರಗಳಿಂದ ಕೂಡಿದ ದೃಶ್ಯಗಳು ಅಲ್ಲದೇ ಸಾರ್ವಭೌಮ ದೇವತೆಗಳನ್ನೊಳಗೊಂಡ ವಿಗ್ರಹಗಳನ್ನು ಗಮನಿಸಬಹುದು. ಇಡೀ ಮಂದಿರವನ್ನು ಒಂದು ಮೀಟರ್ ಎತ್ತರದ ಭೂಮಿಯಮೇಲೆ ಹನುಮಕೊಂಡ ಬೆಟ್ಟದೆಡೆಗೆ ವಾಲಿಕೊಂಡಂತೆ ನಿರ್ಮಿಸಲಾಗಿದೆ. 
ಯುನೆಸ್ಕೊ ಸಂಸ್ಥೆಯು ಈ ಮಂದಿರವನ್ನೂ ಹಾಗೂ ವಾರಂಗಲ್ ಕೋಟೆಯನ್ನೂ ವರ್ಲ್ಡ್ ಹೆರಿಟೇಜ್ ನ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.

ಮೂರು ಗರ್ಭಗೃಹಗಳಲ್ಲಿ ಶಿವನ ಗರ್ಭಗೃಹವು ಪೂರ್ವದಿಕ್ಕಿಗೆ ಮುಖ ಮಾಡಿದ್ದರೆ, ಉಳಿದೆರಡು ದಕ್ಷಿಣ ಮತ್ತು ಪಶ್ಚಿಮದಿಕ್ಕಿಗೆ ಮುಖಮಾಡಿವೆ. ಇದು ಏಕೆಂದರೆ ಶಿವನ ಪರಮ ಭಕ್ತರಾದ ಕಾಕತೀಯರಿಗೆ ಶಿವನ ಲಿಂಗದಮೇಲೆ ಸೂರ್ಯೋದಯದ ಮೊದಲ ಕಿರಣಗಳು ಬೀಳಬೇಕೆಂಬ ಆಸೆ ಇತ್ತು. ಶಿವನ ಗರ್ಭಗುಡಿಯ ಎಡಭಾಗದಲ್ಲಿ 5 ಅಡಿ ಎತ್ತರದ ಗಣಪತಿಯ ಬೃಹತ್ತಾದ ವಿಗ್ರಹವಿರುವುದು. ಮಂದಿರದ ಸುತ್ತಲೂ ಹಸಿರು ಹುಲ್ಲುಗಾವಲನ್ನು ನೋಡಬಹುದು.

ಈ ಮಂದಿರವನ್ನು ತುಘಲಖ್ ವಂಶದವರು ದಖನ್ ಪ್ರಾಂತ್ಯದ ಮೇಲೆ ಧಾಳಿ ಮಾಡಿದಾಗ ನಾಶಪಡಿಸಿದ್ದರು.

ರುದ್ರೇಶ್ವರ ಸ್ವಾಮಿಮಂದಿರವನ್ನು ವೈಯ್ಯಿಸ್ಥಂಬಲ ಗುಡಿ (ಸಾವಿರ ಕಂಭದ ಗುಡಿ) ಎಂದೂ ಕರೆಯಲ್ಪಡುವ ಈ ಮಂದಿರವು ಕಾಕತೀಯ ಕಲೆ, ವಿನ್ಯಾಸ ಹಾಗೂ ಶಿಲ್ಪಗಳಿಗೆ ಅತಿ ಪುರಾತನ ಉದಾಹರಣೆಯಾಗಿದೆ.
ಒಂದು ಸಾವಿರ ಕಂಭಗಳಿದ್ದರೂ ಯಾವುದೇ ಕಂಭವೂ ನೋಡುಗನನ್ನು ಗರ್ಭಗೃಹಗಳನ್ನು ನೋಡುವುದಕ್ಕೆ ಅಡ್ಡಿಪಡಿಸದೇ ಇರುವುದೇ ಈ ಕಂಭಗಳ ವೈಶಿಷ್ಟ್ಯ.

2004ರಲ್ಲಿ ಭಾರತ ಸರ್ಕಾರವು ಈ ಮಂದಿರವನ್ನು ನವೀಕರಿಸಿರುವರು.

ವಾರಂಗಲ್ ಕೋಟೆ

ವಾರಂಗಲ್ ಕೋಟೆಯು ಮೂರು ಕೇಂದ್ರೀಕೃತ ವೃತ್ತಾಕಾರದ ಗೋಡೆಗಳಿಂದ ಕೂಡಿದ್ದು ಅದನ್ನು ಕ್ರಿ..12ನೇ ಶತಮಾನದಲ್ಲಿ ನಿರ್ಮಿಸಿದ್ದಿರಬಹುದೆಂದು ಚರಿತ್ರಕಾರರ ಅಭಿಪ್ರಾಯ. ಆ ಸಮಯದಲ್ಲಿ ಈ ಕೋಟೆಯೊಳಗಿನ ನಗರವು ಕಾಕತೀಯ ಅರಸರ ರಾಜಧಾನಿಯಾಗಿತ್ತು. ಕೋಟೆಗೆ ನಾಲ್ಕು ಆಲಂಕಾರಿಕ ಕಮಾನಿನ ದ್ವಾರಗಳಿದ್ದವು. ಇವುಗಳನ್ನು ಕಾಕತೀಯ ಕಲಾ ತೋರಣಗಳೆಂದು ಗುರುತಿಸಲಾಗಿತ್ತು. ಮೊದಲಿಗೆ ಈ ತೋರಣವು ಈಗ ಪಾಳುಬಿದ್ದಿರುವ ಶಿವನ ಮಂದಿರದ ಪ್ರವೇಶ ದ್ವಾರವಾಗಿತ್ತು. ಕಾಕತೀಯ ತೋರಣವನ್ನು ತೆಲಂಗಾಣಾ ಪ್ರಭುತ್ವವು ರಾಷ್ಟ್ರದ ಲಾಂಛನವನ್ನಾಗಿ ಸ್ವೀಕರಿಸಿದೆ. ಯುನೆಸ್ಕೊ ವರ್ಲ್ಡ್ ಹೆರಿಟೇಜ್ ಸ್ಥಳಗಳ ತಾತ್ಕಾಲಿಕ ಪಟ್ಟಿಯಲ್ಲಿ ಕೋಟೆಯನ್ನೂ ಸೇರಿಸಲಾಗಿದೆ.

ಮೊತ್ತ ಮೊದಲಿಗೆ ವಾರಂಗಲ್ ಪ್ರದೇಶವು 8ನೇ ಶತಮಾನದಲ್ಲಿ ಯಾದವ ಅರಸರ ಆಳ್ವಿಕೆಯಲ್ಲಿದ್ದು ಅನಂತರ 12ನೇ ಶತಮಾನದಲ್ಲಿ ಅದು ಕಾಕತೀಯರ ವಂಶಸ್ಥರ ಆಳ್ವಿಕೆಗೆ ಒಳಗಾಯಿತು. ಮೊದಲಿಗೆ ಇಟ್ಟಿಗೆಯಿಂದ ನಿರ್ಮಿಸಿದ್ದ ಕೋಟೆಯನ್ನು ಕ್ರಿ..1262ರಲ್ಲಿ ತೀರಿಕೊಂಡ ಗಣಪತಿದೇವ ಅರಸನು ಕಲ್ಲಿನಿಂದ ಮರುನಿರ್ಮಾಣ ಮಾಡಿದನು ಎಂಬುದಾಗಿ ಚರಿತ್ರಕಾರರು ಹಾಗೂ ಪುರಾತತ್ವಜ್ಞರ ಅಭಿಪ್ರಾಯ. ಇವನ ನಂತರ ಇವನ ಪುತ್ರಿ ರುದ್ರಮ್ಮ ದೇವಿಯು 1289ರ ವರೆಗೂ ಅಳಿದಳು. ಅನಂತರ ಅವಳ ಮೊಮ್ಮಗ ಎರಡನೇ ಪ್ರತಾಪರುದ್ರದೇವನು ಇಪ್ಪತ್ತು ವರ್ಷಗಳ ಕಾಲ ವೈಭವದಿಂದ ಅಳಿದನು ಹಾಗೂ ಈ ಸಮಯವನ್ನುಬಂಗಾರದ ಯುಗಎಂದು ಕರೆಯಲಾಗಿತ್ತು. ಅನಂತರ ಈ ಕೋಟೆಯನ್ನು ದೆಹಲಿ ಸುಲ್ತಾನರು ಆಕ್ರಮಿಸಿಕೊಂಡರು. ಗಣಪತಿದೇವ, ರುದ್ರಮ್ಮದೇವಿ ಹಾಗೂ ಎರಡನೇ ಪ್ರತಾಪರುದ್ರನ ಆಳ್ವಿಕೆಯಲ್ಲಿ ಕೋಟೆಯ ಎತ್ತರವನ್ನು ಕ್ರಮವಾಗಿ ಏರಿಸಿ, ಅನೇಕ ದ್ವಾರಗಳನ್ನು ನಿರ್ಮಿಸಿ, ಚಚ್ಚೌಕದ ಕೋಟೆಗಳನ್ನು ಹಾಗೂ ಹೆಚ್ಚಿನ ವೃತ್ತಾಕಾರದ ಮಣ್ಣಿನ ಗೋಡೆಗಳನ್ನು ನಿರ್ಮಿಸಿದರು. ಈ ನಿರ್ಮಾಣಗಳು ಕಾಕತೀಯರ ಆಳ್ವಿಕೆಯ ಅಂತಿಮ ಘಟ್ಟದಲ್ಲಿ ಆಯಿತು.
ಕ್ರಿ..1309 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಸೇನಾಧಿಪತಿ ಮಲ್ಲಿಕಾಫಿರ್ ನು ಒಂದು ಲಕ್ಷ ಸೈನ್ಯದೊಂದಿಗೆ ಕೋಟೆಯನ್ನು ಆರು ತಿಂಗಳಿಗೂ ಹೆಚ್ಚಿನ ಸಮಯದವರೆಗೂ ಮುತ್ತಿಗೆ ಹಾಕಿ ಕೊನೆಗೆ ಎರಡನೇ ಪ್ರತಾಪರುದ್ರನಿಂದ ಅಕ್ರಮಿಸಿಕೊಂಡನು. ಆ ಸಮಯದಲ್ಲೇ ಅವನು ಕೊಹಿನೂರ್ ವಜ್ರವನ್ನು ದೇಹಲಿಗೆ ಕೊಂಡೊಯ್ದನು. ಅನಂತರ ಕ್ರಿ..1323ರ ವರೆಗೂ ದೆಹಲಿ ಸುಲ್ತಾನರು ಅನೇಕ ಬಾರಿ ಆಕ್ರಮಣ ಮಾಡಿ ಕೊನೆಗೆ ಪ್ರತಾಪರುದ್ರನನ್ನು ಬಂಧಿಸಿ ದೆಹಲಿಗೆ ಕೊಂಡೊಯ್ಯುತ್ತಿರುವಾಗ ಮಾರ್ಗಮಧ್ಯದಲ್ಲಿ ಪ್ರತಾಪರುದ್ರನು ಅಸುನೀಗಿದನೆಂದು ಚರಿತ್ರೆಯು ತಿಳಿಸುತ್ತದೆ. ಕ್ರಿ..1332ರ ನಂತರ ಕೋಟೆಯು ಗೋಲ್ಕೊಂಡದ ಕುತುಬ್ ಶಾಹಿ ಆಳ್ವಿಕೆಗೆ ಒಳಪಟ್ಟಿತು.

ಕ್ರಿ..15 ಹಾಗೂ 17ನೇ ಶತಮಾನಗಳ ಮಧ್ಯದಲ್ಲಿ ಕೋಟೆಗೆ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಪ್ರಮುಖವಾಗಿ ನಾಲ್ಕೂ ದ್ವಾರಗಳನ್ನು ಮತ್ತಷ್ಟು ಭದ್ರಪಡಿಸುವ ಸಲುವಾಗಿ ಶಕ್ತಿಶಾಲಿ ಗೋಡೆಗಳನ್ನು ನಿರ್ಮಿಸಲಾಯಿತು ಹಾಗೂ ಹೊರಗಡೆಯ ಗೋಡೆಗಳಲ್ಲಿ ದ್ವಾರಗಳನ್ನು ನಿರ್ಮಿಸಲಾಯಿತು. ಈ ನಿರ್ಮಾಣದ ಅವಶೇಷಗಳನ್ನು ಈಗಲೂ ನೋಡಬಹುದು.

ರಾಮಪ್ಪ ಮಂದಿರ

ರಾಮಲಿಂಗೇಶ್ವರ ಮಂದಿರವು (ರಾಮಪ್ಪ ಮಂದಿರ) ವಾರಂಗಲ್ ಪಟ್ಟಣದಿಂದ 77 ಕಿ.ಮೀ ದೂರದಲ್ಲಿದೆ. ಮಂದಿರದಲ್ಲಿನ ಒಂದು ಬರಹದ ಪ್ರಕಾರ ಈ ಮಂದಿರವು ಕ್ರಿ..1213ರಲ್ಲಿ ಕಾಕತೀಯ ರಾಜ ಗಣಪತಿದೇವನ ಆಳ್ವಿಕೆಯ ಸಮಯದಲ್ಲಿ ಜನರಲ್ ರಿಚೇರಿಯ ರುದ್ರನು ನಿರ್ಮಿಸಿದನೆಂದು ತಿಳಿದುಬರುವುದು. ಮಂದಿರದಲ್ಲಿ ರಾಮಲಿಂಗೇಶ್ವರನನ್ನು ಪೂಜಿಸಲಾಗುವುದು ಹಾಗೂ ಇದು 6 ಅಡಿ ಎತ್ತರದ ನಕ್ಷತ್ರದಾಕಾರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಗರ್ಭಗುಡಿಯ ಮುಂದಿರುವ ವಿಶಾಲವಾದ ಹಜಾರಾದಲ್ಲಿ ಸುಂದರವಾದ ಕೆತ್ತನೆಗಳನ್ನೊಳಗೊಂಡ ಅನೇಕ ಕಂಭಗಳು ಬೆಳಕನ್ನು ಹಿಡಿದು ಸುಂದರವಾದ ದೃಶ್ಯವನ್ನು ನೋಡುಗರಿಗೆ ಕಲ್ಪಿಸುತ್ತವೆ. ಈ ಮಂದಿರವನ್ನು ಅದನ್ನು ನಿರ್ಮಿಸಿದ ಶಿಲ್ಪಿಯ ಹೆಸರಿನಲ್ಲಿ ಅಂದರೆ ರಾಮಪ್ಪ ಎಂದು ಕರೆಯಲಾಗಿದೆ. ಶಿಲ್ಪಿಯ ಹೆಸರಿನಲ್ಲಿರುವ ಮಂದಿರವು ಬಹುಷಃ ಇದೊಂದೇ ಇರಬಹುದು ಹಾಗೂ ಇದನ್ನು ನಿರ್ಮಿಸಲು 40 ವರ್ಷಗಳೇ ಬೇಕಾಯಿತು.
ಮಂದಿರದಲ್ಲಿನ ಮುಖ್ಯ ಭಾಗಗಳನ್ನು ಕೆಂಪು ಮರಳಶಿಲೆಯಿಂದ ನಿರ್ಮಿಸಲಾಗಿದ್ದು ಹೊರಭಾಗದ ಸ್ಥಂಭಗಳನ್ನು ದೊಡ್ಡ ದೊಡ್ಡ ಕಪ್ಪು ಬಣ್ಣದ ಬಸಾಲ್ಟ್ ಶಿಲೆಗಳಿಂದ ನಿರ್ಮಿಸಲಾಗಿದೆ. ಈ ಸ್ಥಂಭಗಳ ಮೇಲೆ ಅನೇಕ ಪೌರಾಣಿಕ ಪ್ರಾಣಿಗಳು ಅಥವಾ ನಾಟ್ಯಗಾರ್ತಿಯರು ಅಥವಾ ಸಂಗೀತಗಾರರ ಚಿತ್ರಗಳನ್ನು ಹಾಗೂ ಕಾಕತೀಯರ ಕಲೆಗಳನ್ನು ಪ್ರತಿಬಿಂಬಿಸಲಾಗಿದೆ. ಗರ್ಭಗೃಹದಲ್ಲಿನ ಮೇಲ್ಛಾವಣಿಯನ್ನು ನೀರಿನಲ್ಲಿ ತೇಲುವ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಗರ್ಭಗೃಹದೊಳಗೆ 9 ಅಡಿ ಎತ್ತರದ ವೇದಿಕೆಯ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಮುಖ್ಯ ಮಂದಿರದ ಎರಡೂಕಡೆಗಳಲ್ಲಿ ಕಾಮೇಶ್ವರ ಹಾಗೂ ಕೋಟೇಶ್ವರ ದೈವದ ಸಣ್ಣ ಶಿವ ಮಂದಿರವಿರುವುದು. ಇದರಲ್ಲಿ ಕಾಮೇಶ್ವರ ಮಂದಿರವು ಪಾಳುಬಿದ್ದಿರುವುದು. ಶಿವ ಮಂದಿರದ ಎದುರಿಗೆ ನಿರ್ಮಿಸಿರುವ ನಂದಿ ವಿಗ್ರಹವು ಇಂದಿಗೂ ಭವ್ಯವಾಗಿದೆ. ಇಲ್ಲಿನ ನಂದಿಯ ವೈಶಿಷ್ಟ್ಯವೆಂದರೆ ಅದು ಮಾಮೂಲಿನ ಭಂಗಿಯಲ್ಲಿರದೇ ಗಮನ ಕೊಡುವ ಭಂಗಿಯಲ್ಲಿದೆ. ಮಂದಿರದ ಪ್ರದಕ್ಷಿಣ ಪಥದಲ್ಲಿ ಅನೇಕ ಶಿಖರಗಳನ್ನು ವೀಕ್ಷಿಸಬಹುದು. ಈ ಮಂದಿರದಲ್ಲಿ ಕೆಟ್ಟಲಾಗಿರುವ ನಾಟ್ಯಗಾರ್ತಿಯರ ನಾಟ್ಯಭಂಗಿಯನ್ನಾಧರಿಸಿ ನಟರಾಜ ರಾಮಕೃಷ್ಣರು ಪೇರಿನಿ ಶಿವತಾಂಡವ ನೃತ್ಯವನ್ನು ಪುನರುಜ್ಜೀವನಗೊಳಿಸಿದರು. ಜಯಪ ಸೇನಾನಿಯು ರಚಿಸಿರುವ ನ್ರಿತ್ತ ರತ್ನಾವಲಿ ನಾಟ್ಯ ಭಂಗಿಗಳನ್ನೂ ಇಲ್ಲಿನ ಶಿಲ್ಪಗಳಲ್ಲಿ ಕಾಣಬಹುದು.
ಕಾಲಾನುಕ್ರಮದಲ್ಲಿ ಈ ಸ್ಥಳದಲ್ಲಿ ಅನೇಕ ಯುದ್ಧಗಳು ನಡೆದು ಹಾಗೂ ಪ್ರಾಕೃತಿಕ ಘಟನೆಗಳಿಂದ ಅಪಾರ ಹಾನಿಯುಂಟಾದರೂ, ಈ ಮಂದಿರಕ್ಕೆ ಯಾವ ಅಪಾಯವೂ ಉಂಟಾಗಿಲ್ಲ. ಹದಿನೇಳನೇ ಶತಮಾನದಲ್ಲಿ ಘಟಿಸಿದ ಭೂಕಂಪದಲ್ಲಿ ಈ ಮಂದಿರಕ್ಕೆ ಸ್ವಲ್ಪ ಹಾನಿಯಾಗಿತ್ತು. ಜನಗಳ ನಿರ್ಲಕ್ಷ್ಯದಿಂದ ಸಣ್ಣ ಪುಟ್ಟ ಕಟ್ಟಡಗಳು ಹಾಗೂ ಮಂದಿರದ ಮುಖ್ಯ ಪ್ರವೇಶದ್ವಾರವು ಹಾಳಾಗಿವೆ. ಮಂದಿರವು ವಾರದ ಏಳೂ ದಿನಗಳಲ್ಲಿ ಮುಂಜಾನೆ 6 ರಿಂದ ಸಂಜೆ 6 ರ ವರೆಗೂ ತೆರೆದಿರುವುದು. ಮಂದಿರವನ್ನು ವೀಕ್ಷಿಸಲು ಒಂದು ಘಂಟೆ ಸಮಯ ಬೇಕು.

ರಾಮಪ್ಪ ಸರೋವರ

ರಾಮಪ್ಪ ಮಂದಿರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಮಾನವ ನಿರ್ಮಿತ ರಾಮಪ್ಪ ಸರೋವರವಿರುವುದು. ಈ ಸರೋವರವನ್ನು ಕ್ರಿ..13ನೇ ಶತಮಾನದಲ್ಲಿ ಕಾಕತೀಯ ಅರಸ ಗಣಪತಿದೇವನ ಅವಧಿಯಲ್ಲಿ ನಿರ್ಮಿಸಿರುವರು ಹಾಗೂ ಇದು ಆ ಕಾಲದಲ್ಲಿನ ನೀರಾವರಿ ಕಾರ್ಯಗಳಿಗೆ ಅಮೋಘವಾದ ಉದಾಹರಣೆ. ಈ ಸರೋವರದ ನೀರು 82 ಚದರ ಕಿ.ಮೀಗಳಿಗೂ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಸರೋವರದ ಸುತ್ತಲೂ ಹಸಿರು ಹಾಸಿನ ಹುಲ್ಲುಗಾವಲು ಇರುವುದು. ಸರೋವರದ ಒಂದೆಡೆ ಬೆಟ್ಟಗುಡ್ಡಗಳಿದ್ದು ಸೂರ್ಯಾಸ್ಥವನ್ನು ವೀಕ್ಷಿಸಲು ಪ್ರಶಸ್ಥವಾದ ಜಾಗ. ನೀವು ಇಲ್ಲಿ ಮರಗಿಡಗಳ ನೆರಳಿನಲ್ಲಿ ಸಾವಕಾಶವಾಗಿ ನಡೆದಾಡಬಹುದು ಅಥವಾ ಸರೋವರದ ನೀಲಿ ಬಣ್ಣದ ನೀರಿನಲ್ಲಿ ದೋಣಿವಿಹಾರವನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಅತಿಥಿಗೃಹದ ಬಲಿಯಲ್ಲಿನ ಸರೋವರದ ದಂಡೆಯನ್ನು ದುರಸ್ತಿಗೊಳಿಸಿ ಸರೋವರ ವೀಕ್ಷಣೆಗೆ ಅನುಕೂಲವನ್ನು ಕಲ್ಪಿಸಲಾಗಿದೆ. ಯಾಂತ್ರಿಕ ದೋಣಿಗಳನ್ನು ಬಾಡಿಗೆಗೆ ಪಡೆದು ದೋಣಿವಿಹಾರವನ್ನು ಮಾಡಬಹುದು. ಬಳಿಯಲ್ಲಿಯೇ ಉಪಹಾರಾಗೃಹವೂ ಇರುವುದು. ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಪಂಪ್ ಹೌಸ್ ಹಾಗೂ ಅಲ್ಲಿಗೆ ತೆರಳುವ ಮಾರ್ಗ. ಮುಖ್ಯ ಸರೋವರದಿಂದ ಕೇವಲ 5 ನಿಮಿಷದ ನಡಿಗೆಯಲ್ಲೇ ಮೊಣಕಾಲು ಮುಳುಗುವಷ್ಟಿನ ನೀರಿನಲ್ಲಿ ನಡೆದು ಪಂಪ್ ಹೌಸ್ ನ್ನು ತಲುಪಬಹುದು. ಸರೋವರವು ವೀಕ್ಷಣೆಗೆ ಎಲ್ಲ ದಿನಗಳಲ್ಲೂ ಮುಂಜಾನೆ 5 ರಿಂದ ರಾತ್ರೆ 9 ರ ವರೆಗೂ ಅವಕಾಶವುಂಟು.

ಪದ್ಮಾಕ್ಷಿ ಮಂದಿರ

ಹನುಮಕೊಂಡ ನಗರದಲ್ಲಿ ಬೆಟ್ಟದ ಮೇಲಿರುವ ಪದ್ಮಾಕ್ಷಿ (ಪದ್ಮಾಕ್ಷಮ್ಮ)ದೇವಿಯ ಪುರಾತನ ದೇವಾಲಯ -ಪದ್ಮಾಕ್ಷಿ ಮಂದಿರ (ಪದ್ಮಾಕ್ಷಿಗುಟ್ಟ). ಕದಲಾಲಯ ಬಸ್ತಿ ಅಥವಾ ಪದ್ಮಾಕ್ಷಿಗುಟ್ಟದಲ್ಲಿ ಪದ್ಮಾವತಿ ದೇವಿಯ ಜೈನರ ಮಂದಿರವಿರುವುದು. ಈ ಮಂದಿರವನ್ನು ಮೂಲದಲ್ಲಿ ನಿರ್ಮಿಸಿದವರು 12ನೇ ಶತಮಾನದ ಕಾಕತೀಯ ಅರಸರು. ಕಾಕತೀಯ ಅರಸರು ಈ ಮಂದಿರವನ್ನು ಪುನರುಜ್ಜೀವನಗೊಳಿಸುವುದಕ್ಕೆ ಮೊದಲು ಇಲ್ಲಿ ಒಂದು ಜೈನ ಬಸದಿಯಿತ್ತು.
ಕಾಲಾನಂತರದಲ್ಲಿ ಜೈನಪಂಥದ ಕಠಿಣವಾದ ನಿಯಮಗಳಿಂದಾಗಿ ಭಕ್ತರು ಕ್ರಮೇಣ ಶೈವ ಪಂಥವನ್ನು ಅಪ್ಪಿಕೊಂಡು, ಅನಂತರ ಈ ಮಂದಿರವು ಹಿಂದೂ ಮಂದಿರವಾಗಿ ಪರಿವರ್ತಿತವಾಯಿತೆಂದು ಚರಿತ್ರಕಾರರ ಅಭಿಪ್ರಾಯ.
ಬೆಟ್ಟದ ತಪ್ಪಲಿನಲ್ಲಿ ಲಕ್ಷ್ಮೀನರಸಿಂಹ ದೇವಾಲಯವಿರುವುದು. ಬೆಟ್ಟದಲ್ಲಿ ಹಲವಾರು ಗುಹೆಗಳಿದ್ದು ಅದರಲ್ಲಿ ಶಿವ ಲಿಂಗ ಹಾಗೂ ನಂದಿ ವಿಗ್ರಹಗಳನ್ನು ನೋಡಬಹುದು.
ಗುಡಿಯ ಗರ್ಭಗೃಹದಲ್ಲಿ ಪಾರ್ಶ್ವನಾಥ ತೀರ್ಥಂಕರರ ಬೃಹತ್ತಾದ ಮೂರ್ತಿ ಇರುವುದು. ಈ ಮೂರ್ತಿಯ ಬಲದಲ್ಲಿ ಧರಣೇಂದ್ರ ಯಕ್ಷ ಹಾಗೂ ಎಡಭಾಗದಲ್ಲಿ ದೇವಿ ಪದ್ಮಾವತಿಯರುಗಳ ವಿಗ್ರಹವಿರುವುದು. ಈ ವಿಗ್ರಹಗಳನ್ನು ಕಲ್ಲಿನಿಂದ ಕೆತ್ತಿದ್ದು ಅವುಗಳಿಗೆ ನವೀನ ಬಣ್ಣವನ್ನು ಬಳಿಯಲಾಗಿದೆ.
ಮಂದಿರದೊಳಗೆ ಅನೇಕ ಜೈನ ತೀರ್ಥಂಕರರ ಹಾಗೂ ಜೈನರ ದೇವ ದೇವಿಯರ ವಿಗ್ರಹಗಳಿರುವುದು.

ಪದ್ಮಾವತಿ ದೇವಿಯನ್ನು ಮೂರು ಹಂತಗಳಲ್ಲಿ ದಿನದ ಬೇರೆ ಬೇರೆ ಸಮಯದಲ್ಲಿ ವೀಕ್ಷಿಸಬಹುದು. ಮುಂಜಾನೆ ದೇವಿಯು ಸಣ್ಣ ಬಾಲಕಿಯಾಗಿ ಕಂಡರೆ, ಮಧ್ಯಾನ್ಹದಲ್ಲಿ ಅದೇ ದೇವಿಯು ಬೆಳೆದ ಬಾಲಕಿಯಾಗಿ ಹಾಗೂ ಸಂಜೆಯಲ್ಲಿ ಅದೇ ದೇವಿಯು ಮುದುಕಿಯಾಗಿ ಕಂಡುಬರುವಳು.

ಕಾಕತೀಯ ಅರಸ ಮಾಧವ ವರ್ಮನಿಗೆ ಪದ್ಮಾಕ್ಷಿ ದೇವಿಯು ಖಡ್ಗವೊಂದನ್ನು ನೀಡಿದಳೆಂದು ಪ್ರತೀತಿ.

ವರ್ಷಕ್ಕೊಮ್ಮೆ ಸಹಸ್ರಾರು ಮಹಿಳೆಯರು ಈ ಮಂದಿರಕ್ಕೆ ಬಂದು ಪೂಜೆಯನ್ನು ಸಲ್ಲಿಸಿ ಪದ್ಮಾಕ್ಷಿ ಬೆಟ್ಟದ ಬುಡದಲ್ಲಿರುವ ಕೊಳದಲ್ಲಿ ಅನೇಕ ವಿಧದ ಹೂವುಗಳನ್ನು ಮುಳುಗಿಸುವುದರ ಮೂಲಕ ತೆಲಂಗಣಾ ರಾಜ್ಯದ ಸುಪ್ರಸಿದ್ಧ ಬದುಕಮ್ಮ ಹಬ್ಬವನ್ನಾಚರಿಸುವರು.
ಮಂದಿರದ ಪ್ರವೇಶ ದ್ವಾರದಲ್ಲಿ ಮನಮುಟ್ಟುವ ನಾಲ್ಕು ಮುಖದ ಕಪ್ಪುಬಣ್ಣದ ಗ್ರಾನೈಟ್ ಕಲ್ಲಿನಿಂದ ನಿರ್ಮಿತವಾದ ಅನ್ನಕೊಂಡ ಕಂಭವನ್ನು ವೀಕ್ಷಿಸಬಹುದು. ಇದು ಇಲ್ಲಿನ ಬಹು ಮುಖ್ಯ ಆಕರ್ಷಣೆ.
ಬೆಟ್ಟದ ಮೇಲಿಂದ ಹನುಮಕೊಂಡ, ವಾರಂಗಲ್ ಮತ್ತು ಕಾಝಿಪೇಟ್ ನಗರಗಳನ್ನು ವೀಕ್ಷಿಸಬಹುದು.

ಕುಂದ ಸತ್ಯನಾರಾಯಣ ಕಲಾಧಾಮ

ಕುಂದ ಸತ್ಯನಾರಾಯಣ ಕಲಾಧಾಮವು ಒಂದು ಆಧ್ಯಾತ್ಮಿಕ ಮತ್ತು ಪೌರಾಣಿಕ ಕೇಂದ್ರ. ಈ ಕೇಂದ್ರಕ್ಕೆ ಭೇಟಿಕೊಟ್ಟವರು ಭಾರತದ ಪೌರಾಣಿಕ ಘಟನೆಗಳಾದ ದಶಾವತಾರ, ರಾಮಾಯಣ, ಮಹಾಭಾರತ ಇತ್ಯಾದಿ ಸಂದರ್ಭಗಳೊಂದಿಗೆ ಪುನರ್ಜಿವಿಸಬಹುದು. ಭಾರತದಲ್ಲಿನ ಚಾರಿತ್ರಿಕ ಹಾಗೂ ಪೌರಾಣಿಕ ಮಂದಿರಗಳ ಪೈಕಿ ಬಹುತೇಕ ಮಂದಿರಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಪ್ರಕೃತಿ ಸೌಂದರ್ಯದ ನಡುವೆ ಸಪ್ತಲೋಕಗಳಿಗೆ ನೀವು ಭೇಟಿಕೊಡಬಹುದು. ಇದು ಕಲೆ ಹಾಗೂ ಧರ್ಮಗಳ ಅದ್ಭುತ ಸಂಗಮ ಕ್ಷೇತ್ರ.

ಕಲಾಧಾಮವು 3 ಚದರ ಕಿ.ಮೀಗಳ ವಿಶಾಲವಾದ ಸ್ಥಳದಲ್ಲಿ 3000 ವಿಗ್ರಹಗಳಿಂದ ಕೂಡಿದ್ದು, ಪೌರಾಣಿಕ ಘಟನೆಗಳು ಹೇಗೆ ಜರುಗಿದವೋ ಅದೇ ರೀತಿಯಾಗಿ ಸೃಷ್ಟಿಸಲಾಗಿದೆ. ಈ ಕಲಾಧಾಮಕ್ಕೆ ಭೇಟಿಕೊಡುವುದರಿಂದ ಸಂದರ್ಶಕರು ತಾವು ಅರಿತಿದ್ದ ಪೌರಾಣಿಕ ಕಥೆ / ಘಟನೆಗಳನ್ನು ಮೇಲುಕು ಹಾಕುವುದಲ್ಲದೇ, ತನಗೆ ಗೊತ್ತಿಲ್ಲದ ಅನೇಕ ಘಟನೆಗಳನ್ನು ಕಣ್ಣಾರೆ ನೋಡಿ ಆನಂದಿಸಬಹುದು.

ಕಲಾಧಾಮವನ್ನು ಪ್ರವೇಶಿಸುತ್ತಿದ್ದಂತೆ ನಿಮಗೆ ಕಂಡುಬರುವುದೇನೆಂದರೆ 60 ಅಡಿ ಎತ್ತರದ ಐದು ಮುಖದ ಆಂಜನೇಯನ ಸುಂದರ ವಿಗ್ರಹವು ಮುಂದೆ ಕಂಡುಬರುವುದು ಹಾಗೂ ಇದರ ನಂತರ ಐದು ಮುಖವುಳ್ಳ ಶಿವನ ಪ್ರತಿಮೆಯನ್ನು ನೋಡಬೇಕು. ಹನುಮಂತನ ಐದು ಮುಖಗಳು - ವಾನರ, ನರಸಿಂಹ, ಗರುಡ, ಸೂಕರ, ಹಾಗೂ ಹಯಗ್ರೀವ. ಹತ್ತು ಕೈಗಳಲ್ಲಿ ಅನೇಕ ವಿಧವಾದ ಆಯುಧಗಳನ್ನು ಹಿಡಿದು ಹಾಗೂ ಮಹಿರಾವಣನನ್ನು ಸಂಹರಿಸಿದ ಹನುಮಂತನ ಈ ವಿಗ್ರಹವು ಅವನು ಶಿವನ ಮಾನಸ ಪುತ್ರ ಎಂಬುದನ್ನು ಸಾಬೀತುಪಡಿಸುತ್ತದೆ.

ಹನುಮಂತನ ಹಿಂಭಾಗದ ಭಾಗದಲ್ಲಿರುವ ಐದು ಮುಖದ ಶಿವ - ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಹಾಗೂ ಈಶಾನ ಮುಖಗಳು ಹಾಗೂ ಹತ್ತೂ ಕೈಗಳಲ್ಲಿ ತ್ರಿಪುರಾಸುರನನ್ನು ಸಂಹಾರಮಾಡಿದ ತ್ರಿಶೂಲದೊಂದಿಗೆ ಅನೇಕ ಆಯುಧಗಳಿರುವುದು. ಈ ಎರಡೂ ಮಹಾ ಮಹಾ ಪ್ರತಿಮೆಗಳು ಸುರೇಂದ್ರಪುರಿಯಲ್ಲಿನ ವೈಶಿಷ್ಟ್ಯ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸ್ಥಾಪಿತವಾದ ಎಲ್ಲಾ ಮುಖ್ಯ ದೇವಾಲಯಗಳನ್ನು ನೋಡಬಹುದು.
ಸಪ್ತಲೋಕಗಳಾದ ಬ್ರಹ್ಮಲೋಕ, ವಿಷ್ಣುಲೋಕ, ಶಿವಲೋಕ, ನಾಗಲೋಕ, ಇಂದ್ರಲೋಕ, ನರಲೋಕ, ಪಾತಾಳಲೋಕಗಳಿಗೆ ಒಂದೇ ಕಡೆ ಭೇಟಿಕೊಡಬಹುದು. ವಿಷ್ಣುಲೋಕದಲ್ಲಿನ ಏಳು ಮಹಾದ್ವಾರಗಳ ಮೇಲೂ ವಿಷ್ಣುವಿನ ದಶಾವತಾರಗಳನ್ನು ಎರಡೂಕಡೆ ಚತ್ರಿಸಿರುವುದನ್ನು ನೋಡುತ್ತಾ ಈ ಲೋಕವನ್ನು ಪ್ರವೇಶಿಸುವಾಗ ಒಂದು ಅಪೂರ್ವ್, ಅಲೌಕಿಕ ಅನುಭವ ಆಗುವುದು. ಇದೇ ರೀತಿ ಉಳಿದ ಆರು ಲೋಕಗಳನ್ನೂ ಅದ್ಭುತವಾಗಿ ಸೃಷ್ಟಿಸಿ ನಿಮಗೆ ಆಯಾಯ ಲೋಕಗಳ ಅಪೂರ್ವ ಅನುಭವವನ್ನು ನೀಡುವುದು.

ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ರಾಮಾಯಣ, ಮಹಾಭಾರತ, ಭಾಗವತ ಮತ್ತು ಇತರೆ ಪುರಾಣಗಳ ಆಕರ್ಷಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಹಾಗೂ ಅದ್ಭುತ ಅನುಭವವನ್ನು ನೀಡುವಂತೆ ಚಿತ್ರಿಸಲಾಗಿದೆ. ಮಂದಾರ ಪರ್ವತವನ್ನೇ ಕಡೆಗೋಲನ್ನಾಗಿಸಿಕೊಂಡು ಸುರಾಸುರರು ಸಮುದ್ರಮಥನವನ್ನು ಮಾಡಿದ ಘಟನೆಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಅದೇ ರೀತಿ ವಿಷ್ಣುವು ಮಹಾಲಕ್ಷ್ಮಿಯೊಂದಿಗೆ ಗರುಡವನ್ನೇರಿ ಗಜೇಂದ್ರನನ್ನು ರಾಕ್ಷುಸಲಿ ಧಾವಿಸಿ ಬರುತ್ತಿರುವ ಘಟನೆಯ ಪ್ರತಿಮೆಯು ಅದ್ಭುತ ಹಾಗೂ ಅಪ್ರತಿಮ ಸೌಂದರ್ಯದಿಂದ ಕೂಡಿದೆ. 36 ಅಡಿ ಎತ್ತರದ ಭಗವಾನ್ ಶ್ರೀಕೃಷ್ಣನ ಗೀತೋಪದೇಶ ಹಾಗೂ ಸುತ್ತಲಿನ ಪಾಂಡವ ಹಾಗೂ ಕೌರವ ಸೇನೆಗಳನ್ನೊಳಗೊಂಡ ದೃಶ್ಯವು ಮನಮೋಹಕವಾಗಿದ್ದು ನೋಡುಗರನ್ನು ಭಕ್ತಿಭಾವದ ಕಡಲಿನಲ್ಲಿ ಮುಳುಗಿಸುತ್ತದೆ. ಬಾಲಕೃಷ್ಣನ ಕಾಲಿಯ ಮರ್ದನ, ಗೋವರ್ಧನ ಪರ್ವತವನ್ನು ಎತ್ತಿಹಿಡಿದಿರುವ, ಬಾಲ ಭಾರತ, ಹನುಮಾನ್ ಚರಿತ್ರ, ಬುದ್ಧ ಚರಿತ್ರ ಘಟನೆಗಳ ಚಿತ್ರಣವು ಕಣ್ಣಿಗೆ ಹಬ್ಬವನ್ನು ತರುತ್ತವೆ.
ಮುಂದುವರೆದು ಹನುಮಂತನು ತನ್ನ ಸ್ವಹಸ್ತದಿಂದ ಪ್ರಸಾದವನ್ನು ಯಾತ್ರಿಕರಿಗೆ ನೀಡುವುದು ಹಾಗೂ ಕಾಮಧೇನುವಿನ ಕೆಚ್ಚಲಿನಿಂದಲೇ ಹರಿದುಬಂದ ಹಾಲಿನಿಂದ ಅಲ್ಲೇ ತಯಾರಿಸಲಾದ ಬಿಸಿ ಬಿಸಿ ಕಾಫಿ, ಇವುಗಳನ್ನು ವೀಕ್ಷಿಸಿ ಯಾತ್ರಿಕರು ಮಂತ್ರಮುಗ್ಧರಾಗುವುದು ಖಚಿತ.
ಪದ್ಮವ್ಯೂಹ ರಚನೆಯನ್ನು ನೋಡಿದ ಕೂಡಲೇ ನಿಮಗೆ ನೀವೇ ಸ್ವತಃ ಯುದ್ಧಭೂಮಿಯಲ್ಲಿರುವಂತೆ ಭಾಸವಾಗುವುದು. ಅಭಿಮನ್ಯುವು ಸಂಪೂರ್ಣವಾಗಿ ಕೌರವರ ಕಪಾಠವನ್ನರಿಯದೆ ಹೇಗೆ ಅವರ ಮೋಸದ ಬಲೆಗೆ ಸಿಲುಕಿ ಬಲಿಯಾದ ಎಂಬ ಘಟನೆಯು ನಿಮಗೆ ಯಾವುದೇ ಕಾರ್ಯವನ್ನು ಅದರ ಸಾಧಕ ಬಾಧಕಗಳನ್ನು ಸಂಪೂರ್ಣವಾಗಿ ಅರಿಯದೇ ಕೈಗೆತ್ತಿಕೊಳ್ಳಬಾರದೆಂಬ ನೀತಿ ಪಾಠವನ್ನು ಕಲಿಸುತ್ತದೆ.
ಇದೇ ರೀತಿ ಇನ್ನೂ ಅನೇಕ ಪೌರಾಣಿಕ ಘಟನೆಗಳ ಚಿತ್ರಣವನ್ನು ನೀವು ನೋಡಬಹುದು.

ಸುರೇಂದ್ರಪುರಿಯಲ್ಲಿನ ಮಂದಿರವು ವಾರದ ದಿನಗಳಲ್ಲಿ ಬೆಳಗ್ಗೆ 6.30 ರಿಂದ 1.00 ರವರೆಗೂ ಹಾಗೂ 3 ರಿಂದ ರಾತ್ರೆ 8 ರವರೆಗೂ; ಹಾಗೂ ವಾರಾಂತ್ಯದಲ್ಲಿ ಮತ್ತು ಸಾರ್ವಜನಿಕ ರಜೆಯ ದಿನಗಳಲ್ಲಿ ಬೆಳಗ್ಗೆ 6.30 ರಿಂದ ರಾತ್ರೆ 8 ಘಂಟೆಯವರೆಗೂ ತೆರೆದಿರುತ್ತದೆ. ಇದಕ್ಕೆ ಪ್ರವೇಶವು ಉಚಿತ.

ಕುಂದ ಸತ್ಯನಾರಾಯಣ ಕಲಾಧಾಮವು ಬೆಳಗ್ಗೆ 9 ರಿಂದ ರಾತ್ರೆ 7 ರ ವರೆಗೂ ತೆರೆದಿರುತ್ತದೆ. ಇದರ ಪ್ರವೇಶ ಶುಲ್ಕವು ರೂ.350/- ಹಾಗೂ ಪ್ರವೇಶ ಪತ್ರವನ್ನು ಮುಂಜಾನೆ 9 ರಿಂದ ಸಂಜೆ 5 ರ ವರೆಗೂ ನೀಡಲಾಗುವುದು.
ಪ್ರವೇಶ ಪತ್ರ ನೀಡುವ ಸ್ಥಳದ ಬಳಿ ಶೌಚಾಲಯವು ಇರುವುದು.
ಕ್ಯಾಮರಾ, ವಿಡಿಯೋ ಕ್ಯಾಮರಾ ಅಥವಾ ಯಾವುದೇ ಎಲೆಕ್ಟ್ರಾನಿಕ್ ಪದಾರ್ಥಗಳಿಗೆ ಕುಂದ ಸತ್ಯನಾರಾಯಣ ಕಲಾಧಾಮದೊಳಗೆ ಪ್ರವೇಶವಿಲ್ಲ. ಮೊಬೈಲ್ ಫೋನ್ ಗಳನ್ನು ನಿಗದಿತ ಶುಲ್ಕವನ್ನು ಸಲ್ಲಿಸಿದ ನಂತರ ಒಳಗೆ ಕೊಂಡೊಯ್ಯಬಹುದು. ಆಹಾರ ಪದಾರ್ಥಗಳನ್ನು ಒಳಗೆ ಕೊಂಡೊಯ್ಯುವಹಾಗಿಲ್ಲ. ಸುರೇಂದ್ರಪುರಿಯ ಆವರಣದಲ್ಲಿ ಸಸ್ಯಾಹಾರಿ ಆಹಾರವು ದೊರಕುವುದು.
ಇಡೀ ಸುರೇಂದ್ರಪುರಿಯು ಬಿಸಿಲು, ಮಳೆ, ಗಾಳಿಗೆ ತೆರೆದಿರುವುದು. ಹಾಗಾಗಿ ಪ್ರಯಾಣಿಕರು ಸೂಕ್ತವಾದ ಛತ್ರಿ/ಟೋಪಿ ಇತ್ಯಾದಿಗಳನ್ನು ಇಟ್ಟುಕೊಂಡಿರಬೇಕು.
ಕಲಾಧಾಮದೊಳಗೆ ಪಾದರಕ್ಷೆಯನ್ನು ಧರಿಸಿ ಹೋಗಬಹುದಾದರೂ, ಮಂದಿರದೊಳಗೆ ಅನುಮತಿ ಇರುವುದಿಲ್ಲ.








Comments

Popular posts from this blog

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ ...

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮ...

ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು

ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು ಚಾರಣದ ಉದ್ದೇಶ, ಸವಾಲುಗಳು ಹಾಗೂ ಪ್ರತ್ಯಕ್ಷ ವೀಕ್ಷಣೆ   ನಿಮಗೆ ಗೊತ್ತಿರುವ ಸ್ಥಳದಿಂದ ದೂರಹೋಗಿ ಅಲ್ಲಿಯ ಹೊಸ ಹಾದಿಯನ್ನು, ಮತ್ತಿಷ್ಟು ಹಾದಿಯನ್ನು ಕ್ರಮಿಸಿ, ಅತ್ಯಂತ ರಮಣೀಯವಾದ ಪ್ರಕೃತಿ ಸಂಪತ್ತನ್ನು ಪತ್ತೆಹಚ್ಚುವುದಕ್ಕೋಸ್ಕರ ಚಾರಣ ಮಾಡಬೇಕು.  ನೀವು ಅನುಭವಿ ಅಥವಾ ಆರಂಭಿಕ ಚಾರಣಿಗರೇ ಆಗಿದ್ದರೂ ಚಾರಣವು ಒಡ್ಡುವ ಸವಾಲುಗಳನ್ನು ಎದುರಿಸಿ ಆನಂದಿಸುವ ಅವಕಾಶಗಳನ್ನು ನೀಡುತ್ತದೆ.  ಎಲ್ಲೋ ಯಾವುದೋ ಪುಸ್ತಕದಲ್ಲಿ ಓದಿರಬಹುದಾದ ಅಥವಾ ಸಾಕ್ಷ್ಯ ಚಿತ್ರಗಳಲ್ಲಿ ನೋಡಿದ, ಪ್ರತ್ಯಕ್ಷವಾಗಿ ವೀಕ್ಷಿಸಬೇಕೆಂದು ಕನಸು ಕಂಡಿರಬಹುದಾದ ಸ್ಥಳಗಳಿಗೆ ಹೋಗಿ ಅಲ್ಲೆಲ್ಲಾ ಸುತ್ತಾಡಿ ಆನಂದಿಸುವ ಅವಕಾಶಗಳನ್ನು ಚಾರಣವು ಒದಗಿಸುತ್ತದೆ.  ಚಾರಣದಲ್ಲಿ ನಮ್ಮನ್ನು ಮತ್ತೊಮ್ಮೆ ಕಂಡುಕೊಳ್ಳುವ ಅವಕಾಶವೂ ದೊರಕುತ್ತದೆ. ಯಾವುದೇ ಹಿಂಜರಿಕೆಯ ಸೋಗಿಲ್ಲದೆ ಕಂಡರಿಯದ ಹಾದಿಯಲ್ಲಿ ನಿಮ್ಮನ್ನು ನೀವು ಮತ್ತೊಮ್ಮೆ ಹುಡುಕಿಕೊಳ್ಳಲು ಚಾರಣವು ಸಂದರ್ಭವನ್ನು ಒದಗಿಸುತ್ತದೆ.  ಚಾರಣವು ಒಂದು ಸಾಮೂಹಿಕ ಚಟುವಟಿಕೆ ಹಾಗೂ ಈ ಹವ್ಯಾಸವು ನಿಮ್ಮಲ್ಲಿನ ದೈಹಿಕ ಶಕ್ತಿಯನ್ನು ಅಭಿವ್ಯಕ್ತಿಸುತ್ತದೆ.  ಚಾರಣವು ರಮ್ಯವಾದ ಪ್ರಕೃತಿಯ ನಡುವೆ ಸುಂದರವಾದ ಸಮುದಾಯ ಹುಟ್ಟಿಕೊಳ್ಳುತ್ತದೆ ಅಲ್ಲದೆ ಹೊಸ ಹೊಸ ಗೆಳೆಯರನ್ನು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೂ ನೀವು ಕ್...