ಅರುಣಾಚಲ
ಕ್ಷೇತ್ರದ ಆರನೇ ಬಾರಿಯ ಪರಿಕ್ರಮ
ಯಥಾಪ್ರಕಾರ ಹೊಸ ಮಾಸವು
ಹುಟ್ಟಿತೆಂದ ಕೂಡಲೇ ನನ್ನ ಮನಸ್ಸಿಗೆ ಹೊಳೆಯುವುದು ಹುಣ್ಣಿಮೆ ಎಂದು, ಹೇಗೆ
ತಿರುವಣ್ಣಾಮಲೈ ಕ್ಷೇತ್ರದ ಪರಿಕ್ರಮವನ್ನು ಸಂಪನ್ನಗೊಳಿಸುವುದು ಹಾಗೂ ಜೊತೆಗೆ ಯಾರನ್ನು ಕರೆದೊಯ್ಯುವುದು
ಎಂಬ ವಿಷಯದ ಬಗ್ಗೆ. ಆದರೆ ಫೆಬ್ರವರಿ ತಿಂಗಳಿನ ಪರಿಕ್ರಮದ ಕಾರ್ಯಕ್ರಮಕ್ಕೆ ಈ ಸಮಸ್ಯೆಯು
ಉಂಟಾಗಲೇ ಇಲ್ಲ. ಏಕೆಂದರೆ ಪರಿಕ್ರಮವನ್ನು ಮಾಡಲು ಕಾಲೇಜಿನ ನನ್ನ ಸಹಪಾಠಿ ಶ್ರೀ.ರವೀಂದ್ರನ
ಸರದಿ ಇದ್ದೇ ಇತ್ತು. ಇದರೊಂದಿಗೆ ನನ್ನ ಸಹೋದ್ಯೋಗಿ ಶ್ರೀ.ಶ್ರೀಕಾಂತ್
ಕೊಲ್ಹಾರ ಅವರೂ ಬರಲು ಒಪ್ಪಿಕೊಂಡರು.
ಈ ಮಾಸದ ಪರಿಕ್ರಮವನ್ನು ನಾವು ಶುಕ್ಲಪಕ್ಷದ ಬಿದಿಗೆಯ ದಿನ ಬ್ರಾಹ್ಮೀ
ಮುಹೂರ್ತದಲ್ಲಿ ಮಾಡಲು ಅಲೋಚಿಸಿದ್ದೆವು.
ಅದರಂತೆ ಪಾಡ್ಯದ ದಿನ ಮಧ್ಯಾನ್ಹ 12 ಕ್ಕೆ
ಬೆಂಗಳೂರಿನಿಂದ ಸಾರಿಗೆ ಬಸ್ಸಿನಲ್ಲಿ ಕುಳಿತು ಪಯಣಿಸಿ ಸಂಜೆ 6.30ಕ್ಕೆ
ತಿರುವಣ್ಣಾಮಲೈಯನ್ನು ತಲುಪಿದೆವು.
ಮುಂಚಿತವಾಗಿಯೇ ಕಾಯ್ದಿರಿಸಿದ್ದ ಒಂದು ಒಳ್ಳೆಯ ಹೋಟೆಲಿಗೆ ಹೋಗಿ
ಸ್ನಾನವನ್ನು ಮುಗಿಸಿ ಅಲ್ಲಿಂದ ಅರುಣಾಚಲನ ದರ್ಶನಕ್ಕೆ 7.30ಕ್ಕೆ
ಹೋದೆವು. ನನ್ನೊಂದಿಗೆ ಬಂದಿದ್ದ ಇಬ್ಬರಿಗೂ ದೇವಸ್ಥಾನದ ಬಗ್ಗೆ ವಿವರಗಳನ್ನು
ತಿಳಿಸಿದೆ. ಅದರಲ್ಲಿ ಮುಖ್ಯವಾದದ್ದು “ಪಾತಾಳ
ಲಿಂಗ” - ಇಲ್ಲೇ ಸುಮಾರು 16 ವರ್ಷ
ಪ್ರಾಯದ ರಮಣ ಮಹರ್ಷಿಗಳು (ಆಗಿನ ನಾಮಧೇಯ - ವೆಂಕಟರಮಣ) ದೇಹದ
ಮೇಲಿನ ವಸ್ತ್ರದ ಸಹಿತ ಎಲ್ಲವನ್ನೂ ವರ್ಜಿಸಿ ಅವಧೂತನಂತೆ 10 ದಿನಗಳ
ಪರ್ಯಂತ ಲೋಕದ ಗೊಡವೆಯಿಲ್ಲದೇ ನಿದ್ರಾಹಾರದ ಬಗೆಗೆ ನಿರಾಸಕ್ತಿಯನ್ನು ಹೊಂದಿ, ಹಾಗೂ
ಕ್ರಿಮಿ ಕೀಟಗಳ ಬಾಧೆಯನ್ನು ಲೆಕ್ಕಿಸದೇ ಸಮಾಧಿಸ್ಥಿತಿಯಲ್ಲಿದ್ದದ್ದು. ಈ
ವಿಷಯವನ್ನು ವಿವರಿಸಿ, ಅಲ್ಲಿಂದ ಕಾಲಭೈರವನ ಮಂದಿರಕ್ಕೆ ಹೋಗಿ ನಂತರ ಅರುಣಾಚಲೇಶ್ವರನ
ದರ್ಶನವನ್ನು ಪಡೆದೆವು. ಅದರ ನಂತರ ಅಪಿತ ಕುಚಾಂಬ (ಪಾರ್ವತಿ) ಅಮ್ಮನವರ
ದರ್ಶನವನ್ನು ಮಾಡಿಕೊಂಡು ಅಲ್ಲಿನ ಪ್ರಾಂಗಣದಲ್ಲೇ ಕುಳಿತು ಶಂಕರಭಾಗವತ್ಪಾದರು ರಚಿಸಿರುವ “ರಾಜರಾಜೇಶ್ವರಿ
ಅಷ್ಟಕ”ವನ್ನು ಸ್ತುತಿಸಿ ನಂತರ ಕಾಲಭೈರವನ ಮುಂದೆ ಬಂದು ಕಾಲಭೈರವಾಷ್ಟಕವನ್ನು
ಸ್ತುತಿಸಿ ಹೊರಬಂದು ರಾತ್ರೆಯ ಫಲಾಹಾರವನ್ನು ಸೇವಿಸಿ ಹೊಟೇಲಿಗೆ ಹೋಗಿ ನಿದ್ರಾದೇವಿಯ ತೋಳ್ತೆಕ್ಕೆಯಲ್ಲಿ
ಸೇರಿಕೊಂಡೆವು. ಬೆಳಗಿನ ಝಾವ 4 ಘಂಟೆಗೆ ಎದ್ದು ಸ್ನಾನಾದಿಗಳನ್ನು
ಮುಗಿಸಿಕೊಂಡು ಬ್ರಾಹ್ಮಿಮುಹೂರ್ತದಲ್ಲಿ ಬಿದಿಗೆ ಚಂದ್ರನ ಬೆಳದಿಂಗಲಿನಲ್ಲಿ ಪರಿಕ್ರಮವನ್ನು ಪ್ರಾರಂಭಿಸಿ
ಮಾರ್ಗದಲ್ಲಿ ಕ್ರಮವಾಗಿ ಇಂದ್ರ,
ಅಗ್ನಿ,
ಯಮ,
ನೈರುತ್ತಿ, ಸೂರ್ಯ, ವರುಣ, ವಾಯು, ಚಂದ್ರ, ಕುಬೇರ
ಹಾಗೂ ಈಶಾನ್ಯ ಲಿಂಗಗಳನ್ನು ದರ್ಶಿಸಿ ಹಾಗೂ ವರುಣ ಹಾಗೂ ವಾಯುಲಿಂಗಗಳ ನಡುವೆ ಇರುವ ಆದಿ ಅಣ್ಣಾಮಲೈ
ದೇವಸ್ಥಾನವನ್ನು ದರ್ಶಿಸಿದೆವು.
ನೈರುತ್ತಿ ಲಿಂಗದ ಬಳಿ ಬಂದಾಗ, ನಾನು
ಶ್ರೀಕಾಂತನಿಗೆ ಆ ಸ್ಥಳದಲ್ಲಿ ನಡೆದ ಮುಖ್ಯ ಘಟನೆಯಾದ ಕಾರ್ತಿಕ ಮಾಸದಲ್ಲಿ ಗಣಪತಿ ಮುನಿಗಳ ತಪಸ್ಸಿನಾಚಾರಣೆ
ಹಾಗೂ ಕಾರ್ತಿಕ ಶುಕ್ಲ ಚತುರ್ದಶಿಯ ದಿನ
(18-11-1907)ರಂದು ಅರುಣಾಚಾಲನ ಅನುಜ್ಞೆಯ
ಮೇರೆಗೆ ಇಲ್ಲಿಂದಲೇ ಹೇಗೆ ಗಣಪತಿ ಮುನಿಗಳು ಬೆಟ್ಟವನ್ನೇರಿ ಮೌನಿ ಸ್ವಾಮಿಯನ್ನು ಸಂಧಿಸಿ ಅವರಲ್ಲಿ
ಶರಣಾಗಿ ಉಪದೇಶವನ್ನು ಪಡೆದರು ಹಾಗೂ ಮೌನಿ ಸ್ವಾಮಿಗೆ ಭಗವನ್ ಶ್ರೀರಮಣ ಮಹರ್ಷಿಗಳೆಂದು ಹೊಸ ಹೆಸರನ್ನು
ಘೋಷಿಸಿದರು ಎಂಬ ವಿಷಯಗಳನ್ನು ವಿವರಿಸಿದೆ.
ಅನಂತರ ಮುಂಜಾನೆ 9.15ಕ್ಕೆ
ವಿರೂಪಾಕ್ಷ ಗುಹೆಯ ಮಾರ್ಗವನ್ನು ತಲುಪಿದೆವು.
ಇಲ್ಲಿಂದ ವಿರೂಪಾಕ್ಷ ಗುಹೆಗೆ ಸುಮಾರು ಏಳುನೂರು ಸಣ್ಣ ಪುಟ್ಟ
ಮೆಟ್ಟಲುಗಳನ್ನು ಹತ್ತಿದರೆ ನಮಗೆ ಸಿಗುವುದೇ ವಿರೂಪಾಕ್ಷ ಗುಹೆ.
ಬೆಟ್ಟ ಹತ್ತುವ ಮಾರ್ಗದಲ್ಲೇ
ನಮಗೆ ಮಾವಿನ ಮರಗಳ ತೋಪಿನಲ್ಲಿರುವ ಗುಹೆಯೊಂದು ಸಿಗುವುದು. ನಾನು
ನನ್ನೊಂದಿಗೆ ಬಂದಿದ್ದ ಇಬ್ಬರು ಸಹಚಾರಣಿಗರಿಗೂ ಆ ಗುಹೆಯ ಮಹತ್ವವನ್ನು ವಿವರಿಸಿದೆ. ಅದೇನೆಂದರೆ
ಇದೇ ಗುಹೆಯಲ್ಲಿ ಉಮಾದೇವಿಯು ಕಾವ್ಯಕಂಠ ಗಣಪತಿ ಮುನಿಗಳಿಗೆ ದರ್ಶನವನ್ನಿತ್ತದ್ದು ಹಾಗೂ ಉಮಾಸಹಸ್ರಮ್
ಕೃತಿಯನ್ನು ರಚಿಸಲು ಅಜ್ಞಾಪಿಸಿದ್ದು ಅಲ್ಲದೇ 1921ರಲ್ಲಿ “ಉಮಾಸಹಸ್ರಮ್” ಕೃತಿಯನ್ನು
ರಚಿಸಿದ್ದು ಹಾಗೂ ಆ ಸಮಯದಲ್ಲಿ ದೇವಿಯು ನಡೆಸಿದ ಪವಾಡ ಮತ್ತು 1922 ರಲ್ಲಿ ಗಣಪತಿಮುನಿಗಳಿಗೆ ಕಪಾಲ ಭೇದನವು ಸಿದ್ಧಿಸಿದ್ದು ಹಾಗೂ ಆಗ ಅವರಿಗೆ ಉಂಟಾದ ಅನುಭವಗಳನ್ನು
ವಿವರಿಸಿದೆ. ಅನಂತರ ನಾವುಗಳು ಐದು ನಿಮಿಷಗಳ ಚಾರಣದ ನಂತರ ವಿರೂಪಾಕ್ಷ ಗುಹೆಯನ್ನು
ತಲುಪಿ ಅಲ್ಲಿ ಸ್ವಲ್ಪಹೊತ್ತು ಕುಳಿತಿದ್ದು ಮರಳಿ ಬೆಟ್ಟವನ್ನಿಳಿಯುವಾಗ ವಿರೂಪಾಕ್ಷ ಗುಹೆಯಲ್ಲಿನ
ರಮಣ ಮಹರ್ಷಿಗಳ ಹದಿನೇಳು ವರ್ಷಗಳ ವಾಸ್ತವ್ಯದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳಾದ ಗಣಪತಿ ಮುನಿ ಹಾಗೂ
ರಮಣ ಮಹರ್ಷಿಗಳ ಭೇಟಿ, ಗಣಪತಿ ಮುನಿಗಳಿಗೆ ರಮಣ ಮಹರ್ಷಿಗಳಿಂದ ಉಪದೇಶ, ಗಣಪತಿ
ಮುನಿಗಳಿಗೆ ಉಮಾದೇವಿಯ ಅನುಗ್ರಹ ಇತ್ಯಾದಿ ವಿಷಯಗಳನ್ನು ನನ್ನೊಂದಿಗೆ ಬಂದಿದ್ದ ಶ್ರೀಕಾಂತ್ ಅವರಿಗೆ
ವಿವರಿಸಿದೆ. 
ಬೆಟ್ಟವನ್ನಿಳಿದು ಮತ್ತೊಮ್ಮೆ
ಅರುಣಾಚಲ ಮಂದಿರಕ್ಕೆ ಹೋಗಿ ದರ್ಶನದ ನಂತರ ಮಂದಿರದ ಪ್ರಾಕಾರದಲ್ಲಿರುವ ಒಂದು ಮಂಟಪದಲ್ಲಿ ನಾನು ಹಾಗೂ
ರವಿಂದ್ರ ಇಬ್ಬರೂ ಕುಳಿತು ಸುಮಾರು
45 ನಿಮಿಷಗಳಲ್ಲಿ ರುದ್ರ-ಚಮಕಗಳನ್ನು
ಪಠಿಸಿದೆವು. ಅನಂತರ ಹೊರಬಂದು ಒಂದು ಹೋಟೆಲಿನಲ್ಲಿ ಊಟಮಾಡಿ 2 ಘಂಟೆಗೆ
ಬೆಂಗಳೂರಿನೆಡೆಗೆ ಪಯಣಿಸಿದೆವು.
Comments
Post a Comment