ರಾಷ್ಟ್ರೀಯ
ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018
ನವೆಂಬರ್ 2018ರಲ್ಲಿ
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಗುಜರಾತ್ ಶಾಖೆಯ ಕಾರ್ಯದರ್ಶಿಯಾದ ಶ್ರೀ ಅನಂತ್
ಪಾರಮಾರ್ ಅವರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತರಾದ
ಐದು ಜನ ಅಧಿಕಾರಿಗಳಿಗೆ ಜುನಾಘಡ್ ನಲ್ಲಿನ ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ವಿಶೇಷವಾದ ಆಹ್ವಾನ
ಬಂದಿತು. ಈ ಐದು ನಿವೃತ್ತ ಅಧಿಕಾರಿಗಳೆಂದರೆ ಸರ್ವಶ್ರೀ.ಪಾಲಹಳ್ಳಿ
ರಮೇಶ, ಕೆ.ವೆಂಕಯ್ಯಸುಬ್ಬಯ್ಯ, ಸುರೇಶ
ಬಾಬು, ಹೆಚ್.ಆರ್.ಗುರುರಾಜ್ ಹಾಗೂ ಈ ಲೇಖನ ಪ್ರಸ್ತುತಿ ಪಡಿಸುತ್ತಿರುವ ಗುರುಪ್ರಸಾದ್
ಹಾಲ್ಕುರಿಕೆ. ಈ ಆಹ್ವಾನ ಬರಲು ತೆರೆ ಮರೆಯಲ್ಲಿ ಕೆಲಸಮಾಡಿದವರೆ ಶ್ರೀ.ರಮೇಶ್.
ಈ ಚಾರಣದ ಬಗ್ಗೆ ಚರ್ಚಿಸಲು
ಐದೂ ಜನರು ಒಂದೆಡೆ ಸೇರಿದೆವು.
ರಮೇಶ್ ಅವರು ಚಾರಣದ ಜೊತೆಗೆ ಸುತ್ತ ಮುತ್ತಲಿನ ಕೆಲವು ತೀರ್ಥ
ಕ್ಷೇತ್ರ ಹಾಗೂ ಚಾರಿತ್ರಿಕ ಸ್ಥಳಗಳನ್ನೂ ಸಂದರ್ಶಿಸಬಹುದೆಂದು ಸಲಹೆ ನೀಡಿದರು. ರಮೇಶನು
ಹೇಳಿದನೆಂದ ಮೇಲೆ ಅದರ ಬಗ್ಗೆ ಬೇರೆಯವರು ಮಾತನಾಡುವುದುಂಟೆ! ಎಲ್ಲರೂ
ಅದಕ್ಕೆ ಒಪ್ಪಿದೆವು.
ಮೊದಲಿಗೆ ಚಾರಣದ ವಿವರಗಳು
ಈ ರೀತಿಯಾಗಿತ್ತು :
ವೈಹೆಚ್ಎಐ
ಬೇಸ್ ಕ್ಯಾಂಪ್
- ಪಂಡಿತ್ ದೀನ ದಯಾಳ್ ಉಪಾಧ್ಯಾಯಿ ಪರ್ವತಾ
ರೋಹಣ ಸಂಸ್ಥೆ.
●      ವೈಹೆಚ್ಎಐ ಬೇಸ್ ಕ್ಯಾಂಪ್ - ಸಕ್ಕರ್
ಬಾಗ್ ಪ್ರಾಣಿಸಂಗ್ರಹಾಲಯ  - 6 ಕಿ.ಮೀ
(ಅಂದಾಜು) - ಆಟೋರಿಕ್ಷಾ
ದಲ್ಲಿ ಪಯಣ.
●      ವೈಹೆಚ್ಎಐ ಬೇಸ್ ಕ್ಯಾಂಪ್ ನಿಂದ ಪತ್ಥರ್ ಚಟ್ಟಿಯೆಡೆಗೆ ಚಾರಣ - 10 ಕಿ.ಮೀ
(ಅಂದಾಜು)
●      ಪತ್ಥರ್ ಚಟ್ಟಿಯಿಂದ ವೈಹೆಚ್ಎಐ ಬೇಸ್ ಕ್ಯಾಂಪ್ ಗೆ ಮರು ಚಾರಣ - 10 ಕಿ.ಮೀ
- ಅನಂತರ ದೇವಾಲಿಯಾ ಪಾರ್ಕ್ ಗೆ ಹೋಗುವುದು (50 ಕಿ.ಮೀ), ಅಲ್ಲಿಂದ
ಜುನಾಘಡ್ ರಸ್ತೆಯ ಮಾರ್ಗವಾಗಿ ಭಾವನಾಥ್ ತಲೇಟಿ (ಗಿರ್ ಅರಣ್ಯಕ್ಕೆ) ತಲುಪುವುದು - 46 ಕಿ.ಮೀ.
●      ಗಿರ್ ಅರಣ್ಯದಿಂದ ಸೋಮನಾಥ್ ಮಂದಿರಕ್ಕೆ ಭೇಟಿ - 95 ಕಿ.ಮೀ
-  ಹಾಗೂ ಡಿಯೂ ದ್ವೀಪದೆಡೆಗೆ
- 85 ಕಿ.ಮೀ - ಸೋಮನಾಥ್
ಮಾರ್ಗವಾಗಿ ಮರಳಿ ಜುನಾಗಡ್ ಬೇಸ್ ಕ್ಯಾಂಪ್ ಗೆ. - 177 ಕಿ.ಮೀ.
ನಾನು ಮೊದಲೇ ತಿಳಿಸಿದಂತೆ
ನಾವುಗಳು ಬೆಂಗಳೂರಿನಿಂದ ಅಹಮದಾಬಾದ್ ನಗರಕ್ಕೆ ಒಂದು ದಿನ ಮುಂಚಿತವಾಗಿ ವಿಮಾನದ ಮೂಲಕ ರಾತ್ರೆ 9.30ಕ್ಕೆ
ತಲುಪಿದೆವು. ಅಲ್ಲಿಂದ ದ್ವಾರಕಾ ಕ್ಷೇತ್ರಕ್ಕೆ ರಾತ್ರೆ 11.00 ಕ್ಕೆ ಹೊರಡುವ ಮಲಗಿ ಪಯಣಿಸುವ ಬಸ್ಸಿನಲ್ಲಿ ಪ್ರಯಾಣ ಮಾಡಿ ಮುಂಜಾನೆ 8.30ಕ್ಕೆ
ದ್ವಾರಕಾ ಕ್ಷೇತ್ರವನ್ನು ತಲುಪಿದೆವು.
ಅನಂತರ ಒಂದು ಹೋಟೆಲಿನಲ್ಲಿ ಎಲ್ಲರೂ ಸ್ನಾನ, ಉಪಹಾರವನ್ನು
ಮುಗಿಸಿ ಶ್ರೀಕೃಷ್ಣನ ದರ್ಶನವನ್ನು ಮಾಡಿ ಅಲ್ಲಿಂದ ರುಕ್ಮಿಣಿ ಮಂದಿರ, ನಾಗೇಶಮ್
ಹಾಗೂ ಭೇಟ್ ದ್ವಾರಕಾಗಳನ್ನು ಸಂದರ್ಶಿಸಿ ರಾತ್ರೆ ಊಟದ ನಂತರ ಹೊಟೇಲನ್ನು ತಲುಪಿ ವಿಶ್ರಾಂತಿಯನ್ನು
ಪಡೆದೆವು. ಮಾರನೇದಿನ ಮುಂಜಾನೆ ಉಪಹಾರದ ನಂತರ ಒಂದು ಬಾಡಿಗೆ ಕಾರಿನಲ್ಲಿ
ಜುನಾಘಢದೆಡೆಗೆ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ನಾವಿದ್ದ ಹೋಟೆಲಿನಿಂದ ಗುರುರಾಜನಿಗೆ
ಫೋನು ಬಂದು ರೂಮಿನಲ್ಲಿ ಯಾರೋ ಚಾರಣದ ಕೋಲನ್ನು ಬಿಟ್ಟು ಹೋಗಿರುವರು ಎಂದು ಹೋಟೆಲಿನ ಮ್ಯಾನೇಜರನು
ತಿಳಿಸಿದನು. ಆಗ ಮಾಮೂಲಿನಂತೆ ವೆಂಕಯ್ಯಸುಬ್ಬಯ್ಯನಿಗೆ ತಾನು ಜೊತೆಗೆ ತಂದಿದ್ದ
ಚಾರಣದ ಕೋಲನ್ನು ಹೋಟೆಲಿನಲ್ಲೇ ಬಿಟ್ಟುಬಂದಿರುವುದು ನೆನಪಾಯಿತು. ಎಲ್ಲರೂ
ಅವನ ಮರೆವಿಗೆ ಶಾಪ ಹಾಕಿ ಮರಳಿ ಹೋಟೆಲಿಗೆ ಹೋಗಲು ನಿರಾಕರಿಸಿದರು. ವಿಧಿಯಿಲ್ಲದೆ
ಸುಬ್ಬಯ್ಯನು ಹೋಟೆಲಿಗೆ ಫೋನ್ ಮಾಡಿ ಆ ಕೋಲನ್ನು ಅವರ ಬಳಿಯೇ ಇಟ್ಟುಕೊಂಡಿರುವಂತೆ ವಿನಂತಿಸಿಕೊಂಡನು. ಹೀಗೆ
ಮುಂದುವರೆದ ನಾವುಗಳು ಮಾರ್ಗ ಮಧ್ಯದಲ್ಲಿ ಪೋರಬಂದರನ್ನು ತಲುಪುವುದಕ್ಕೆ 30 ಕಿ.ಮೀ
ಮೊದಲೇ ಹರಸಿದ್ಧಿ ಮಾತಾಜಿ ಮಂದಿರವನ್ನು ತಲುಪಿದೆವು. ಈ
ಮಂದಿರವು ಕೊಯಲ್ ಬೆಟ್ಟದ ಬುಡದಲ್ಲಿರುವುದು.
ಈ ಮಂದಿರದಲ್ಲಿನ ದೇವಿಯು ಇಲ್ಲಿನ ಕ್ಷತ್ರಿಯ, ಬ್ರಾಹ್ಮಣ, ರಾಜಪೂತರು
ಹಾಗೂ ವ್ಯಾಪಾರಿಗಳಿಗೆ ಕುಲದೈವ.
ಹತ್ತಿರದಲ್ಲೇ ಮಿಯಾನಿ ಹಳೆಯ ಬಂದರು ಪಟ್ಟಣವು ಇರುವುದು. ಈ
ಮಂದಿರವನ್ನು ಹದಿಮೂರನೇ ಶತಮಾನದಲ್ಲಿ ಕಛ್ ಪ್ರದೇಶದಲ್ಲಿನ ಜಗದು ಎಂಬ ವರ್ತಕನು ಕಟ್ಟಿಸಿದನೆಂದು ಸ್ಥಳೀಯ
ಚರಿತ್ರಕಾರರು ತಿಳಿಸಿದ್ದಾರೆ.
ಗರ್ಭಗುಡಿಯೊಳಗಿನ ದೇವಿಯ ಮೂರ್ತಿಯ ಬಲಗಡೆ ಈ ವರ್ತಕನ ವಿಗ್ರಹವನ್ನೂ
ಪ್ರತಿಷ್ಠಾಪಿಸಲಾಗಿದೆ. ಈ ಮಂದಿರಕ್ಕೆ ಸಂಬಂಧಿಸಿದ ದಂತಕಥೆಯೊಂದರ ಪ್ರಕಾರ - 
ಮೊದಲಿಗೆ ಈ ಮಂದಿರದಲ್ಲಿನ
ದೇವಿಯು ಬೆಟ್ಟದ ಮೇಲೆ ಸಮುದ್ರದೆಡೆಗೆ ಮುಖಮಾಡಿಕೊಂಡಿರುವಂತೆ ಸ್ಥಾಪಿಸಲಾಗಿತ್ತು. ಈ
ದೇವಿಯ ದೃಷ್ಟಿಯು ಸಮುದ್ರದಲ್ಲಿ ತೇಲುತ್ತಾ ಬರುವ ಯಾವುದೇ ಹಡಗು ಅಥವಾ ದೋಣಿಯ ಮೇಲೆ ಬಿದ್ದರೆ ಕೂಡಲೇ
ಅದು ಸುಟ್ಟುಹೋಗುವುದು ಇಲ್ಲವೇ ಒಡೆದು ಹೋಗುತ್ತಿತ್ತು ಎಂಬುದಾಗಿ ಅಲ್ಲಿನ ಜನಗಳ ನಂಬಿಕೆಯಾಗಿತ್ತು. ಒಮ್ಮೆ
ವರ್ತಕ ಜಗದುವಿನ ಹಡಗೂ ಸಹ ಇದೇರೀತಿ ಒಡೆದು ಸಮುದ್ರದಲ್ಲಿ ಮುಳುಗಿತು, ಆದರೆ
ಜಗದು ಬದುಕುಳಿದನು. ಜಗದು ಮಂದಿರಕ್ಕೆ ಬಂದು ಅಲ್ಲೇ ದೇವಿಯನ್ನು ಸಂತೃಪ್ತಿಪಡಿಸಲು
ಮೂರು ದಿನಗಳ ಕಾಲ ಉಪವಾಸವನ್ನು ಮಾಡಿದನು.
ನಂತರ ಅವನ ಕನಸಿನಲ್ಲಿ ದೇವಿಯು ಬಂದಾಗ, ಅವನು
ದೇವಿಯನ್ನು ಅವಳ ದೃಷ್ಟಿಯು ಸಮುದ್ರದಮೇಲಿನ ಹಡಗುಗಳ ಮೇಲೆ ಬೀಳದಂತೆ ಬೆಟ್ಟದ ಮೇಲಿಂದ ಕೆಳಗೆ ಬರುವಂತೆ
ಪ್ರಾರ್ಥಿಸಿಕೊಂಡನು. ಅವಳು ಅದಕ್ಕೆ ಸಮ್ಮತಿಸಿ ತಾನು ಕೆಳಗೆ ಬರಬೇಕಾದರೆ ಬೆಟ್ಟದಲ್ಲಿರುವ
ಪ್ರತಿಯೊಂದು ಮೆಟ್ಟಲಿಗೂ ಒಂದೊಂದು ಎಮ್ಮೆ/ಕೋಣವನ್ನು ಬಲಿಕೊಡಬೇಕೆಂದು ತಿಳಿಸಿದಳು. ಜಗದುವು
ಜೈನ ಮತಸ್ಥನಾಗಿದ್ದು ಅಹಿಂಸೆಯಲ್ಲಿ ನಂಬಿಕೆ ಇಟ್ಟವನಾಗಿದ್ದರಿಂದ ಅವನಿಗೆ ಪ್ರಾಣಿಬಲಿಯ ಶರತ್ತನ್ನು
ಅಲಿಸಿ ಒಂದು ರೀತಿಯ ಮುಜುಗರವಾಯಿತು.
ವಿಧಿಯಿಲ್ಲದೆ ಅವನು ಎಮ್ಮೆಗಳನ್ನು ತರಿಸಿ ಮೆಟ್ಟಲಿಗೊಂದರಂತೆ
ಬಲಿಕೊಡತೊಡಗಿದನು. ಆದರೆ ಎಮ್ಮೆಗಳು ಸಾಕಾಗದೇ ಕೊನೆಯ ಕೆಲವು ಮೆಟ್ಟಲಲ್ಲಿ ಬಲಿಕೊಡಲು
ತನ್ನ ಕುಟುಂಬದ ಸದಸ್ಯರನ್ನು ಬಲಿಕೊಟ್ಟು ಕೊನೆಯ ಮೆಟ್ಟಲಿಗೆ ತನ್ನನ್ನೇ ಬಲಿಕೊಡಲು ಸಿದ್ಧನಾಗುತ್ತಾನೆ, ಆಗ
ದೇವಿಯು ಅವನ ಭಕ್ತಿ ಹಾಗೂ ತ್ಯಾಗ ಮನೋಭಾವವನ್ನು ಮೆಚ್ಚಿ ಪ್ರತ್ಯಕ್ಷಳಾಗಿ ಅವನ ಕುಟುಂಬದವರೆಲ್ಲರಿಗೂ
ಜೀವವನ್ನು ಮರಳಿ ನೀಡಿ ಅವನ ವಂಶವು ಎಂದಿಗೂ ಕೊನೆಗೊಳ್ಳದಂತೆ ಹರಸಿದಳು. 
ನಾವು ಕೆಳಗಿನ ಮಂದಿರವನ್ನು
ವೀಕ್ಷಿಸಿ 290 ಮೆಟ್ಟಲುಗಳ ಬೆಟ್ಟವನ್ನು ಹತ್ತಿ ಮೇಲೆ ಹೋದೆವು. ಅಲ್ಲಿಂದ
ಅರಬ್ಬೀ ಸಮುದ್ರವು ಸುಂದರವಾಗಿ ಕಾಣಿಸುವುದು.
ಬೆಟ್ಟದ ಮೇಲೆ ಒಂದು ಪುರಾತನ ಶಿವ ಮಂದಿರವಿರುವುದು. ಆದರೆ
ಮಂದಿರದಲ್ಲಿ ಶಿವಲಿಂಗವಿಲ್ಲ, ಏಕೆಂದರೆ ಸ್ಥಳೀಯರ ಪ್ರಕಾರ ಮುಸಲ್ಮಾನರು ಧಾಳಿಮಾಡಿದಾಗ ಈ ಶಿವಲಿಂಗವನ್ನು
ನಾಶಮಾಡಿದರು ಎಂಬುದಾಗಿ ತಿಳಿದು ಬರುವುದು.
ಈಗಲೂ ಭಕ್ತಾದಿಗಳು ಬೆಟ್ಟದ ಮೇಲೆ ಹೋಗುವಾಗ ಪ್ರತಿಯೊಂದು ಮೆಟ್ಟಲಲ್ಲೂ
ಒಂದು ತೆಂಗಿನ ಕಾಯಿಯನ್ನು ಒಡೆದು ಅಲ್ಲಿಟ್ಟು ಮುಂದೆ ಹತ್ತುವರು. ಇದು
ದೇವಿಗೆ ಬಲಿಯನ್ನು ಅರ್ಪಿಸುವ ಸಂಕೇತ.
ಅನಂತರ ನಾವು ಪೋರಬಂದರ್
ಮಾರ್ಗವಾಗಿ ಮೂಲದ್ವಾರಕ ಮಂದಿರವನ್ನು ಸಂದರ್ಶಿಸಿ ಸಂಜೆ ಐದು ಘಂಟೆಯ ಹೊತ್ತಿಗೆ YHAI ಬೇಸ್ ಕ್ಯಾಂಪನ್ನು ತಲುಪಿದೆವು.
ನಾವು ಕ್ಯಾಂಪನ್ನು ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಗುಜರಾತಿನ YHAI ಶಾಖೆಯ ಅಸಿಸ್ಟೆಂಟ್ ಡೈರೆಕ್ಟರ್,
ಶ್ರೀ.ಕಿಶೋರ್ ವಘೇಲಾ ಸ್ವಾಗತಿಸಿದರು. ಅನಂತರ
ಕೆಲವೇ ನಿಮಿಷದಲ್ಲಿ ಕಾರ್ಯದರ್ಶಿ ಶ್ರೀ.ಅನಂತ ಪಾರಮಾರ್ ಅವರೂ ಬಂದು ನಮ್ಮನ್ನು ಸ್ವಾಗತಿಸಿ, ನಮಗೆ
ವಿಶಾಲವಾದ ಒಂದು ಹಾಲನ್ನು ಉಳಿದುಕೊಳ್ಳಲು ನೀಡಿದರು. ಇದಲ್ಲದೇ
ಇನ್ನೂ ಕೆಲವು ಬಿಡಾರಗಳು ಹಾಗೂ ಕೋಣೆಗಳು ಅಲ್ಲಿ ಇದ್ದವು. ಇವೆಲ್ಲವೂ
ದಟ್ಟವಾದ ಮರಗಳಿಂದ ಕೂಡಿದ ಎರಡು ಎಕರೆ ಕಾಡಿನಲ್ಲಿ ಹಾಗೂ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇತ್ತು. ವಾತಾವರಣ
ಅತಿ ಸುಂದರವಾಗಿತ್ತು. ಚಹಾ ಸೇವನೆಯ ನಂತರ ನಮ್ಮನ್ನು ಒಂದು ಆಟೋರಿಕ್ಷಾದಲ್ಲಿ ಸುಮಾರು
ಆರು ಕಿ.ಮೀ ದೂರದಲ್ಲಿರುವ ಶಕ್ಕರ್ ಬಾಗ್ ಪ್ರಾಣಿ ಸಂಗ್ರಹಾಲಯಕ್ಕೆ ಕರೆದೊಯ್ದರು. ಅಲ್ಲಿಗೆ
ಆಗಲೇ ಉಳಿದ ಚಾರಣಿಗರು ಬಂದಿದ್ದರು.
ನಾವೂ ಒಳಗೆ ಹೋಗಿ ಹುಲಿ, ಸಿಂಹಗಳ
ನ್ನೊಳಗೊಂಡ ಹಲವಾರು ವನ್ಯ ಜೀವಿಗಳನ್ನು ವೀಕ್ಷಿಸಿದೆವು. ಸುಮಾರು
ಏಳು ಘಂಟೆಯ ಹೊತ್ತಿಗೆ ಮರಳಿ ಕ್ಯಾಂಪಿಗೆ ಬಂದೆವು. ಸ್ವಲ್ಪ ಸಮಯದಲ್ಲಿ
ಅನಂತ ಪಾರಮಾರ್ ಅವರ ನೇತೃತ್ವದಲ್ಲಿ ಸಭೆ ಸೇರಿ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಂಡು ರಾತ್ರೆ ಊಟದ
ನಂತರ ಮಲಗಿದೆವು.
ಎರಡನೇ ದಿನ ಎಲ್ಲರೂ
ನಿಧಾನವಾಗಿ ಎದ್ದರೆ, ನಾನು ಹಾಗೂ ಗುರುರಾಜನು ಬೇಗ ಎದ್ದು ಮುಂಜಾನೆಯ ನಡಿಗೆಯ ಕಾರ್ಯಕ್ರಮದಲ್ಲಿ
ಮುಖ್ಯ ರಸ್ತೆಯಲ್ಲಿದ್ದ ದಾಮೋದರ ಕುಂಡವನ್ನು ವೀಕ್ಷಿಸಲು ಸುಮಾರು ಒಂದು ಕಿ.ಮೀ
ನಡೆದುಕೊಂಡು ಹೋದೆವು. 
ಹಿಂದುಗಳಿಗೆ ದಾಮೋದರ
ಕುಂಡವು ಅತ್ಯಂತ ಪವಿತ್ರ ಸರೋವರ.
ಗಿರಿನಾರ್ ಬೆಟ್ಟದ ಬುಡದಲ್ಲಿರುವುದು. ಈ
ಸರೋವರದಲ್ಲಿ ಹಿಂದೂಗಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳಾದ ಚಿತಾ ಭಸ್ಮ ವಿಸರ್ಜನೆಯನ್ನು ಮಾಡುವರು. ಈ
ಸರೋವರವು 257 ಅಡಿ ಉದ್ದ ಹಾಗೂ 50 ಅಡಿ
ಅಗಲ ಮತ್ತು 5 ಅಡಿ ಆಳವಿರುವುದು. ಈ
ಸರೋವರದ ಬಳಿ ಶಿವ ಪಾರ್ವತಿಯರು ಇಲ್ಲಿ ವಿಹರಿಸುತ್ತಿದ್ದಾಗ ಅವರ ವಸ್ತ್ರಗಳು ಇಲ್ಲಿ ಬಿದ್ದಿತ್ತೆಂದು
ಪೌರಾಣಿಕ ಹೇಳಿಕೆ.  ಈ
ಸರೋವರದ ಬಳಿಯೇ ರೇವತಿ ಕುಂಡ ಎಂಬ ಮತ್ತೊಂದು ಕೊಳವಿರುವುದು. ಈ
ಸರೋವರದ ದಕ್ಷಿಣ ದಿಕ್ಕಿನಲ್ಲಿ ಗಿರಿನಾರ್ ಪರ್ವತ ಶ್ರೇಣಿಯಲ್ಲಿನ ಅಶ್ವತ್ಥಾಮ ಬೆಟ್ಟದ ಬುಡದಲ್ಲಿ
ದಾಮೋದರ ಹರಿ ಮಂದಿರ ವಿರುವುದು.
ಈ ಮಂದಿರದಲ್ಲಿನ ವಿಗ್ರಹವನ್ನು ಶ್ರೀ ಕೃಷ್ಣನ ಮೊಮ್ಮಗ ವಜ್ರನಾಭನು
ಪ್ರತಿಷ್ಠಾಪಿಸಿದನೆಂದು ಐತಿಹ್ಯವಿದೆ.
ಚಾರಿತ್ರಿಕವಾಗಿ ಈ ಮಂದಿರವನ್ನು ಪುನರುಜ್ಜೀವಿತಗೊಳಿಸಿದ್ದು
ಸೂರ್ಯವಂಶದ ರಾಜ ಚಂದ್ರಕೇತಪುರ.
ನಂತರ ಕ್ರಿ.ಶ.462 ರಲ್ಲಿ
ಈ ಮಂದಿರವನ್ನು ಮತ್ತೊಮ್ಮೆ ಗುಪ್ತ ವಂಶದ ಸ್ಕಂದಗುಪ್ತನು ಪುನರುಜ್ಜೀವನಗೊಳಿಸಿದನು. ವೈಷ್ಣವ
ಪಂಥಾನುಯಾಯಿಗಳು ದಾಮೋದರ ಭಗವಾನನನ್ನು ಗಿರಿನಾರ್ ಕ್ಷೇತ್ರದ ಅಧಿಪತಿಯೆಂದು ಪರಿಗಣಿಸುವರು. 
ಆದರೆ ನಾವು ಕಂಡ ದಾಮೋದರ
ಕುಂಡದ ಪರಿಸ್ಥಿತಿಯು ನಮ್ಮನ್ನು ನಿರಾಸೆಗೊಳಿಸಿತು. ಕುಂಡದಲ್ಲಿನ ನೀರು
ಕೊಳೆತು ದುರ್ವಾಸನೆಯಿಂದ ಕೂಡಿದ್ದು ಅದರ ಬಳಿಯೇ ಕೆಲವು ಗುಂಪುಗಳು ಅಪರ ಕರ್ಮಗಳನ್ನು ನಡೆಸುತ್ತಿದ್ದವು. ನಿರಾಸೆಯಿಂದ
ನಾವು ಕ್ಯಾಂಪಿಗೆ ಮರಳಿದೆವು. ಅನಂತರ ನಾವು ಸ್ನಾನ ಹಾಗೂ ಉಪಹಾರವನ್ನು ಮುಗಿಸಿ ಎಲ್ಲರೂ 9 ಘಂಟೆಗೆ
ಗಿರಿನಾರ್ ಬೆಟ್ಟದೆಡೆಗೆ ಚಾರಣ ಮಾಡಲು ಹೊರಟೆವು.
ಗಿರಿನಾರ್ ಬೆಟ್ಟದ
ಬಗ್ಗೆ ಸ್ವಲ್ಪ ಮಾಹಿತಿ :
ಜುನಾಘಡ್ ನಗರದಿಂದ 5 ಕಿ.ಮೀ
ದೂರದಲ್ಲಿ ಗಿರಿನಾರ್ ಬೆಟ್ಟಗಳ ಸಮೂಹವನ್ನು ನೋಡಬಹುದು. ಈ
ಬೆಟ್ಟಗಳ ಉಗಮವನ್ನರಿಯಲು ವೇದಗಳ ಕಾಲಕ್ಕೆ ಹೋಗಬೇಕು. ಮೊಹೆಂಜೋದಾರೋ
ಸಮಯಕ್ಕಿಂತಲೂ ಹಿಂದಿನ ದಿನಗಳಿಂದಲೇ ಈ ಪ್ರದೇಶವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಪರಿಗಣಿಸಲಾಗಿತ್ತು. ಹಿಂದೂ
ಹಾಗೂ ಜೈನ ಯಾತ್ರಾರ್ಥಿಗಳಿಗೆ ಇದು ಪವಿತ್ರ ಕ್ಷೇತ್ರ. ಹಲವಾರು
ಚಾರಣ ಪಥಗಳು, ಧಾರ್ಮಿಕ ತಾಣಗಳು ಮತ್ತು ಪ್ರಾಗೈತಿಹಾಸಿಕ ತಾಣಗಳು ಹಾಗೂ ಶಿಖರಗಳನ್ನು
ವೀಕ್ಷಿಸಬಹುದು.
ಈ ಬೆಟ್ಟದ ಬಗ್ಗೆ ಮತ್ತಷ್ಟು
ಮಾಹಿತಿಗಳು :
ಗಿರಿನಾರ್ ಬೆಟ್ಟವು 1100 ಮೀ (3630) ಅಡಿ ಎತ್ತರವಿದ್ದು ಅದು ಅಳಿದುಹೋಗಿರುವ ಜ್ವಾಲಾಮುಖಿ. ಬೆಟ್ಟದ
ತುದಿಯಿಂದ ಸುಮಾರು 600 ಅಡಿ ಕೆಳಗಿಳಿದರೆ ಸಮತಟ್ಟಾದ ಪ್ರದೇಶದಲ್ಲಿ ಕ್ರಿ.ಶ.1128 ರಿಂದ 1500ರರ ಅವಧಿಯಲ್ಲಿ ಕಟ್ಟಲಾಗಿರುವ ಸುಂದರವಾದ ಕೆತ್ತನೆಗಳನ್ನೊಳಗೊಂಡ
ಜೈನರ ದೇವಾಲಯಗಳ ಸಂಕಿರಣವನ್ನು ನೋಡಬಹುದು.
ಇದೇ ಸ್ಥಳದಲ್ಲಿ 700 ವರ್ಷ
ಜೀವಿಸಿದ್ದ ಜೈನರ 22ನೆ ತೀರ್ಥಂಕರ ನೇಮಿನಾಥನು ದೇಹತ್ಯಾಗ ಮಾಡಿದನೆಂದು ಪ್ರತೀತಿ. ಇಲ್ಲಿ 1177 ರಲ್ಲಿ ನಿರ್ಮಿಸಿದ ಮಲ್ಲಿನಾಥ ಮಂದಿರವು ಈಗಲೂ ಅತ್ಯಂತ ಸುಂದರವಾಗಿ ಕಂಗೊಳಿಸುತ್ತದೆ. 3330 ಅಡಿ ಹತ್ತಿದರೆ ನಮಗೆ ಸಿಗುವುದೇ
12ನೇ ಶತಮಾನದ ಸುಪ್ರಸಿದ್ಧವಾದ ಮಾತಾ
ಅಂಬಾಜಿ ಮಂದಿರ. ಇಲ್ಲಿಂದ ಸ್ವಲ್ಪ ಕೆಳಗಿಳಿದು ಮತ್ತೆ ಮೇಲೇರಿದರೆ 3666 ಅಡಿ ಎತ್ತರದಲ್ಲಿ ನಮಗೆದುರಾಗುವುದೇ ಗೋರಖನಾಥ ಶಿಖರ. ಇಲ್ಲಿ
ಋಷಿ ಗೋರಖನಾಥನ ಕಾಲಿನ ಮುದ್ರೆಯನ್ನು ನೋಡಬಹುದು. ಇದು ಈ ಪರ್ವತದ ಅತ್ಯಂತ
ಎತ್ತರದ ಜಾಗ. (ನಾವು ಇಲ್ಲಿಯವರೆಗೂ ಹೋಗಲಾಗಲಿಲ್ಲ). ಇಲ್ಲಿಂದ
ಮತ್ತೆ ಕೆಲವು ಮೆಟ್ಟಿಲುಗಳನ್ನು ಇಳಿದರೆ ನಮಗೆ ಕಮಂಡಲ ಕುಂಡವು ಎದುರಾಗುವುದು ಹಾಗೂ ಮತ್ತೊಂದು ಶಿಖರದಲ್ಲಿ
ದತ್ತಾತ್ರೇಯರ ಪಾದ ಮುದ್ರೆಯನ್ನು ಗಮನಿಸಬಹುದು. ಇಲ್ಲಿಗೆ ತಲುಪುವುದು
ಅತ್ಯಂತ ಕಠಿಣವಾದದ್ದು. (ಇಲ್ಲಿಯವರೆಗೂ ನಮ್ಮ ಗುಂಪಿನ ಗುರುರಾಜ ಮಾತ್ರ ಹೋಗಲು ಸಾಧ್ಯವಾಯಿತು). ಇಲ್ಲಿಂದ
ಯಾವುದೇ ಮೆಟ್ಟಿಲುಗಲಿಲ್ಲದಿದ್ದರೂ ಸಾಹಸಿ ಪರ್ವತಾರೋಹಿಗಳು ಕಾಲುದಾರಿಯಲ್ಲಿ ಸ್ವಲ್ಪ ದೂರ ಹತ್ತಿಹೋದರೆ
ಮತ್ತೊಂದು ಶಿಖರವು ಕಾಣುವುದು.
ಅಲ್ಲಿ ಕಾಳಿಕಾ ಮಾತೆಯ ಮಂದಿರವಿರುವುದು. ಯಾತ್ರಾರ್ಥಿಗಳು
ಬೆಟ್ಟದ ತುದಿಯನ್ನು ತಲುಪಲು 9999 ಮೆಟ್ಟಲುಗಳನ್ನು ಹತ್ತಬೇಕು. 
ಇದನ್ನು ಹತ್ತಲು 5 - 6 ಘಂಟೆ ಸಮಯವು ಬೇಕಿರುವುದು.
ನಮ್ಮಂತಹ ಹಿರಿಯ ನಾಗರಿಕರಿಗೆ ಇದರ ಎರಡರಷ್ಟು ಸಮಯ ಬೇಕು. YHAI ಸಂಸ್ಥೆಯು ನಮ್ಮನ್ನು ಸುಮಾರು
4000 ಮೆಟ್ಟಿಲುಗಳನ್ನು ಹತ್ತಿದ ನಂತರ ಸಿಗುವ
ಪಥರ್ ಚೆಟ್ಟಿಯವರೆಗೂ ಕರೆದುಕೊಂಡು ಹೋಗಿ ಅಲ್ಲಿ ಒಂದು ರಾತ್ರೆ ತಂಗುವ ವ್ಯವಸ್ಥೆಯನ್ನು ಮಾಡಿದ್ದರು. ನಮ್ಮ
ಗುಂಪಿನ ನಾಲ್ವರು ಈ ಪ್ರದೇಶಕ್ಕೆ ಸುಮಾರು
2.45ಕ್ಕೆ ತಲುಪಿದರೆ, ಗುರುರಾಜನು 12 ಘಂಟೆಗೇ
ಇಲ್ಲಿ ಬಂದು ಇಲ್ಲಿಂದ ಕೆಲವು ಯುವ ಚಾರಣಿಗರೊಂದಿಗೆ 9999 ಮೆಟ್ಟಿಲುಗಳನ್ನು ಹತ್ತಿ ದತ್ತ ಮಂದಿರವನ್ನು ವೀಕ್ಷಿಸಿ 5 ಘಂಟೆಯ
ಹೊತ್ತಿಗೆ ಮರಳಿ ಪಥರ್ ಚೆಟ್ಟಿಗೆ ಬಂದನು.
ಅಲ್ಲಿ ಒಂದು ರಾತ್ರೆ
ಕಳೆದು ಮಾರನೇ ದಿನ ಮುಂಜಾನೆ ಅಲ್ಲಿಂದ ಹೊರಟು ಮರಳಿ ಬೇಸ್ ಕ್ಯಾಂಪಿಗೆ ಇಳಿದು ಬಂದೆವು. ಸಾಮಾನ್ಯವಾಗಿ
ಬೆಟ್ಟವನ್ನು ಹತ್ತುವುದಕ್ಕಿಂತ ಇಳಿಯುವುದು ಅತಿ ಆಯಾಸಕರ ಹಾಗೂ ಪ್ರಯಾಸದ್ದು. ಆದರೆ
ನುರಿತ ಚಾರಣಿಗರಾದ ಪಾಲಹಳ್ಳಿ ರಮೇಶ,
ವೆಂಕಯ್ಯಸುಬ್ಬಯ್ಯ ಹಾಗೂ ಗುರುರಾಜನಿಗೆ ಇದು ನೀರು ಕುಡಿದಷ್ಟು
ಸುಲಭವಾಗಿದ್ದು ಅವರು ಅತ್ಯಂತ ವೇಗದಿಂದ ಇಳಿದು ಬಂದರೆ, ನಾನು
ಹಾಗೂ ಸುರೇಶ್ ಬಾಬು ನಿಧಾನವಾಗಿ ಇಳಿದುಬಂದೆವು. 
ಪ್ರತಿ ವರ್ಷದ ಜನವರಿ
ತಿಂಗಳಿನ 1 ರಿಂದ
10ರ ವರೆಗೂ ಗುಜರಾತ್ ಸರ್ಕಾರವು ಗಿರಿನಾರ್
ಬೆಟ್ಟ ಹತ್ತುವ ಸ್ಪರ್ಧೆಯನ್ನು ನಡೆಸುತ್ತಾರೆ. ಯಾರು 2 ಘಂಟೆಗಳಲ್ಲಿ
5500 ಮೆಟ್ಟಿಲುಗಳನ್ನು (1700 ಮೀ) ಹತ್ತುವರೋ ಅವರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಹಾಗೂ ಅವರ
ಪೈಕಿ ವೇಗವಾಗಿ ಮೊದಲಿಗನಾದ ಸ್ಪರ್ಧಿಗೆ ಅನೇಕ ಬಹುಮಾನಗಳನ್ನು ನೀಡುವರು. ಈಗ
ಈ ಸ್ಪರ್ಧೆಯು ರಾಜ್ಯ ಮಟ್ಟದಲಲ್ಲದೆ ರಾಷ್ಟ್ರಮಟ್ಟದಲ್ಲಿ ನಡೆಸಲಾಗುವುದು. 
ಈ ಬೆಟ್ಟದ ಇತರ ಸುಪ್ರಸಿದ್ಧ
ಸ್ಥಳಗಳೆಂದರೆ ಭೀಮಕುಂಡ, ಸಾತ್ಪುಡ, ಗೋಮುಖಿ ಗಂಗಾ, ಭೈರವ
ಜಪ್, ಭರತವನ ಶೇಷಾಯನ್, ಹನುಮಾನ್
ಧಾರ ಹಾಗೂ ಜಟಾಶಂಕರ.
ಪ್ರತಿ ವರ್ಷದ ಕಾರ್ತಿಕ
ಮಾಸದ ಹುಣ್ಣಿಮೆಯ ದಿನದಂದು 40 ಕಿ.ಮೀ ಸುತ್ತಳತೆಯ, ಗಿರಿನಾರ್
ಪರ್ವತ ಪರಿಕ್ರಮವನ್ನು ನಡೆಸಲಾಗುವುದು.
ಲಕ್ಷಾಂತರ ಜನಗಳು ಇದರಲ್ಲಿ ಭಾಗವಹಿಸುವರು. 
ನಾವು ಈ ಹುಣ್ಣಿಮೆಯ
ಮಾರನೇ ದಿನ ಅಲ್ಲಿಗೆ ಹೋಗಿದ್ದೆವು.
ಈ ವರ್ಷದಲ್ಲಿ 13 ಲಕ್ಷ
ಯಾತ್ರಾರ್ಥಿಗಳು ಭಾಗವಹಿಸಿದ್ದರೆಂದು
YHAI ಕಾರ್ಯದರ್ಶಿ ಶ್ರೀ.ಅನಂತ
ಪಾರಮಾರ್ ನಮಗೆ ತಿಳಿಸಿದರು. 
ಗಿರಿನಾರ್ ಬೆಟ್ಟವನ್ನು
ಹತ್ತುವುದು ಹಾಗೂ ಬೆಟ್ಟದ ಸುತ್ತಾ ಕಾಲ್ನಡಿಗೆಯಲ್ಲಿ ಪರಿಕ್ರಮ ಮಾಡುವುದು ಅತ್ಯಂತ ಕಠಿಣ ಹಾಗೂ ಸವಾಲಿನಿಂದ
ಕೂಡಿದ ಸಾಹಸ ಕಾರ್ಯ.
ಗಿರಿನಾರ್ ಬೆಟ್ಟ ಹತ್ತುವ
ಕಾರ್ಯಕ್ರಮದ ನಂತರ ನಮ್ಮನ್ನು ಮಾರನೇ ದಿನ ಗಿರಿನಾರ್ ಅಭಯಾರಣ್ಯದೆಡೆಗೆ ಬಸ್ಸಿನಲ್ಲಿ ಕರೆದುಕೊಂಡು
ಹೋದರು. ಸುಮಾರು ಒಂದು ಘಂಟೆಯ ಕಾಲ ಈ ಅಭಯಾರಣ್ಯದ ಸಫಾರಿಯಲ್ಲಿ ನಾವುಗಳು
ಜಿಂಕೆ, ಕಾಡೆಮ್ಮೆ, ಹುಲಿ ಹಾಗೂ ಸಿಂಹಗಳನ್ನು
ವೀಕ್ಷಿಸಿ ಅಲ್ಲಿಂದ ನೇರವಾಗಿ ಸಾಸನ್ ಗಿರ್ ನಲ್ಲಿನ ಒಂದು ಸುಂದರವಾದ ರೆಸಾರ್ಟ್ ಗೆ ನಮ್ಮನ್ನು ಕರೆದೊಯ್ದರು. ಅಲ್ಲಿ
ಒಂದು ರಾತ್ರೆಯನ್ನು ಕಳೆದೆವು.
ಆ ದಿನ ರಾತ್ರೆ YHAI ಸಂಸ್ಥೆಯವರು ಗಿರಿಜನರ ನೃತ್ಯವನ್ನು ಏರ್ಪಡಿಸಿದ್ದರು. ನೃತ್ಯವು
ಬೆಂಕಿಯ ಸುತ್ತಲೂ ನಡೆದು ಅದರಲ್ಲಿ ರಮೇಶ,
ಗುರುರಾಜ ವೆಂಕಯ್ಯಸುಬ್ಬಯ್ಯ ಹಾಗೂ ಸುರೇಶ ಬಾಬು ಅವರುಗಳು ಗಿರಿಜನರೊಂದಿಗೆ
ನೃತ್ಯದಲ್ಲಿ ಭಾಗವಹಿಸಿದರು. 
ಮಾರನೇ ದಿನ ಬೆಳಗ್ಗೆ
ರೆಸಾರ್ಟ್ ನಿಂದ ಹೊರಟು ನಮ್ಮನ್ನು ನೇರವಾಗಿ ಸೋಮನಾಥದಲ್ಲಿನ ಜ್ಯೋತಿರ್ಲಿಂಗದ ದರ್ಶನಕ್ಕೆ ಕರೆದೊಯ್ದರು. ಅನಂತರ
ಅಲ್ಲಿಂದ ನಮ್ಮನ್ನು ಕೇಂದ್ರಾಡಳಿತ ಪ್ರದೇಶವಾದ ಡಿಯು ಗೆ ಕರೆದೊಯ್ದರು. ಅಲ್ಲಿ
ಕೆಲವು ಮಂದಿರಗಳನ್ನು ಹಾಗೂ ಡಿಯೂದಲ್ಲಿನ ಸುಪ್ರಸಿದ್ಧ ಹಾಗೂ ಪುರಾತನ ಕೋಟೆಯನ್ನು ವೀಕ್ಷಿಸಿ ಅಲ್ಲಿಂದ
ರಾತ್ರೆ ಊಟದ ನಂತರ ನೇರವಾಗಿ ನಮ್ಮನ್ನು ಜುನಾಘಢದಲ್ಲಿನ  ಬೇಸ್ ಕ್ಯಾಂಪಿಗೆ ರಾತ್ರೆ 11.30ಕ್ಕೆ ಕರೆದೊಯ್ದರು. 
ಮಾರನೇ ದಿನ ನಮ್ಮನ್ನು
ಜುನಾಘಢ ನಗರ ಪ್ರದಕ್ಷಿಣೆಗೆ ಆಟೋರಿಕ್ಷಾದಲ್ಲಿ ಕರೆದೊಯ್ದರು. ಈ
ಕಾರ್ಯಕ್ರಮದಲ್ಲಿ ನಾವು ಮೊಹಾಬತ್ ಮಕ್ಬಾರ,
ಹಾಗೂ ಉಪರ್ ಕೋಟ್ ಕೋಟೆ ಪ್ರದೇಶಗಳನ್ನು ವಿವರವಾಗಿ ನೋಡಲು ಅವಕಾಶ
ಒದಗಿತು.
ಮೊಹಾಬ್ಬತ್ ಮಕ್ಬಾರವನ್ನು
ಬಹದುಧ್ನಭಾಯಿ ಹಸೈನ್ ಭಾಯಿಯ ಸಮಾಧಿ ಎಂದೂ ಕರೆಯಲಾಗುವುದು. ಈ
ಸಮಾಧಿಯ ಕಟ್ಟಡವು ತನ್ನ ವೈಭವ ಶಿಲಾವಿನ್ಯಾಸದಿಂದಾಗಿ ಸುಪ್ರಸಿದ್ಧವಾಗಿದೆ. ಇದನ್ನು 19 ನೇ
ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಲಾಗಿದೆ.
ಇದನ್ನು ಇಂಡೋ-ಇಸ್ಲಾಮಿಕ್
ಮತ್ತು ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಉಪರ್ ಕೋಟ್ ಕೋಟೆ 
ಸುಮಾರು 2300 ವರ್ಷಗಳ ಪುರಾತನ ಕೋಟೆ. ಕೆಲವೆಡೆ ಕೋಟೆಯ ಗೋಡೆಗಳು 20 ಮೀಟರುಗಳಿಗೂ ಮೀರಿದ ಎತ್ತರವಿರುವುದು. ಒಂದು ಕಾಲದಲ್ಲಿ ಕೋಟೆಯ ಸುತ್ತಲೂ ಮೊಸಳೆಗಳಿಂದ ಕೂಡಿದ 300,ಅಡಿ ಆಳದ ಕಂದಕಗಳಿದ್ದವು ಎಂಬ ಪ್ರತೀತಿ. ಈ ಕೋಟೆಯನ್ನು ಮೌರ್ಯ ವಂಶಸ್ತರ ಕಾಲದಲ್ಲಿ ನಿರ್ಮಿಸಿ ಗುಪ್ತ ವಂಶಸ್ತರೂ ಉಪಯೋಗಿಸುತ್ತಿದ್ದರು. ನಂತರದ ದಿನಗಳಲ್ಲಿ ಮೈತ್ರಿಕರು ಸೌರಾಷ್ಟ್ರದ ರಾಜಧಾನಿಯನ್ನು ಜುನಾಘಡದಿಂದ ವಲ್ಲಭಿಗೆ ಬದಲಾಯಿಸಿದ್ದರಿಂದಾಗಿ ಈ ಪ್ರದೇಶವು ತನ್ನ ಮಹತ್ವವನ್ನು ಕಳೆದುಕೊಂಡಿತು.
ಕೋಟೆಯೊಳಗೆ ಎರಡು ವಿಧದ ಮೆಟ್ಟಿಲುಗಳ ಭಾವಿಗಳಿರುವುದು. ಬೇರೆ ಭಾವಿಗಳನ್ನು ಭೂಮಿಯಿಂದ ಕೆಳಕ್ಕೆ ಅಗೆದಂತಿರದೇ ಈ ಭಾವಿಗಳು ಭೂಮಿಯಲ್ಲಿನ ಕಲ್ಲಿನೊಳಗೆ ಕೊರೆದು ಕಟ್ಟಲಾಗಿದೆ. ಸಂಪೂರ್ಣ ಭಾವಿಯು ಏಕ ಶಿಲೆಯಿಂದ ನಿರ್ಮಿತವಾಗಿದೆ.
ಸುಮಾರು 2300 ವರ್ಷಗಳ ಪುರಾತನ ಕೋಟೆ. ಕೆಲವೆಡೆ ಕೋಟೆಯ ಗೋಡೆಗಳು 20 ಮೀಟರುಗಳಿಗೂ ಮೀರಿದ ಎತ್ತರವಿರುವುದು. ಒಂದು ಕಾಲದಲ್ಲಿ ಕೋಟೆಯ ಸುತ್ತಲೂ ಮೊಸಳೆಗಳಿಂದ ಕೂಡಿದ 300,ಅಡಿ ಆಳದ ಕಂದಕಗಳಿದ್ದವು ಎಂಬ ಪ್ರತೀತಿ. ಈ ಕೋಟೆಯನ್ನು ಮೌರ್ಯ ವಂಶಸ್ತರ ಕಾಲದಲ್ಲಿ ನಿರ್ಮಿಸಿ ಗುಪ್ತ ವಂಶಸ್ತರೂ ಉಪಯೋಗಿಸುತ್ತಿದ್ದರು. ನಂತರದ ದಿನಗಳಲ್ಲಿ ಮೈತ್ರಿಕರು ಸೌರಾಷ್ಟ್ರದ ರಾಜಧಾನಿಯನ್ನು ಜುನಾಘಡದಿಂದ ವಲ್ಲಭಿಗೆ ಬದಲಾಯಿಸಿದ್ದರಿಂದಾಗಿ ಈ ಪ್ರದೇಶವು ತನ್ನ ಮಹತ್ವವನ್ನು ಕಳೆದುಕೊಂಡಿತು.
ಕೋಟೆಯೊಳಗೆ ಎರಡು ವಿಧದ ಮೆಟ್ಟಿಲುಗಳ ಭಾವಿಗಳಿರುವುದು. ಬೇರೆ ಭಾವಿಗಳನ್ನು ಭೂಮಿಯಿಂದ ಕೆಳಕ್ಕೆ ಅಗೆದಂತಿರದೇ ಈ ಭಾವಿಗಳು ಭೂಮಿಯಲ್ಲಿನ ಕಲ್ಲಿನೊಳಗೆ ಕೊರೆದು ಕಟ್ಟಲಾಗಿದೆ. ಸಂಪೂರ್ಣ ಭಾವಿಯು ಏಕ ಶಿಲೆಯಿಂದ ನಿರ್ಮಿತವಾಗಿದೆ.
ನಗರ ಪ್ರದಕ್ಷಿಣೆಯ
ನಂತರ ಮರಳಿ ಕ್ಯಾಂಪಿಗೆ ಬಂದು ರಾತ್ರೆ ಮಲಗಿದ್ದು ಮಾರನೇ ದಿನ ಮುಂಜಾನೆ 9 ಕ್ಕೆ
ಅಲ್ಲಿಂದ ನಾವು ಅಹಮದಾಬಾದ್ ನಗರಕ್ಕೆ ಬೆಳಗಿನ 10.30ರ ರೈಲಿನಲ್ಲಿ ಪಯಣಿಸಿದೆವು. ಇಲ್ಲಿಗೆ YHAI ಅವರ ಚಾರಣ ಕಾರ್ಯಕ್ರಮವು ಮುಗಿಯಿತು.
ಅಹಮದಾಬಾದ್ ನಗರದಲ್ಲಿ
ನಮ್ಮ ಬ್ಯಾಂಕಿನವಿಶ್ರಾಂತಿ ಗೃಹಕ್ಕೆ ಹೋಗಿ ರಾತ್ರೆ ಮಲಗಿದ್ದು ಮುಂಜಾನೆ ಬೆಳಗಿನ ಉಪಹಾರದ ನಂತರ ನಾವುಗಳು
ಹತ್ತಿರದಲ್ಲಿನ ಸುಪ್ರಸಿದ್ಧ ಸ್ಥಳಗಳಿಗೆ ಭೇಟಿಕೊಡಲು ಒಂದು ಟ್ಯಾಕ್ಸಿಯನ್ನು ಗೊತ್ತುಮಾಡಿಕೊಂಡು 5 ಘಂಟೆಗೆ
ಹೊರಟೆವು. ಮೊದಲಿಗೆ ನಾವು 105 ಕಿ.ಮೀ
ದೂರದ ಮೊಧೇರ ಕ್ಷೇತ್ರದಲ್ಲಿನ ಸೂರ್ಯ ಮಂದಿರವನ್ನು ತಲುಪಿದೆವು. ಅತ್ಯದ್ಭುತ
ಶಿಲ್ಪಕಲೆಯಿಂದ ಕೂಡಿದ ಈ ಮಂದಿರ ಸಂಕಿರಣವನ್ನು ಕ್ರಿ.ಶ.1026 - 27ರಲ್ಲಿ ಚಾಳುಕ್ಯ ರಾಜವಂಶದ ಮೊದಲನೇ ಭೀಮ ಚಕ್ರವರ್ತಿಯು ನಿರ್ಮಿಸಿದನು. ಈ
ಮಂದಿರದಲ್ಲಿ ಪೂಜೆಯು ನಡೆಯುವುದಿಲ್ಲ.
ಈ ಮಂದಿರ ಸಂಕೀರ್ಣವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ - ಗುಧಾಮಂಡಪ, ಸಭಾಮಂಡಪ
ಹಾಗೂ ರಾಮಕುಂಡ ಅಥವಾ ಸೂರ್ಯಕುಂಡ ಎಂದು ಕರೆಯಲ್ಪಡುವ ಸುಂದರವಾದ ಕುಂದ (ಸುಂದರವಾದ
ಕೊಳ). ಈ ಕೊಳದೊಳಗೆ ಕೀರ್ತಿತೋರಣದ ಮೂಲಕ ಇಳಿಯಲು ಮೆಟ್ಟಿಲುಗಳಿದ್ದು 176 x 120 ಅಡಿಯ ಅಯತಾಕಾರದ ನೀರಿನ ಕೊಳಕ್ಕೆ ಕರೆದುಕೊಂಡು ಹೋಗುವುದು. ಸುತ್ತಲೂ
ಸುಂದರವಾದ ಪುರಾಣಕಾಲದ ಶಿಲ್ಪಗಳನ್ನು ಕೆತ್ತಲಾಗಿದೆ. 
ಈ ಮಂದಿರ ಸಂಕೀರ್ಣವನ್ನು
ಕೂಲಂಕುಷವಾಗಿ ನೋಡಲು ಸುಮಾರು
3 ಘಂಟೆ ಬೇಕಾಯಿತು. ಸುತ್ತಲಿನ
ಮರಗಳಿಂದ ಕೂಡಿದ ಹುಲ್ಲುಗಾವಲಿನಲ್ಲಿ ಅನೇಕ ನವಿಲುಗಳು ಯಥೇಚ್ಛವಾಗಿ ವಿಹರಿಸುತ್ತಿದ್ದವು. 
ಮೊಧೇರದಿಂದ ನಾವುಗಳು 35 ಕಿ.ಮೀ
ದೂರದಲ್ಲಿನ ಪಾಟನ್ ಕ್ಷೇತ್ರದಲ್ಲಿನ
“ರಾಣಿ-ಕಿ-ವಾವ್”ಯೆಡೆಗೆ
ಪಯಣಿಸಿದೆವು. ರಾಣಿ-ಕಿ-ವಾವ್ ಎಂದರೆ ರಾಣಿಯ ಮೆಟ್ಟಲುಗಳ ಭಾವಿ. ಇದನ್ನು
ಕ್ರಿ.ಶ.1022-1064ರಲ್ಲಿ ಚಾಲುಕ್ಯ ಅರಸುವಂಶದ ಭೀಮ ಚಕ್ರವರ್ತಿಯ ನೆನಪಿಗಾಗಿ ಅವನ
ಪತ್ನಿ ರಾಣಿ ಉದಯಮತಿಯು ಕಟ್ಟಿಸಲು ಪ್ರಾರಂಭಿಸಿ ಅದನ್ನು ಚಕ್ರವರ್ತಿ ಕರ್ಣನು ಪೂರ್ಣಗೊಳಿಸಿದನೆಂದು
ಜೈನ ಮುನಿ ಮೇರುಂಗ ಸೂರಿಯು 1304ರಲ್ಲಿ ತನ್ನ ಪ್ರಬಂಧ ಚಿಂತಾಮಣಿ ಕೃತಿಯಲ್ಲಿ ಉಲ್ಲೇಖಿಸಿರುವನು. ಅನಂತರ
ಘಟಿಸಿದ ಸರಸ್ವತಿ ನದಿಯ ಪ್ರವಾಹದಲ್ಲಿ ಈ ಸಂಕೀರ್ಣವು ಸಂಪೂರ್ಣವಾಗಿ ಮರಳಿನಲ್ಲಿ ಹೂತುಹೋಗಿತ್ತು. 1980ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಇದರ ಉತ್ಖನನವನ್ನು ಮಾಡಿ ಈಗಿನ ಸ್ಥಿತಿಗೆ ತಂದಿರುವರು. ಈ
ಭಾವಿಯು 64 x 20 x 27 ಮೀ
(ಉದ್ದ, ಅಗಲ, ಅಳ) ವಿಸ್ತಾರವಾಗಿರುವುದು. ಭಾವಿಯ
ಬುಡದಲ್ಲಿ 30 ಕಿ.ಮೀ ದೂರದ ಸುರಂಗವಿದ್ದು ಅದನ್ನು ಈಗ ಮುಚ್ಚಲಾಗಿದೆ. ಭಾವಿಯಲ್ಲಿ
ಇಳಿಯುತ್ತಿದ್ದಂತೆ ಸುತ್ತಲಿನ ಗೋಡೆಗಳಲ್ಲಿ ಸುಂದರವಾದ ವಿಷ್ಣು ಹಾಗೂ ದಶಾವತಾರದ ವಿಗ್ರಹಗಳನ್ನು ನೋಡಬಹುದು. ಅಲ್ಲದೇ
ನಾಗಕನ್ಯೆಯರು, ಅಪ್ಸರೆಯರು ಹಾಗೂ ಸುಂದರ ಯೋಗಿನಿಗಳು 16 ವೈವಿಧ್ಯ
ಶೈಲಿಗಳಲ್ಲಿ ಕಂಗೊಳಿಸುವರು. ಸುಮಾರು 60 ವರ್ಷಗಳ ಹಿಂದೆ ಈ ಭಾವಿಯ
ಸುತ್ತಲೂ ಅನೇಕ ಔಷಧಯುಕ್ತ ಗಿಡಗಳಿದ್ದು ಈ ಭಾವಿಯ ನೀರು ಹಲವಾರು ರೋಗಗಳನ್ನು ವಾಸಿಮಾಡುತ್ತಿತ್ತು
ಎಂದು ಸ್ಥಳೀಯರ ಹೇಳಿಕೆ. ಈ ಸಂಕೀರ್ಣವನ್ನು 22, ಜೂನ್, 2014ರಲ್ಲಿ UNESCO ಸಂಸ್ಥೆಯು ವರ್ಲ್ಡ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಿರುವುದು
ಹಾಗೂ ಈ ಪ್ರದೇಶವು ಅಕ್ಟೋಬರ್
2016ರರಲ್ಲಿ ದೇಶದಲ್ಲಿನ ಅತ್ಯಂತ ಶುದ್ಧವಾದ
ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೇ ಭಾರತೀಯ ರಿಸರ್ವ ಬ್ಯಾಂಕ್ ಬಿಡುಗಡೆ ಮಾಡಿದ ಲ್ಯಾವೆಂಡರ್
ಬಣ್ಣದಲ್ಲಿನ ಹೊಸ100 ರೂಪಾಯಿಯ ನೋಟಿನ ಹಿಂಭಾಗದಲ್ಲಿ ಈ ಚಿತ್ರವನ್ನು ಮುದ್ರಿಸಿದೆ. 
ರಾಣಿ-ಕಿ-ವಾವ್
ಪ್ರದೇಶವನ್ನು ನಾವುಗಳು ಮಾರ್ಗದರ್ಶಿಯ ಸಹಾಯದಿಂದ ಸುಮಾರು 2 ಘಂಟೆಗಳ
ಕಾಲ ವೀಕ್ಷಿಸಿ ನಂತರ ಅಲ್ಲಿಂದ
110 ಕಿ.ಮೀ
ದೂರದ ಗುಜರಾತ್-ರಾಜಾಸ್ಥಾನ್ ಸರಹದ್ದಿನಲ್ಲಿರುವ ಸುಪ್ರಸಿದ್ಧ ಶಕ್ತಿಸ್ಥಳವಾದ
ಅಂಬಾಜಿ ಮಂದಿರಕ್ಕೆ ಪಯಣಿಸಿದೆವು.
ಈ ಮಂದಿರದಲ್ಲಿ ವೇದಕಾಲದ
ಪೂರ್ವದಿಂದಲೇ ಪೂಜಿಸಲ್ಪಡುವ ದೇವಿಯು ಆರಾವಳಿ ಪರ್ವತ ಶ್ರೇಣಿಗಳ ನೈಋತ್ಯದಲ್ಲಿನ ಸರಸ್ವತಿ ನದಿಯ ಉಗಮ
ಸ್ಥಳದಲ್ಲಿರುವ ಅರಸೂರಿ ಬೆಟ್ಟದಲ್ಲಿರುವುದರಿಂದ ಈ ದೇವಿಯನ್ನು ಅರಸುರಿ ಅಂಬಾಜಿ ಎಂದು ಕರೆಯಲಾಗುವುದು. ಇದು 51 ಶಕ್ತಿಪೀಠಗಳಲ್ಲಿ
ಒಂದಾಗಿದ್ದು ಇಲ್ಲಿ ಸತಿದೇವಿಯ ಹೃದಯಭಾಗವು ಬಿದ್ದಿತೆಂದು ನಂಬಿಕೆ. 
ಈ ಮಂದಿರವನ್ನು ಮೂಲದಲ್ಲಿ
ನಿರ್ಮಿಸಿದವರು ನಗರ್ ಬ್ರಾಹ್ಮಣರು.
ಈ ಮಂದಿರದೊಳಗೆ ಗೋಡೆಯ ಮೇಲೆ ಶ್ರೀಚಕ್ರವನ್ನು ಸ್ಥಾಪಿಸಲಾಗಿದೆ. ಗರ್ಭಗುಡಿಯಲ್ಲಿ
ಯಾವುದೇ ವಿಗ್ರಹವಿಲ್ಲ, ಏಕೆಂದರೆ ಈ ಮಂದಿರವು ವಿಗ್ರಹಾರಾಧನೆಯು ಪ್ರಾರಂಭವಾಗುವುದಕ್ಕೆ
ಮುಂಚಿತವಾಗಿ ಪ್ರತಿಷ್ಠಾಪಿಸಿದ್ದು
(ವೇದಕಾಲಕ್ಕೂ ಮೊದಲಿಗೆ). ಆದರೆ
ಈ ಮಂದಿರದೊಳಗಿನ ಗೂಡಿನ ಮೇಲ್ಭಾಗವನ್ನು ಅರ್ಚಕರು ದೂರದಿಂದ ದೇವಿಯ ವಿಗ್ರಹದಂತೆ ಕಾಣುವ ರೀತಿಯಲ್ಲಿ
ಅಲಂಕರಿಸಿರುವರು. ಅಂಬಾಜಿ ಮಂದಿರದ ಸಮೀಪದಲ್ಲಿ ಆಯತಾಕಾರದ ಕೊಳವಿರುವುದು ಹಾಗೂ
ನಾಲ್ಕೂ ದಿಕ್ಕಿನಲ್ಲಿ ಮೆಟ್ಟಿಲುಗಳು ಇರುವುದು ಮತ್ತು ಇದನ್ನು ಮಾನಸರೋವರ ಎನ್ನುವರು.
ಈ ಮಂದಿರದ ಬಳಿ ಆರು
ಮಂದಿರಗಳಿರುವುದು. ಅವುಗಳೆಂದರೆ - ವಾರಾಹಿ ಮಾತಾ, ಅಂಬಿಕೇಶ್ವರ್
ಮಹಾದೇವ, ಗಣಪತಿ ಮಂದಿರ, ಖೋಡಿಯಾರ್
ಮಾತಾ, ಅಜಯ ಮಾತಾ ಮತ್ತು ಹನುಮಾನ್ ಮಂದಿರಗಳು.
ಇಲ್ಲಿಗೆ ಬರುವ ಭಕ್ತರಿಗೆ
ಎಲ್ಲ 51 ಶಕ್ತಿ ಪೀಠಗಳ ದರ್ಶನ ಒಂದೆಡೆ ಆಗುವ ಸಲುವಾಗಿ ಅಂಬಾಜಿ ಶಕ್ತಿಪೀಠದ
ಆಡಳಿತ ಮಂಡಳಿಯು 51 ಶಕ್ತಿಪೀಠಗಳ ಸಂಕೀರ್ಣವನ್ನು ಸುಂದರವಾಗಿ ನಿರ್ಮಿಸಿರುವರು. 2.85 ಕಿ.ಮೀ ಸುತ್ತಳತೆಯ ಸಂಕೀರ್ಣದ ಪರಿಕ್ರಮವನ್ನು ಮಾಡಲು ಎಲ್ಲ ಅನುಕೂಲಗಳನ್ನೂ
ಕಲ್ಪಿಸಲಾಗಿದೆ. 
ಅಂಬಾಜಿ ಮಾತೆಯ ಒಂಬತ್ತು
ಸ್ವರೂಪಗಳೆಂದರೆ :- 
ಶ್ರೀ ಬ್ರಹ್ಮಚಾರಿಣಿ, ಶ್ರೀ
ಚಂದ್ರ ಘಂಟಾ, ಶ್ರೀ ಕಾಲರಾತ್ರಿ, ಶ್ರೀ
ಕಾತ್ಯಾಯನಿ, ಶ್ರೀ ಕೂಷ್ಮಾಂಡ, ಶ್ರೀ
ಮಹಾಗೌರಿ, ಶ್ರೀ ಶೈಲಪುತ್ರಿ, ಶ್ರೀ
ಸಿದ್ಧಿ ದಾತ್ರಿ, ಮತ್ತು ಶ್ರೀ ಸ್ಕಂದಮಾತ.
ಅಂಬಾಜಿ ಮಂದಿರ ದರ್ಶನದ
ನಂತರ ಮಧ್ಯಾನ್ಹ 1.30ಕ್ಕೆ ನಾವೆಲ್ಲರೂ ದೇವಸ್ಥಾನದ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ
ರುಚಿಯಾದ ಊಟವನ್ನು ಮಾಡಿಕೊಂಡು ಅಲ್ಲಿಂದ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ನೇರವಾಗಿ ಪಯಣಿಸಿದೆವು
ಹಾಗೂ ಅಲ್ಲಿಂದ ಬೆಂಗಳೂರಿಗೆ ರಾತ್ರೆ
11.00 ಕ್ಕೆ ತಲುಪಿದೆವು.
Comments
Post a Comment