ಏಪ್ರಿಲ್ 22 ರಂದು
ಸ್ಯಾನ್ ಫ್ರಾನ್ಸಿಸ್ಕೊ ವಿಮಾನದಲ್ಲಿ
ಬಂದು ಅಲ್ಲಿಂದ 40 ಮೈಲಿ ದೂರದ ಸನ್ನಿವೇಲ್ ನಗರಕ್ಕೆ ಬಂದು ನನ್ನ ಮಗನ ಮನೆಗೆ ತಲುಪಿದ
ನಂತರ ಎರಡು ದಿನ ವಿಶ್ರಾoತಿಯ ನಂತರ ಶನಿವಾರದಂದು ನನ್ನನ್ನು ನನ್ನ ಮಗನು ಇಲ್ಲಿಂದ 40 ಮೈಲಿ
ದೂರದಲ್ಲಿರುವ ಲ್ಯಾಂಡ್ ಆಫ್ ಮೆಡಿಸನ್ ಬುದ್ಧ ಎಂಬ ಸುಂದರ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದನು. ಅಲ್ಲಿಗೆ
ಹೋಗುವ ಮೊದಲು ಆ ಪ್ರದೇಶದ ಬಗ್ಗೆ ಕೆಲವು ವಿವರಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡೆ. ಅದರ
ಸಂಕ್ಷಿಪ್ತ ವಿವರಣೆ ಹೀಗಿದೆ:
ಈ ಪ್ರದೇಶವು ಸಾಂತಾಕ್ರೂಜ್
ಪರ್ವತದ ತಪ್ಪಲಿನಲ್ಲಿರುವ ಸೋಕ್ವಿಲ್ ಹಳ್ಳಿಯಿಂದ ಒಂದೂವರೆ ಮೈಲಿ ದೂರದಲ್ಲಿ ಸುಂದರ ಅರಣ್ಯ ಪ್ರದೇಶದಲ್ಲಿದೆ. ಇಲ್ಲಿ
ಉಪನ್ಯಾಸ, ಧ್ಯಾನ,
ಪ್ರಾರ್ಥನೆ, ಏಕಾಂತದಲ್ಲಿ ಉಳಿದುಕೊಳ್ಳುವ
ಅನುಕೂಲವುಳ್ಳ ಹಾಗೂ ಸಮುದಾಯ ಸೇವೆಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಹೆಸರೇ
ಹೇಳಿರುವಂತೆ ಇದು ಮಹಾಯಾನ ಬೌದ್ಧ ಪರಂಪರೆಗೆ ಸೇರಿದ್ದು. ಇಲ್ಲಿ 6 ಮೈಲಿ
ಸುತ್ತಳತೆಯ ಚಾರಣ ಮಾಡಲು ಹಾದಿಯಿರುವ
(TREKKING TRAIL) ವಿಷಯವನ್ನು ತಿಳಿದು
ಅಲ್ಲಿ ಕೆಲವು ದೂರ ನಡೆದೆವು. ಈ ಹಾದಿಯು ಕಡಿದಾದ ಏರುವಿಕೆಯನ್ನು ಹೊಂದಿದ್ದು ನನ್ನ ಪತ್ನಿಗೆ
ಬಹಳ ದೂರ ನಡೆಯಲು ಸಾಧ್ಯವಾಗದಿದ್ದರಿಂದ
2 ಮೈಲಿ ನಡೆದು ಮರಳಿದೆವು. ಅಲ್ಲಿ
ಕಂಡ ಕೆಲವು ಸುಂದರ ದೃಶ್ಯಗಳನ್ನು ಈ ಕೆಳಗೆ ನೋಡಿರಿ
ಅದಾದ ಕೆಲವು ದಿನಗಳು
ಕಳೆದನಂತರ ನನ್ನ ಮನಸ್ಸು ಚಾರಣದ ಗುಂಗಿನಲ್ಲೇ ಸುತ್ತುತ್ತಿತ್ತು. ಆ
ಸಮಯದಲ್ಲೇ ನನಗೆ ತಿಳಿದುಬಂದ್ದಿದ್ದೇನೆಂದರೆ ಈ ನಗರದೊಳಗೆ ಹಾಗೂ ಸುತ್ತ ಮುತ್ತ ವೀಕ್ಷಿಸುವ ಅನೇಕ
ಸ್ಥಳಗಳಿವೆ ಎಂದು. ನನ್ನ
ಹವ್ಯಾಸವಾದ ಚಾರಣಕ್ಕೆ ಹೊಂದುವ ಸ್ಥಳಗಳನ್ನು ಇಂಟರ್ನೆಟ್ ಮೂಲಕ ಹುಡುಕ ತೊಡಗಿದೆ. ಹಾಗೆ ಹುಡುಕುತ್ತಿದ್ದಾಗ ನನಗೆ ಕಂಡುಬಂದದ್ದೇನೆಂದರೆ ಈ ನಗರದಲ್ಲಿ
ಅನೇಕ ಸುಸ್ಥಿತಿಯಲ್ಲಿರುವ ಹಾದಿಗಳು
(TRAIL) ಇರುವುದು. ನನ್ನ
ಮೊದಲನೆಯ ಈ ತರಹದ ಹಾದಿಯು ಮನೆಯಿಂದ ಮುಕ್ಕಾಲು ಗಂಟೆಯ ನಡಿಗೆಯಷ್ಟು ಹತ್ತಿರದಲ್ಲೇ ಇರುವುದನ್ನು ಗುರುತಿಸಿದೆ. ಅದೇ BAYTRAIL ಸಮುಚ್ಛಯದ ಮಾರ್ಗ. ಅಲ್ಲಿಗೆ
ಹೋಗುವ ಮಾರ್ಗವನ್ನು GPS ಮೂಲಕ ಹುಡುಕಿ ಅದರ ವಿವರಗಳನ್ನು ನನ್ನ ಮೊಬೈಲ್ ನಲ್ಲಿನ NOTEPAD ನಲ್ಲಿ ಬರೆದುಕೊಂಡು ಮರುದಿನವೇ ಮನೆಯಿಂದ ಬೆಳಗ್ಗೆಯೇ ಹೊರಟೆ. ಮಾರ್ಗದಲ್ಲಿ
ಒಂದು ಎಕ್ಸ್ಪ್ರೆಸ್ ವೇಯನ್ನು ದಾಟಬೇಕಿತ್ತು. ಅದಕ್ಕಾಗಿ
ನಿರ್ಮಿಸಿರುವ ಮೇಲ್ಸೇತುವೆಯೆಡೆಗೆ ಹೋಗಿ ವೀಕ್ಷಿಸಿದಾಗ ನನಗೆ ಆಶ್ಚರ್ಯವಾಯಿತು. ಏಕೆಂದರೆ
ಆ ಮೇಲ್ಸೇತುವೆ ಬಹಳಷ್ಟು ಉದ್ದವಾಗಿ ಹಾಗೂ ಸಂಪೂರ್ಣ ಸುರಕ್ಷಿತವಾಗಿತ್ತು. ಇಲ್ಲಿನವರು
ಪಾದಚಾರಿಗಳ ಸುರಕ್ಷಿತತೆಗೆ ಬಹಳ ಮಹತ್ವವನ್ನು ನೀಡುತ್ತಾರೆ. ಈ
ವಿಧದ ಮೇಲ್ಸೇತುವೆಯ ಮಾರ್ಗದಲ್ಲಿ ಬೈಸಿಕಲ್ ಸವಾರರೂ ರಸ್ತೆಯನ್ನು ನಿರಾಯಾಸವಾಗಿ ದಾಟಬಹುದು. ಮೇಲ್ಸೇತುವೆ
ಇಲ್ಲದ ಕಡೆ ಟ್ರಾಫಿಕ್ ಸಿಗ್ನಲ್ ಇರುತ್ತದೆ.
ಟ್ರಾಫಿಕ್ ಸಿಗ್ನಲ್ ಇಲ್ಲದಿರುವ ರಸ್ತೆಯನ್ನು ನೀವು ದಾಟಬೇಕಾದರೆ
ಕಾರಿನ ಚಾಲಕರು ದೂರದಲ್ಲೇ ತಮ್ಮ ವಾಹನವನ್ನು ನಿಲ್ಲಿಸಿ ಪಾದಚಾರಿಗಳಿಗೆ ರಸ್ತೆಯನ್ನು ದಾಟಲು ಅನುವು
ಮಾಡಿಕೊಡುತ್ತಾರೆ. ಅಷ್ಟರಮಟ್ಟಿಗೆ ಪಾದಚಾರಿಗಳಿಗೆ ಸುರಕ್ಷಿತ. ಸ್ವಲ್ಪ ಸಮಯದ ನಂತರ ಹಾದಿಯ ಪ್ರಾರಂಭದ ಸ್ಥಳವನ್ನು ತಲುಪಿದೆ. ಈ ದೇಶದಲ್ಲಿ ಸಾಮಾನ್ಯವಾಗಿ (TRAIL WALKERS) ಹಾದಿ ಸಂಚಾರಿಗಳಿಗೆ ಹಾದಿಯ ಪ್ರಾರಂಭದಲ್ಲೇ (TRAILHEAD) RESTROOM (ನಮ್ಮಲ್ಲಿ ಕರೆಯುವ TOILET) ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಬೇಟ್ರೈಲ್
ನಲ್ಲಿ ಆರು ಮಾರ್ಗಗಳು ಕಾಣಿಸಿದವು.
ಎಲ್ಲ ಮಾರ್ಗದಲ್ಲೂ ಬೈಸಿಕಲ್, ವಿಲ್
ಚೇರ್ನಲ್ಲಿ ಕುಳಿತು ಸಂಚರಿಸುವವರು,
ಹಾಗೂ ನಡೆಯುವವರು ಮತ್ತು ಓಡುವವರು ಯಾವಾಗಲೂ ಇರುತ್ತಾರೆ. ಇದರಲ್ಲಿ
ಒಂದು ಮಾರ್ಗವನ್ನು ನಾನು ಮೊದಲಿಗೆ ಆರಿಸಿಕೊಂಡು ಅದರಲ್ಲಿ ನಡೆಯತೊಡಗಿದೆ. ಈ
ಮಾರ್ಗವು ಮೂರು ಮೈಲಿ ದೂರದವರೆಗೂ ಇತ್ತು.
ಮಾರ್ಗದ ಇಕ್ಕೆಲಗಳಲ್ಲಿ ನೀರು ಹರಿಯುವ ಕಾಲುವೆ ಇದ್ದಿತು. ಇದರ
ಮೇಲೆ ಬೀಸುವ ಗಾಳಿಯು ತಂಪಾಗಿ ಈ ಮಾರ್ಗದಲ್ಲಿ ನಡೆಯಲು ಬಹಳ ಉತ್ತೇಜನ ನೀಡುತ್ತಿತ್ತು. ಹಾಗಾಗಿ
ಮೂರು ಮೈಲು ಮಾರ್ಗವನ್ನು ನಡೆದು ಮತ್ತೆ ಅದೇ ದಾರಿಯಲ್ಲಿ ಮರಳಿದೆ. ಮಿಕ್ಕುಳಿದ
ಮಾರ್ಗಗಳಲ್ಲೂ ಸಧ್ಯದಲ್ಲೇ ನಡೆಯಲು ತೀರ್ಮಾನಿಸಿ ಮನೆಗೆ ಮರಳಿದೆ. ಹೀಗೆ
ನಾನು ಮೊದಲಿಗೆ ಎಂಟು ಮೈಲಿ ನಡೆದು ತೃಪ್ತಿಯನ್ನು ಪಟ್ಟುಕೊಂಡೆ.
ಇದಾದನಂತರ ನಾನು ಒಂದು
ಪರ್ವತಾರೋಹಣವನ್ನು ಮಾಡಲು ತೀರ್ಮಾನಿಸಿ ಅದರಂತೆ YOSEMITE ರಾಷ್ಟ್ರೀಯ ಉದ್ಯಾನದಲ್ಲಿರುವ 8100 ಅಡಿಯೆತ್ತರದ ಉತ್ತರದ ಅಂಚಿನಲ್ಲಿನ ಅರ್ಧ ಗೋಳಾಕಾರದ ಅಗಾಧವಾದ ಬಂಡೆಯೆಡೆಗೆ ಚಾರಣಮಾಡಲು ತೀರ್ಮಾನಿಸಿ
ಅದನ್ನು ನಡೆಸಿಕೊಡುವ ಟ್ರೆಕ್ಕಿಂಗ್ ಸಂಸ್ಥೆಯನ್ನು ಸಂಪರ್ಕಿಸಿ ಅವರು ನಡೆಸಿಕೊಡುವ ನಾಲ್ಕು ದಿನಗಳ
ಚಾರಣದಲ್ಲಿ ಭಾಗವಹಿಸಲು 600 ಡಾಲರನ್ನು ಪಾವತಿಸಿದೆ. ಈ
ಕಾರ್ಯಕ್ರಮವು ಜೂನ್ ಎರಡರಂದು ಪ್ರಾರಂಭವಾಗುವುದರಿಂದ ಅಲ್ಲಿಯವರೆಗೂ ಈ ಊರಿನ ಸುತ್ತಮುತ್ತಲಿನ ಟ್ರೈಲ್
ಗಳಲ್ಲಿ ಸುತ್ತಾಡಲು ತೀರ್ಮಾನಿಸಿದೆ.
ಅದರಂತೆ ನಮ್ಮ ಮನೆಯಿಂದ
ಸುಮಾರು 15 ಮೈಲುಗಳ ದೂರದಲ್ಲಿರುವ 2800 ಅಡಿ ಎತ್ತರದಲ್ಲಿನ ಮಿಷನ್ ಪೀಕ್ ಅನ್ನು ಹತ್ತಲು ತೀರ್ಮಾನಿಸಿ ಮೇ ತಿಂಗಳಿನ ಕೊನೆಯ ವಾರದಲ್ಲಿ
ಅಲ್ಲಿಗೆ ಪ್ರಯಾಣಿಸಿದೆ. ಈ ಬೆಟ್ಟವನ್ನು 2.8 ಮೈಲಿ
ದೂರದ ಅತಿ ಕಡಿದಾದ ಹಾದಿಯಲ್ಲಿ ಹತ್ತಬೇಕು.
ಬೆಳಗ್ಗೆ 8 ಘoಟೆಗೆ
ಪ್ರಾರಂಭಿಸಿ 9.30ರ ಹೊತ್ತಿಗೆ ಶಿಖರವನ್ನು ತಲುಪಿದೆ. ಈ
ಶಿಖರವನ್ನು ಹತ್ತಲು ಪ್ರತಿದಿನ ಅನೇಕ ಜನಗಳು ಬಿಸಿಲು ಗಾಳಿಯನ್ನು ಲೆಕ್ಕಿಸದೆ ಬರುತ್ತಾರೆ. ಕೆಲವರು
ಬೈಸಿಕಲ್ ನಲ್ಲಿ ಬೆಟ್ಟವನ್ನು ಹತ್ತಿದರೆ,
ಮತ್ತೆ ಕೆಲವರು ಜಾಗಿಂಗ್ (ಓಡುವುದು) ಮೂಲಕ
ಹತ್ತುತ್ತಾರೆ. ಶಿಖರದಿಂದ
ಕೆಳಗಿಳಿಯಲು ಕೇವಲ ಒಂದು ಘoಟೆ ಸಾಕಾಯಿತು. ಈ ದಿನ ಒಟ್ಟು 5.6 ಮೈಲಿಯ
ಹಾದಿಯನ್ನು ಕ್ರಮಿಸಿದೆ.
ಯೊಸೈಮೇಟ್ ಪ್ರದೇಶವನ್ನು
ಹೀಗೆಂದು ಬಣ್ಣಿಸಲಾಗಿದೆ:
“ಇದು ಅಗಾಧವಾದ ಕಣಿವೆಯಷ್ಟಲ್ಲದೆ ಒಂದು ಮಾನವನ ದೂರದರ್ಶಿತ್ವದ
ಪೂಜಾಮಂದಿರ, ಶಕ್ತಿಯುತವಾದ ಪೆಡಸು ಕಲ್ಲಿನ ಶಕ್ತಿ (strength of Granite), ಹಿಮನದಿಯ ಶಕ್ತಿ, ನಿರಂತರ
ಜೀವನ, ಅತಿ ಎತ್ತರದ ಬೆಟ್ಟಸಾಲಿನಲ್ಲಿನ ಪ್ರಶಾಂತತೆ”
ಯೋಸೆಮೈಟ್ ರಾಷ್ಟ್ರೀಯ
ಉದ್ಯಾನವನ್ನು 1864 ರಲ್ಲಿ ಸುರಕ್ಷಿತ ಅಭಯಾರಣ್ಯವೆಂದು ಅಮೆರಿಕಾ ಸರ್ಕಾರವು ಘೋಷಿಸಿತು. ಈ
ಉದ್ಯಾನವು 1200 ಚದರ ಮೈಲಿ ವಿಸ್ತೀರ್ಣವಿದ್ದು, ಇಲ್ಲಿ
ಆಳವಾದ ಕಣಿವೆಗಳು, ಸುಂದರವಾದ ಹುಲ್ಲುಗಾವಲುಗಳು, ಅತಿ
ಎತ್ತರದಿಂದ ಧುಮುಕುವ ಅನೇಕ ಜಲಪಾತಗಳು,
ಪುರಾತನ ಹಾಗೂ ಅತಿ ಎತ್ತರದ ತ್ರಿಕೋನಾಕಾರದ ಕ್ಯಾಲಿಫೋರ್ನಿಯನ್
ವೃಕ್ಷಗಳನ್ನುಳ್ಳ ಹಾಗೂ ನಿರ್ಜನ ಪ್ರದೇಶ.
ಇಲ್ಲಿ ಚಾರಣಕ್ಕೆ ಯೋಗ್ಯವಾದ
ಸುಮಾರು 800 ಮೈಲಿಯ
(1300 ಕಿ.ಮೀ) ಅನೇಕ
ಹಾದಿಗಳಿವೆ (Hiking
Trails). ಇಲ್ಲಿನ ಯ್ಯೋಸೈಮೇಟ್ ಜಲಪಾತವು ಪ್ರಪಂಚದಲ್ಲಿನ ಮೊದಲ ಹತ್ತು
ಸುಪ್ರಸಿದ್ದ ಜಲಪಾತಗಳ ಪೈಕಿ 5 ನೇ ಸ್ಥಾನದಲ್ಲಿದೆ.
ಯ್ಯೋಸೈಮೇಟ್ ಪ್ರದೇಶದ
ಭೂಗರ್ಭವು ಅತಿಪುರಾತನ ಶಿಲಾಯುಗದ ಹಾಗು ಪೆಡಸುಕಲ್ಲಿನ ಬೆಟ್ಟಗಳಿoದ
ಕೂಡಿದೆ. ಸುಮಾರು 10 ಮಿಲಿಯನ್ ವರ್ಷಗಳ ಹಿಂದೆ
ಸಿಯಾರಾ ನೆವಡಾ (Sierra
Nevada) ಪ್ರದೇಶವು ಮೇಲೆದ್ದು
ಪಶ್ಚಿಮ ಹಾಗು ತೀವ್ರವಾಗೇ ಪೂರ್ವಕ್ಕೆ ಬಾಗಿ ಮಧ್ಯದಲ್ಲಿ ಪೂರ್ವ ಹಾಗು ಪಶ್ಚಿಮ ದಿಕ್ಕುಗಳಲ್ಲಿ ಕಣಿವೆಗಳುಂಟಾಗಿ
ಇಲ್ಲಿದ್ದ ನದಿಗಳ ಆಳವು ಹೆಚ್ಚತೊಡಗಿತು ಹಾಗು ಆಳವಾದ ಕೊರಕಲುಗಳು ಮತ್ತು ಕಣಿವೆಗಳು ಉತ್ಪತ್ತಿಯಾದವು. ಸುಮಾರು ಒಂದು ಮಿಲಿಯನ್ ವರ್ಷಗಳ ಹಿಂದೆ ಹಿಮಗಡ್ಡೆ ಹಾಗು ನೀರ್ಗಲು
ಶೇಖರವಾಗಿ ಎತ್ತರದ ಹುಲ್ಲುಗಾವಲು ಪ್ರದೇಶಗಳಲ್ಲಿ ಹಿಮನದಿಯು ಉತ್ಪತ್ತಿಯಾಗಿ ಅವುಗಳು ಕ್ರಮೇಣ ಕಣಿವೆಯಲ್ಲಿನ
ನದಿಗಳೆಡೆಗೆ ಜಾರತೊಡಗಿದವು. ಯ್ಯೋಸೈಮೇಟ್ ಕಣಿವೆಯಲ್ಲಿ ನೀರ್ಗಲ್ಲು 4000 ಅಡಿಗಳಷ್ಟು ಶೇಖರವಾಗತೊಡಗಿತು.
ಈ ಅಗಾಧ ಪ್ರಮಾಣದ ನೀರ್ಗಲ್ಲುಗಳು ವೇಗವಾಗಿ ಕೆಳಗೆ ಹರಿಯುತ್ತಿದ್ದಂತೆ
ಬಂಡೆಗಳನ್ನು ಕೊರೆದು ಈಗಿನ U ಆಕಾರದ ವಿಶಾಲವಾದ ಕಣಿವೆಯ ಸೃಷ್ಟಿಯಾಯಿತು.
ಯ್ಯೋಸೈಮೇಟ್ ಉದ್ಯಾನವನ್ನು
ಪ್ರವೇಶಿಸುತ್ತಿದ್ದಂತೆ ನಮಗೆ ಕಂಡುಬರುವುದೇ ಬ್ರೈಡೆಲ್ ವೆಲ್ ಜಲಪಾತ. ಅನಂತರ
ಕಾಣಿಸುವುದೇ ಜಗತ್ಪ್ರಸಿದ್ದವಾದ
2425 ಅಡಿ ಎತ್ತರದಿಂದ ಎರಡು ಹಂತದಲ್ಲಿ
ಧುಮುಕುತ್ತಿರುವ ಯ್ಯೋಸೈಮೇಟ್ ಜಲಪಾತ.
ಇದಲ್ಲದೇ ರಿಬ್ಬನ್ ಜಲಪಾತ ಹಾಗೂ ಎಫಿಮೆರಾಲ್ ಜಲಪಾತಗಳನ್ನು
ವೀಕ್ಷಿಸಬಹುದು. ಇದಲ್ಲದೆ ಅಗಾಧ ಪ್ರಮಾಣದ ಬಂಡೆಗಳಾದ Half Dome, Northern Dome, Sentinel Dome ಹಾಗೂ
ರಾಯಲ್ ಅರ್ಚೆಸ್ ಪ್ರಸಿದ್ದವಾದ ವೀಕ್ಷಣಾಸ್ಥಳಗಳು. ಮತ್ತೊಂದು ನೋಡಲೇ ಬೇಕಾದ
ಸ್ಥಳವೆಂದರೆ Glacier ಪಾಯಿಂಟ್. ಈ ಗ್ಲೇಸಿಯರ್ ಪಾಯಿಂಟ್
ಇರುವುದು ಯ್ಯೋಸೈಮೇಟ್ ಉದ್ಯಾನವನದ ಪ್ರವೇಶದ್ವಾರದಿಂದ ಎಡಕ್ಕೆ ತಿರುಗಿ 17 ಮೈಲು
ಹಾದಿಯನ್ನು ಕ್ರಮಿಸಬೇಕು. ಇದು
7200 ಅಡಿ ಎತ್ತರದ ಪ್ರದೇಶದಲ್ಲಿದೆ. ಇಲ್ಲಿಂದ
ಸೂರ್ಯಾಸ್ತಮಾನವನ್ನು ವೀಕ್ಷಿಸಬಹುದು.
ಅಲ್ಲದೇ ವೆರ್ನಾಲ್ ಹಾಗು ನೆವಡಾ ಜಲಪಾತಗಳನ್ನು ಹತ್ತಿರದಿಂದ
ವೀಕ್ಷಿಸಬಹುದು. ಹಾಗೂ ಹಾಫ್ ಡೋಮ್ ಮತ್ತು cloud rest ಪ್ರದೇಶಗಳನ್ನು ವೀಕ್ಷಿಸಬಹುದು.
ನನ್ನ ನಾಲ್ಕುದಿನದ
ಚಾರಣವು 7200 ಅಡಿ ಎತ್ತರದಲ್ಲಿರುವ
Half Doome ಪ್ರದೇಶಕ್ಕೆ ಹೋಗುವುದು. ಕೆಳಗಿನಿಂದ
ಒಟ್ಟು 8100 ಅಡಿ ಎತ್ತರದವರೆಗೂ ಹತ್ತಬೇಕು. ಒಟ್ಟು 8.8 ಮೈಲು
ದೂರದ ಚಾರಣ. ಮೊದಲನೇ
ದಿನದ ಚಾರಣದಲ್ಲೇ ನಾವು ಸುಮಾರು
6000 ಅಡಿ ಎತ್ತರವನ್ನು ಏರಬೇಕಿತ್ತು. ಭಾರತದಲ್ಲಿ
ನಾನು ಚಾರಣಮಾಡುವಾಗ ನನ್ನ ಹೆಗಲು ಚೀಲವನ್ನು ಟ್ರೆಕ್ಕಿಂಗ್ ನಾಯಕನಿಗೆ ಕೊಡುತ್ತಿದ್ದೆವು. ಆದರೆ
ಇಲ್ಲಿ ಆ ಸೌಲಭ್ಯವಿರಲಿಲ್ಲ. ಹಾಗಾಗಿ
ನಮ್ಮ ಹೆಗಲು ಚೀಲವನ್ನು ನಾವೇ ಹೊತ್ತೊಯ್ಯಬೇಕಿತ್ತು. ಸಾಲದ್ದಕ್ಕೆ
ಇದರ ಜೊತೆಗೆ ನಮ್ಮ ನಮ್ಮ ಟೆಂಟ್,
ನಿದ್ರಾಚೀಲ (Sleeping Bag), ಮಲಗುವ
ಚಾಪೆ (Sleeping Mat) ಮತ್ತು ಟ್ರೆಕ್ಕಿಂಗ್ ಏಜನ್ಸಿಯವರ ದೊಡ್ಡ ದೊಡ್ಡದಾದ ತುಂಬಿರುವ
ಊಟದ ಡಬ್ಬಿಗಳನ್ನು ಸಹ ನಾವೇ ಹೊರಬೇಕಿತ್ತು.
ನಾನು ಇವೆಲ್ಲವನ್ನೂ ಸುಮಾರು ಎರಡು ಗಂಟೆ ಹೊತ್ತು ಬೆಟ್ಟವನ್ನೇರಿದೆ. ಆನಂತರ
ಟ್ರೆಕ್ ಲೀಡರ್ ಅದನ್ನು ತಾನೇ ನನ್ನಿಂದ ತೆಗೆದುಕೊಂಡ. ಸುಮಾರು
ಏಳು ಗಂಟೆಯ ಬಿಸಿಲಿನ ಹಾದಿಯನ್ನು ಏರಿ ನಮ್ಮ ಮೊದಲನೇ ದಿನದ ಕ್ಯಾಂಪ್ ನ್ನು ತಲುಪಿದೆವು. ಮಾರನೇದಿನ
ಮತ್ತೆ 2000 ಅಡಿ ಎತ್ತರವನ್ನು ಏರಿ ಹಾಫ್ ಡೂಮ್ ಪ್ರದೇಶವನ್ನು ತಲುಪಿದೆವು. ಮೂರನೇದಿನ ಅಲ್ಲಿಂದ ಹೊರಟು ನೇರವಾಗಿ ಬೇಸ್ ಕ್ಯಾಂಪ್ ನ್ನು
ತೀವ್ರ ಇಳಿಜಾರಿನ ಹಾದಿಯಲ್ಲಿ ಸುಮಾರು
8 ಘoಟೆಯ ಸಮಯದಲ್ಲಿ ತಲುಪಿದೆವು. ಇದೆಲ್ಲದರ
ಜೊತೆಗೆ ಇಲ್ಲಿನ ಊಟವು ನಮಗೆ ಸ್ವಲ್ಪವೂ ಹಿಡಿಸುವುದಿಲ್ಲ ಏಕೆಂದರೆ ನಾವು ಭಾರತದಲ್ಲಿ ಚಾರಣ ಮಾಡುವಾಗ
ನಮಗೆ ರುಚಿ ರುಚಿಯಾದ ಶಾಖಾಹಾರಿ ಆಹಾರಗಳು ಲಭಿಸುತ್ತಿದ್ದವು. ಇಲ್ಲಿ
ನನಗೆ ದೊರೆತ್ತಿದ್ದು ಕೇವಲ ಪ್ಯಾನ್ ಕೇಕ್,
ಪಾಸ್ತಾ, ಹಾಲು ಸಕ್ಕರೆ ರಹಿತ
ಚಹಾ ಮಾತ್ರ. ಇವೆಲ್ಲವುಗಳನ್ನು ಗಮನಿಸಿದರೆ, ಪರದೇಶದಲ್ಲಿ
ಚಾರಣ ಮಾಡುವುದು ಅತ್ಯಂತ ಕಷ್ಟಕರವೇ.
Half Dome ಚಾರಣದ ನಂತರ ಎರಡು ಮೂರು ದಿನಗಳ ವಿಶ್ರಾoತಿಯ
ನಂತರ ಸನ್ನಿವೇಲ್, ಸ್ಯಾನ್ ಓಸೆ, ಸಾಂತಾ ಕ್ಲಾರಾ ಕೌಂಟಿಯಲ್ಲಿರುವ
ಅನೇಕ ಸುಪ್ರಸಿದ್ದ ಟ್ರೈಲ್ ಗಳಲ್ಲಿ ಚಾರಣಮಾಡಲು ತೀರ್ಮಾನಿಸಿ ಕೆಳಕಂಡ ಟ್ರೈಲ್ ಗಳ ಬಗ್ಗೆ ಇಂಟರ್ನೆಟ್ನಲ್ಲಿ ವಿವರಗಳನ್ನು ಓದಿ ಅಲ್ಲಿಗೆ ಹೋಗುವ ರೀತಿಯನ್ನು
ನೋಟ್ ಪ್ಯಾಡ್ ನಲ್ಲಿ ಬರೆದುಕೊಂಡು ಹೋಗಲು ಶುರುಮಾಡಿದೆ. ಯಾವುದೇ
ಟ್ರೈಲ್ ಗಳು ಒಂದೇದಿನದಲ್ಲಿ ನಡೆಯಲಾಗದಿದ್ದ ಪಕ್ಷದಲ್ಲಿ ಅದನ್ನು ಎರಡು ಅಥವಾ ಮೂರೂ ಭಾಗಗಳನ್ನಾಗಿ
ವಿಂಗಡಿಸಿ ಎಲ್ಲಿಂದ ಎಲ್ಲಿಗೆ ಹೋಗಬೇಕು,
ಹೇಗೆ ಟ್ರೈಲ್ ಶುರುವಿನ ಸ್ಥಳಕ್ಕೆ ಹೋಗಬೇಕು, ಹೇಗೆ
ಟ್ರೈಲ್ ಮುಗಿದ ಸ್ಥಳದಿಂದ ಮನೆಗೆ ನಡೆಯಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿ ಅವುಗಳ ವಿವರಗಳನ್ನು
ನನ್ನ ಮೊಬೈಲ್ ನಲ್ಲಿನ ನೋಟ್ ಪ್ಯಾಡ್ ನಲ್ಲಿ ಬರೆದುಕೊಂಡು ಮತ್ತು ಒಂದು ಕಾಪಿಯನ್ನು ಮುದ್ರಿಸಿ ನನ್ನ
ಬಳಿ ಇಟ್ಟುಕೊಂಡಿರುತ್ತಿದ್ದೆ.
ಕೆಲವು ಸಲ ಟ್ರೈಲ್ ಶುರುವಿನ ಸ್ಥಳಕ್ಕೆ ಹೋಗಲು ಹಾಗೂ ಟ್ರೈಲ್
ಮುಗಿದ ಸ್ಥಳದಿಂದ ಮನೆಗೆ ಬರಲು ಲೋಕಲ್ ಟ್ರೈನ್ ಅಥವಾ VTA ಬಸ್
ನಲ್ಲಿ ಪ್ರಯಾಣಿಸಬೇಕಿತ್ತು. ಅವುಗಳ ವಿವರಗಳನ್ನೂ ಮುದ್ರಿಸಿ ಕೊಳ್ಳುತ್ತಿದ್ದೆ. ಹೀಗಾಗಿ ಪ್ರತಿಯೊಂದು ಚಾರಣವೂ ನಿರ್ಧರಿಸಿದಂತೆ ನಡೆಯುತ್ತಿತ್ತು.
ಮೇ ತಿಂಗಳಿನಿಂದ ಆಗಸ್ಟ್
ತಿಂಗಳಿನ ವರೆಗೆ ಚಾರಣ ಮಾಡಿದ ಟ್ರೈಲ್ ಗಳ ವಿವರಗಳು ಈ ಕೆಳಗೆ ಕೊಟ್ಟಿದೆ:
ಕ್ರಮ ಸಂಖ್ಯೆ
|
ಟ್ರೈಲ್ ನ ಹೆಸರು
|
ದೂರ
ಮೈಲುಗಳಲ್ಲಿ
|
1.
|
ಲಾಸ್ ಗೆಟೌಸ್ ಕ್ರಿಕ್ ಟ್ರೈಲ್
|
13.7
|
2.
|
ಕಾಯೊಟೊ ಕ್ರಿಕ್ ಟ್ರೈಲ್
|
45.5
|
3.
|
ಸ್ಯಾನ್ ಥಾಮಸ್ acquino ಟ್ರೈಲ್
|
18.4
|
4.
|
ಮಿಷನ್ ಪೀಕ್ ಟ್ರೈಲ್
|
5.6
|
5.
|
ಅಡೋಬ್ ಕ್ರೀಕ್ ಲೂಪ್ ಟ್ರೈಲ್
|
3.6
|
6.
|
ಬೇ ಟ್ರೈಲ್ - ಶೋರ್ ಲೈನ್ ಪಾರ್ಕ್ ನಿಂದ ಸನ್ನಿವೇಲ್ ವಾಟರ್ ಪಲ್ಯೂಷನ್ ಕಂಟ್ರೋಲ್
|
8.5
|
7.
|
ಸ್ಟಿವನ್ಸನ್ ಕ್ರಿಕ್ ಟ್ರೈಲ್
|
16.9
|
8.
|
ಬೇ ಟ್ರೈಲ್ - ಸನ್ನಿವೇಲ್ ವಾಟರ್ ಟ್ರೀಟ್ಮೆಂಟ್ ಪಲ್ಯೂಷನ್ ಕಂಟ್ರೋಲ್ ನಿoದ ಬೇ ಲ್ಯಾoಡ್ ಪಾರ್ಕ್ ವರೆಗೆ
|
11.8
|
9.
|
ಕಾಲಾಬಾಝಾ ಕ್ರಿಕ್ ಟ್ರೈಲ್
|
6.2
|
10.
|
ಜಾನ್ ಡಬ್ಲ್ಯೂ ಕ್ರಿಶ್ಚಿಯನ್ ಗ್ರೀನ್ ಬೆಲ್ಟ್
|
4.5
|
11.
|
ಗ್ವಾಡಲೂಪ್ ನದಿಯ ಟ್ರೈಲ್
|
15.5
|
12.
|
ಪೆನಿಟೆನ್ಸಿಯ ಕ್ರಿಕ್ ಟ್ರೈಲ್
|
6.0
|
13.
|
ಅಡೋಬ್ ಕ್ರಿಕ್ ಲೂಪ್ ಟ್ರೈಲ್
|
12.0
|
14.
|
ಅಲ್ಮೇಡಾ ಕ್ರಿಕ್ ಟ್ರೈಲ್
|
7.9
|
15.
|
ಓಹ್ಲ್ನ್ ರೀಜನಲ್ ವೈಲ್ಡರ್ನೆಸ್ ಟ್ರೇಲ್
|
9.0
|
16.
|
ಲಾಸ್ ಅಲ್ಮಿಟಾಸ್ ಕ್ರೀಕ್ ಟ್ರೇಲ್
|
5.0
|
17.
|
ರಾಂಚೊ ಸ್ಯಾನ್ ಆಂಟೊನಿಯೋ ಕೌಂಟಿ ಪಾರ್ಕ್ ಟ್ರೈಲ್
|
8.2
|
18.
|
ಸ್ಟ್ಯಾನ್ಫೋರ್ಡ್ ಡಿಶ್ ಟ್ರೈಲ್
|
5.9
|
19.
|
ಅಲ್ವಿಸೋ ಮರೀನಾ ಪಾರ್ಕ್ ಲೂಪ್ ಟ್ರೈಲ್
|
10.0
|
|
ಒಟ್ಟು ನಡೆದ ಹಾದಿ
|
214.2
|
ಅಮೆರಿಕಾದಲ್ಲಿನ ನಾನು
ಕಂಡ ಹಾಗೂ ಇಂಟರ್ನೆಟ್ ಮೂಲಕ ಅಧ್ಯಯನ ಮಾಡಿದಂತೆ ಇಲ್ಲಿನ ಟ್ರೈಲ್ ಗಳ ಬಗ್ಗೆ ಕೆಲವು ಅನಿಸಿಕೆ/ಅಭಿಪ್ರಾಯಗಳು:
❖
ಪ್ರತಿಯೊಂದು
ಟ್ರೈಲ್ ಗಳ ಬಗ್ಗೆ ಸುದೀರ್ಘವಾದ ಮಾಹಿತಿ ಯಾರಿಗೆ ಬೇಕಾದರೂ ವೆಬ್ ಸೈಟ್ ನಲ್ಲಿ ಲಭ್ಯ. ಇದರಲ್ಲಿ ಟ್ರೈಲ್ ಗಳ ವಿಸ್ತೀರ್ಣ, ಅದು
ಸುಸ್ಥಿತಿಯಲ್ಲಿರುವುದೇ/ ಸುಗಮವಾದ ಹಾದಿಯೇ ಅಥವಾ ಕಲ್ಲು ಮಣ್ಣಿನಿಂದ ಕೂಡಿರುವುದೇ, ಮರದ
ನೆರಳಿರುವುದೇ ಅಥವಾ ಟ್ರೈಲ್ ಪೂರ್ತಿ ಬಿಸಿಲಿಗೆ ತೆರೆದುಕೊಂಡಿರುತ್ತದೆಯೇ ಎಂಬ ವಿವರಗಳು ನಮಗೆ ಸಿಗುತ್ತವೆ.
❖
ಕೆಲವು
ಬಾರಿ ಟ್ರೈಲ್ ತಡೆರಹಿತ ಹಾಗು ವೇಗವಾದ ಹಾದಿಯನ್ನು ದಾಟಬೇಕಿದ್ದಲ್ಲಿ ಮೇಲ್ಸೇತುವೆ ಇದ್ದಲ್ಲಿ ಅದು
ಅತ್ಯಂತ ಸುರಕ್ಷಿತ ಹಾಗು ಯಾವಾಗಲೂ ಶುಭ್ರವಾಗಿ ಹಾಗು ಸುಸ್ಥಿತಿಯಲ್ಲಿರುತ್ತದೆ. ಒಂದು ಪಕ್ಷ ಹಾದಿಯ ಕೆಳಗೆ ಹೋಗಬೇಕಿದ್ದಲ್ಲಿ ಕೆಳಗಿನ ಮಾರ್ಗವು
ಅತ್ಯಂತ ಸುರಕ್ಷಿತ ಹಾಗೂ ಚೊಕ್ಕಟವಾಗಿರುತ್ತದೆ ಅಲ್ಲದೇ ಸೇತುವೆಯ ಇಕ್ಕೆಲದ ಗೋಡೆಯಮೇಲೆ ಸಿಮೆಂಟ್
ನಿಂದ ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳ ಆಕೃತಿಗಳನ್ನು ಸುಂದರವಾಗಿ ಚಿತ್ರಿಸಿರುತ್ತಾರೆ.
❖
ಪ್ರತಿಯೊಂದು
ಟ್ರೈಲ್ ಗಳಲ್ಲಿ ಸೈಕಲ್ ಸವಾರರಿಗೆ ಎಚ್ಚರಿಕೆಯ ಸೂಚನಾಫಲಕಗಳು ಅಲ್ಲಲ್ಲೇ ನೆಟ್ಟಿರುತ್ತಾರೆ. ಇಳಿಜಾರಿನಲ್ಲಿ
ಸೈಕಲ್ ಸವಾರರು ಹೋಗಬೇಕಾದಲ್ಲಿ ವೇಗಮಿತಿಯನ್ನು ಸೂಚನಾಫಲಕದಲ್ಲಿ ನಮೂದಿಸಿರುತ್ತಾರೆ.
❖
ಪಾದಚಾರಿಗಳಿಗೆ
ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ.
ಸೈಕಲ್ ಸವಾರರು ಹಾಗೂ ಕುದುರೆ ಸವಾರರು ಮೊದಲಿಗೆ ಪಾದಾಚಾರಿಗಳಿಗೆ
ಮುನ್ನಡೆಯಲು ಆದ್ಯತೆಯನ್ನು ಕೊಡುವಂತೆ ಸೂಚನಾಫಲಕಗಳಲ್ಲಿ ನಮೂದಿಸಿರುತ್ತಾರೆ ಅಲ್ಲದೇ ಪ್ರತಿಯೊಬ್ಬರೂ
ಅದರಂತೆ ನಡೆದುಕೊಳ್ಳುತ್ತಾರೆ.
❖
ಕೆಲವೊಮ್ಮೆ
ಟ್ರೈಲ್ ರಸ್ತೆಯನ್ನು ದಾಟಬೇಕಿದ್ದಲ್ಲಿ ಅಲ್ಲಿ ಟ್ರಾಫಿಕ್ ಸಿಗ್ನಲ್ ಇದ್ದೇ ಇರುತ್ತದೆ.
❖
ಸಾಕು
ಪ್ರಾಣಿಗಳಾದ ನಾಯಿ ಅಥವಾ ಕುದುರೆಗಳನ್ನು ಟ್ರೈಲ್ ನಲ್ಲಿ ತಮ್ಮ ಜೊತೆ ಕರೆದೊಯ್ದರೆ ಅದು ರಸ್ತೆಯಲ್ಲಿ
ಗಲೀಜು ಮಾಡಿದರೆ ಅದನ್ನು ಮುಲಾಜಿಲ್ಲದೆ ಪ್ಲಾಸ್ಟಿಕ್ ಕವರಿನಲ್ಲಿ ಎತ್ತಿ ಅದನ್ನು ಅದಕ್ಕಾಗಿ ಇಟ್ಟಿರುವ
ಡಬ್ಬಿಯಲ್ಲಿ ಹಾಕಬೇಕು. ಆಶ್ಚರ್ಯವೆಂದರೆ ಪ್ರತಿಯೊಬ್ಬರು ಇದನ್ನು ಕಡ್ಡಾಯವಾಗಿ ಪಾಲಿಸುತ್ತಾರೆ.
❖
ಸುದೀರ್ಘವಾದ
ಟ್ರೈಲ್ ಗಳಲ್ಲಿ ಮೈಲಿಗೊಂದರಂತೆ ಪ್ರಯಾಣಿಕರು ದಣಿವನ್ನಾರಿಸಿಕೊಳ್ಳಲು ಅನುಕೂಲವಿರುತ್ತದೆ. ಇದರಲ್ಲಿ
ಕುಳಿತುಕೊಳ್ಳಲು, ವ್ಯಾಯಾಮ ಮಾಡಲು ಹಾಗು ಕುಡಿಯುವ ನೀರಿನ ಸೌಕರ್ಯವಿರುತ್ತದೆ.
❖
ದಾರಿಯಲ್ಲಿ
ಬರುವ ಪ್ರತಿಯೊಂದು ಉದ್ಯಾನವನದಲ್ಲೂ ಸಾಮಾನ್ಯವಾಗಿ ರೆಸ್ಟ್ ರೂಮುಗಳು ಇದ್ದೇ ಇರುತ್ತದೆ.
ಒಟ್ಟಿನಲ್ಲಿ ಈ ಬಾರಿಯ
ನನ್ನ ಅಮೆರಿಕಾ ಪ್ರವಾಸವು ಅತ್ಯಂತ ಫಲಪ್ರದವಾಗಿತ್ತು. ನನ್ನ
ಬಹುತೇಕ ಸಮಯವನ್ನು ಪ್ರಕೃತಿಯ ಮಡಿಲಲ್ಲಿ ಕಳೆದೆ. ಇದರಿಂದ ನನಗೆ ಅತೀವ
ಸಂತಸ ಹಾಗು ತೃಪ್ತಿ ಆಯಿತು. ನನ್ನ ಮುಂದಿನ ಅಮೆರಿಕಾ ಪ್ರವಾಸದಲ್ಲಿ ನಾನು ಬೈಸಿಕಲ್ ಮೂಲಕ
ಮೇಲೆ ವಿವರಿಸಿದ ಟ್ರೈಲ್ ಗಳನ್ನು ಮತ್ತೊಮ್ಮೆ ವೀಕ್ಷಿಸಬೇಕೆಂದಿರುವೆ.
Comments
Post a Comment