Skip to main content

ಮಧುಗಿರಿ ಬೆಟ್ಟದೆಡೆಗಿನ ಚಾರಣ


ಮಧುಗಿರಿ ಬೆಟ್ಟದೆಡೆಗಿನ ಚಾರಣ

ಫೆಬ್ರವರಿ 16ರಂದು 15ಜನ ಸಾಹಸಪ್ರಿಯ ನವ ಯುವಕರು ಮಧುಗಿರಿ ಬೆಟ್ಟವನ್ನು ಹತ್ತಲು ಹೊರಡಲಿರುವರು. ಅವರೆಲ್ಲರಿಗೂ ಚಾರಣವು ಸುಸೂತ್ರವಾಗಿ ಕೈಗೂಡಲೆಂದು ಹಾರೈಸುತ್ತಾ ಚಾರಣದ ಬಗ್ಗೆ ಕೆಲವು ಸಂಕ್ಷಿಪ್ತ ವಿವರಣೆಗಳನ್ನು ನೀಡಲು ಆಶಿಸುವೆ.

ಮಧುಗಿರಿ ಬೆಟ್ಟವು ತುಮಕೂರು ಜಿಲ್ಲೆಯಲ್ಲಿರುವುದು. ಮಧುಗಿರಿ ಬೆಟ್ಟವು ಏಕಶಿಲೆಯ ಬೆಟ್ಟ ಹಾಗೂ ಇಡೀ ಏಷ್ಯಾದಲ್ಲೇ ಎರಡನೇ ಅತಿ ಎತ್ತರದ ಏಕಶಿಲೆಯ ಬೆಟ್ಟ. ಇದರ ಎತ್ತರ ಸುಮಾರು 3930 ಅಡಿ.
ಹಾಗಾಗಿ ಈ ಬೆಟ್ಟವನ್ನು ಹತ್ತುವವರು ಏಷ್ಯಾದಲ್ಲಿನ ಇತರೆ ಏಕಶಿಲೆಯ ಬೆಟ್ಟವನ್ನು ಸುಲಭವಾಗಿ ಹತ್ತಬಹುದು.

ಅನೇಕ ಬೆಟ್ಟಗಳನ್ನು ಪ್ರಪಂಚದಲ್ಲಿನ ಅತಿ ಎತ್ತರದ ಏಕಶಿಲೆಯ ಬೆಟ್ಟಗಳೆಂದು ಹೇಳುತ್ತಾರೆ. ಆದರೆ ಈ ಹೇಳಿಕೆಗೆ ಭೂಗರ್ಭಶಾಸ್ತ್ರದ ಪುರಾವೆಗಳಿರುವುದಿಲ್ಲ ಹಾಗೂ ಕೇವಲ ಎತ್ತರ ಅಥವಾ ಸುತ್ತಳತೆಯನ್ನೇ ಆಧಾರವಾಗಿರಿಸಿಕೊಂಡು ಆ ರೀತಿಯಾಗಿ ಹೇಳುವರು. ಹಾಗೂ ಎತ್ತರವನ್ನು ಸಮುದ್ರಮಟ್ಟದಿಂದಲೋ ಅಥವಾ ಬೆಟ್ಟದ ಬುಡದಿಂದಲೋ ಪರಿಗಣಿಸಿರಬಹುದು. ಎತ್ತರವು ಸಮುದ್ರ ಮಟ್ಟದಿಂದ ಎಂದು ಪರಿಗಣಿಸಿದಲ್ಲಿ ಬೆಟ್ಟದ ಬುಡವೇ ಸಮುದ್ರ ಮಟ್ಟದಿಂದ 1000 - 2000 ಅಡಿ ಎತ್ತರದಲ್ಲಿದ್ದಲ್ಲಿ ಬೆಟ್ಟದ ಆರೋಹಣವು ಪ್ರಾರಂಭವಾಗುವುದೇ 1000 - 2000 ಅಡಿ ಎತ್ತರದಿಂದ ಪ್ರಾರಂಭವಾಗುವುದಿಲ್ಲವೇ? ಹಾಗಾಗಿ ನಿಖರವಾಗಿ ಎಷ್ಟು ಅಡಿ ಎತ್ತರವನ್ನು ಏರಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.

ಮಧುಗಿರಿಯ KSRTC ಬಸ್ಸು ನಿಲ್ದಾಣದಿಂದ ಎಡಗಡೆಗೆ 260 ಮೀಟರ್ ನಡೆದು ಖಾಸಗಿ ಬಸ್ ನಿಲ್ದಾಣಕ್ಕೆ ಮುಂಚಿತವಾಗಿ ಕೋಟೆಗೆ ಹೋಗುವ ಮಾರ್ಗವಿರುವುದು. ಕೋಟೆ ಬಾಗಿಲನ್ನು ದಾಟಿದ ನಂತರ ಅಲ್ಲಿ ಪೊಲೀಸ್ ಅಧಿಕಾರಿ ಇದ್ದಲ್ಲಿ ನಿಮ್ಮ ವಿವರಗಳನ್ನು ಸಲ್ಲಿಸಿ ಮುಂದುವರಿಯಬೇಕು.

ಬೆಟ್ಟವನ್ನೇರುವಾಗ ಅನೇಕ ಕೋಟೆಗೊಡೆಗಳನ್ನು ನೋಡುತ್ತೀರಿ. ಬೆಟ್ಟವನ್ನು ನಾಲ್ಕು ಹಂತಗಳಲ್ಲಿ ಏರುತ್ತೀರಿ.

ಮೊದಲನೇ ಹಂತದಲ್ಲಿ ವಿಶಾಲವಾದ ಮೆಟ್ಟಿಲುಗಳಿದ್ದು ಹತ್ತುವುದು ಸುಲಭ.
ಎರಡನೇ ಹಂತದಲ್ಲಿ ಮೆಟ್ಟಿಲುಗಳು ಚಿಕ್ಕದಾಗುತ್ತಾ ಒಂದೆಡೆ ಕಂಬಿಗಳು ಸಹಾಯಕ್ಕೆ ಇರುವುದು. ಈ ಹಂತವನ್ನೂ ಕಂಬಿಗಳ ಸಹಾಯದಿಂದ ಹತ್ತಬಹುದು.
ಮೂರನೇ ಹಂತದಲ್ಲಿ ಮೆಟ್ಟಿಲುಗಳು ಅತಿ ಸಣ್ಣದಾಗಿದ್ದು (ಒಂದು ಅಡಿ ಅಗಲ) ಕಂಬಿಗಳ ಸಹಾಯದಿಂದ ಕಷ್ಟಪಟ್ಟು ಹತ್ತಬಹುದು.
ನಾಲ್ಕನೇ ಹಾಗೂ ಕೊನೆಯ ಹಂತವು ಅಪಾಯಕಾರಿಯಾದದ್ದು. ಈ ಹಂತದಲ್ಲಿ ಮೆಟ್ಟಿಲುಗಳು ಸಣ್ಣದಾಗಿ ಹಾಗೂ ಡೊಂಕಾಗಿರುವುದು ಹಾಗೂ ಕಂಬಿಗಳು ಕೇವಲ ಅರ್ಧ ಮಾರ್ಗದವರೆಗೆ ಮಾತ್ರ ಇರುತ್ತದೆ. ಇಲ್ಲಿಂದ ಕೂಡಾ ಸುತ್ತಲಿನ ಪ್ರಕೃತಿಯ ಸುಂದರ ದೃಶ್ಯಗಳನ್ನು ನೋಡಬಹುದು. ಇಲ್ಲಿಂದ ಮೇಲೆ ಕಷ್ಟಪಟ್ಟು ಹೋದಲ್ಲಿ ಬೆಟ್ಟದ ತುದಿಯನ್ನು ತಲುಪಬಹುದು. ಬೆಟ್ಟವನ್ನೇರಲು ಸುಮಾರು 2 ರಿಂದ 3 ಘಂಟೆ ಬೇಕಾಗಬಹುದು (ಅಲ್ಲಲ್ಲೇ ವಿಶ್ರಾಂತಿಯನ್ನು ಪಡೆದಲ್ಲಿ).
ಬೆಟ್ಟವನ್ನು ಇಳಿಯಲು ಸುಮಾರು ಒಂದು ಘಂಟೆ ಬೇಕಾಗಬಹುದು ಹಾಗೂ ಅತಿ ಎಚ್ಚರಿಕೆಯಿಂದ ಇಳಿಯಬೇಕು, ಏಕೆಂದರೆ, ಸಾಮಾನ್ಯವಾಗಿ ಬೆಟ್ಟವನ್ನೇರುವುದಕ್ಕಿಂತ ಇಳಿಯುವುದು ಅತಿ ಅಪಾಯಕಾರಿ.
ಮಧ್ಯಾನ್ಹ ಒಂದು ಘಂಟೆಗಿಂತ ಮುಂಚೆಯೇ ಇಳಿಯಲು ಪ್ರಾರಂಭಿಸಬೇಕು.

ಮಧುಗಿರಿಯ ನಾಳೆಯ ಉಷ್ಣತೆಯು - 32℃ - ಸಾಮಾನ್ಯಕ್ಕಿಂತ 1℃ ಹೆಚ್ಚಿರುವುದು.
ನೀವು ಬೆಟ್ಟಹತ್ತುವ ಸಮಯದಲ್ಲಿ - 28℃ ಹಾಗೂ ಬೆಟ್ಟದ ಶಾಖವನ್ನು ಸೇರಿ - 32℃
ಬೆಟ್ಟವನ್ನು ಇಳಿಯುವ ಸಮಯದಲ್ಲಿ - 30℃
ಹಾಗೂ ಬೆಟ್ಟದ ಶಾಖವನ್ನು ಸೇರಿ - 34℃

ಬೆಟ್ಟವನ್ನೇರುವಾಗ ನಿಮ್ಮೊಂದಿಗೆ ಒಣ ದ್ರಾಕ್ಷಿ, ಖರ್ಜೂರ, ಶಕ್ತಿಯನ್ನು ನೀಡುವ ದ್ರವ ಪದಾರ್ಥ ಹಾಗೂ ನೀರನ್ನು ತೆಗೆದುಕೊಂಡು ಹೋಗಿ.
ಎಣ್ಣೆಯಿಂದ ಕರಿದ ಪದಾರ್ಥಗಳಾದ ಚಕ್ಕುಲಿ, ನಿಪ್ಪಟ್ಟು ಇತ್ಯಾದಿಗಳನ್ನು ಬೆಟ್ಟವನ್ನಿಳಿದ ಮೇಲೆ ಯಥೇಚ್ಛವಾಗಿ ತಿನ್ನಿರಿ.

ಎಚ್ಚರ : ನಿಮ್ಮನ್ನು ಬೆಂಗಳೂರಿನಿಂದ ಕರೆದೊಯ್ಯುವ ನಿಮ್ಮ ಮಾರ್ಗದರ್ಶಿಯು ಮಧುಗಿರಿ ಬೆಟ್ಟವನ್ನೇರುವುದು ಅತಿ ಸುಲಭವೆಂದು ಹೇಳಿದಲ್ಲಿ ಅದನ್ನು ಖಂಡಿತ ನಂಬಬೇಡಿ. ಈ ಚಾರಣವನ್ನು ಚಾರಣ ಸಂಸ್ಥೆಗಳು “Moderately difficult” ಎಂದು ವರ್ಗೀಕರಿಸಿದ್ದಾರೆ. ನೀವು ಒಂದೇ ದಿನದಲ್ಲಿ ಸುಮಾರು 3900 ಅಡಿ ಮೇಲೇರುವಿರಿ ಹಾಗೂ ಅಷ್ಟೇ ಕೆಳಗೆ ಇಳಿಯುವಿರಿ. ನಿಮ್ಮ ಮಂಡಿಗಳ ಬಗ್ಗೆ ಜಾಗ್ರತೆ ವಹಿಸಿರಿ. ನಿಮಗೆ ನಾಲ್ಕನೇ ಹಂತವನ್ನೇರಲು ಕಠಿಣವೆನಿಸಿದಲ್ಲಿ ಯಾರ ಒತ್ತಾಯಕ್ಕೂ ಮುಲಾಜನ್ನು ನೀಡದೆ ನಿಧಾನವಾಗಿ ಕೆಳಗಿಳಿಯಿರಿ. ಏಕೆಂದರೆ :-

ನಿಮ್ಮ ದೇಹದ ಮೇಲೆ ವಿಶೇಷ ಕಾಳಜಿ ವಹಿಸಿ. ಶರೀರಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಿ, ಏಕೆಂದರೆ ಹಳೇ ಮಾಡೆಲ್ ಗಾಡಿಗಳಿಗೆ ಬಿಡಿಭಾಗಗಳು ಯಾವುದೇ ಅಂಗಡಿಗಳಲ್ಲಿ ದಾಸ್ತಾನು ಇರುವುದಿಲ್ಲ, ಅಪರೂಪಕ್ಕೆ ಇದ್ದರೂ ಅದು ನಿಮಗೆ ಸಮಯಕ್ಕೆ ಸರಿಯಾಗಿ ದೊರಕುವುದಿಲ್ಲ. ಏಕೆಂದರೆ ನಾವೆಲ್ಲರೂ 40 ಅಥವಾ 50 / 55 ರ ಮಾಡೆಲ್ ಗಳು ಹಾಗೂ ಆ ದಶಕದ ಮಾಡೆಲ್ ಗಳಿಗೆ ವಾರಂಟಿ ಅವಧಿ ಎಂದೋ ಮುಗಿದುಹೋಗಿದೆ ಹಾಗೂ ಅದರ ಗಡುವು (expiry) ದಿನಾಂಕವು ಇನ್ನೇನು ಸಮೀಪಿಸಲಿದೆ   ... ಎಚ್ಚರಿಕೆಯು ಒಳ್ಳೆಯದು. ನಾವುಗಳೆಲ್ಲಾ ಹೆಚ್ಚಿಲ್ಲದ ಆವೃತ್ತಿಗಳು (Limited edition)ಎಂಬುದನ್ನು ಆಗಾಗ್ಗೆ ಜ್ಞಾಪಿಸಿಕೊಳ್ಳುತ್ತಿರಿ.

ನಿಮ್ಮ ಚಾರಣ ಸಾಹಸಕ್ಕೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು.

ಹೆಚ್ಚಿನ ಮಾಹಿತಿ:-
ಹದಿಮೂರು ಅತಿ ಎತ್ತರದ ಏಕಶಿಲಾ ಬೆಟ್ಟಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಯೋಣವೇ!

1.    ಬುಕಿಟ್ ಕೇಲಮ್ - ಇಂಡೋನೇಷಿಯಾದ ಪಶ್ಚಿಮ ಕಲಿಮಂಥನ್ ಪ್ರದೇಶದಲ್ಲಿನ ಸಿಂಟಾಗ್ ನಗರದಲ್ಲಿರುವುದು. ಬೆಟ್ಟದ ಎತ್ತರ 3000 ಅಡಿ.
2.    ಸ್ಟೋನ್ ಮೌನ್ಟನ್ - ಅಟ್ಲಾಂಟ (USA) - ಬುಡದಿಂದ 825 ಅಡಿ ಎತ್ತರ
3.    ಸ್ಟಾವಾಮಸ್ ಚೀಫ್ - ಉತ್ತರ ಅಮೆರಿಕ - ಎತ್ತರ 2300 ಅಡಿ
4.    ಎಲ್ ಪೆನಾನ್ ಡೇ ಗೂವಾಟಪೆ - ಕೊಲಂಬಿಯಾ - ಎತ್ತರ 650 ಅಡಿ
5.    ಪೆನ ಡೇ ಬೆರ್ನಲ್ - ಮೆಕ್ಸಿಕೋ - ಎತ್ತರ 1148 ಅಡಿ
6.    ರಾಕ್ ಆಫ್ ಜೀಬ್ರಾಲ್ಟರ್ - ಸ್ಪೈನ್ ದೇಶದ ದಕ್ಷಿಣ ತೀರ. ಇದು UK ಗೆ ಸೇರಿದ ಸಾಗರೋತ್ತರ ಪ್ರದೇಶ - ಎತ್ತರ 1396 ಅಡಿ.
7.    ಎಲ್ ಕ್ಯಾಪ್ಟನ್ - ಯೋಸೇಮಟಿ ಕಣಿವೆಯಲ್ಲಿನ ರಾಷ್ಟ್ರೀಯ ಉದ್ಯಾನವನದಲ್ಲಿದೆ. (USA) - ಬುಡದಿಂದ ಎತ್ತರ 3000 ಅಡಿ.
8.    ಟೊರೆಸ್ ಡೆಲ್ ಪೈನೆ - ಪಟಗೋನಿಯನ್ - ಚಿಲಿ - ಎತ್ತರ - 8200 ಅಡಿ
9.    ಡೇವಿಲ್ಸ್ ಟವರ್ - ಕೃಕ್ ಕೌಂಟಿ - USA- ಎತ್ತರ 1267 ಅಡಿ
10. ಸಿಗಿರಿಯ - ಶ್ರೀಲಂಕಾ - ಎತ್ತರ - 1214 ಅಡಿ
11.  ಶುಗರ್ ಲೋಫ್ ಮೌಂಟನ್ - ಪೋರ್ಚುಗೀಸ್ - ಎತ್ತರ - 1299 ಅಡಿ
12.  ಝುಮ ರಾಕ್ - ಆಸ್ಟ್ರೇಲಿಯಾದ ಉಲುರು ಪ್ರಾಂತ್ಯ - ಎತ್ತರ - 2378 ಅಡಿ
13.  ಉಲುರು / ಆಯೆರ್ಸ್ ರಾಕ್ - ಆಸ್ಟ್ರೇಲಿಯಾ - ಎತ್ತರ 1142 ಅಡಿ.



Comments

Popular posts from this blog

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ ...

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮ...

ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು

ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು ಚಾರಣದ ಉದ್ದೇಶ, ಸವಾಲುಗಳು ಹಾಗೂ ಪ್ರತ್ಯಕ್ಷ ವೀಕ್ಷಣೆ   ನಿಮಗೆ ಗೊತ್ತಿರುವ ಸ್ಥಳದಿಂದ ದೂರಹೋಗಿ ಅಲ್ಲಿಯ ಹೊಸ ಹಾದಿಯನ್ನು, ಮತ್ತಿಷ್ಟು ಹಾದಿಯನ್ನು ಕ್ರಮಿಸಿ, ಅತ್ಯಂತ ರಮಣೀಯವಾದ ಪ್ರಕೃತಿ ಸಂಪತ್ತನ್ನು ಪತ್ತೆಹಚ್ಚುವುದಕ್ಕೋಸ್ಕರ ಚಾರಣ ಮಾಡಬೇಕು.  ನೀವು ಅನುಭವಿ ಅಥವಾ ಆರಂಭಿಕ ಚಾರಣಿಗರೇ ಆಗಿದ್ದರೂ ಚಾರಣವು ಒಡ್ಡುವ ಸವಾಲುಗಳನ್ನು ಎದುರಿಸಿ ಆನಂದಿಸುವ ಅವಕಾಶಗಳನ್ನು ನೀಡುತ್ತದೆ.  ಎಲ್ಲೋ ಯಾವುದೋ ಪುಸ್ತಕದಲ್ಲಿ ಓದಿರಬಹುದಾದ ಅಥವಾ ಸಾಕ್ಷ್ಯ ಚಿತ್ರಗಳಲ್ಲಿ ನೋಡಿದ, ಪ್ರತ್ಯಕ್ಷವಾಗಿ ವೀಕ್ಷಿಸಬೇಕೆಂದು ಕನಸು ಕಂಡಿರಬಹುದಾದ ಸ್ಥಳಗಳಿಗೆ ಹೋಗಿ ಅಲ್ಲೆಲ್ಲಾ ಸುತ್ತಾಡಿ ಆನಂದಿಸುವ ಅವಕಾಶಗಳನ್ನು ಚಾರಣವು ಒದಗಿಸುತ್ತದೆ.  ಚಾರಣದಲ್ಲಿ ನಮ್ಮನ್ನು ಮತ್ತೊಮ್ಮೆ ಕಂಡುಕೊಳ್ಳುವ ಅವಕಾಶವೂ ದೊರಕುತ್ತದೆ. ಯಾವುದೇ ಹಿಂಜರಿಕೆಯ ಸೋಗಿಲ್ಲದೆ ಕಂಡರಿಯದ ಹಾದಿಯಲ್ಲಿ ನಿಮ್ಮನ್ನು ನೀವು ಮತ್ತೊಮ್ಮೆ ಹುಡುಕಿಕೊಳ್ಳಲು ಚಾರಣವು ಸಂದರ್ಭವನ್ನು ಒದಗಿಸುತ್ತದೆ.  ಚಾರಣವು ಒಂದು ಸಾಮೂಹಿಕ ಚಟುವಟಿಕೆ ಹಾಗೂ ಈ ಹವ್ಯಾಸವು ನಿಮ್ಮಲ್ಲಿನ ದೈಹಿಕ ಶಕ್ತಿಯನ್ನು ಅಭಿವ್ಯಕ್ತಿಸುತ್ತದೆ.  ಚಾರಣವು ರಮ್ಯವಾದ ಪ್ರಕೃತಿಯ ನಡುವೆ ಸುಂದರವಾದ ಸಮುದಾಯ ಹುಟ್ಟಿಕೊಳ್ಳುತ್ತದೆ ಅಲ್ಲದೆ ಹೊಸ ಹೊಸ ಗೆಳೆಯರನ್ನು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೂ ನೀವು ಕ್...