ವಾರಂಗಲ್ ನ ಪ್ರೇಕ್ಷಣೀಯ ಸ್ಥಳಗಳು ಭಾರತೀಯ ಸ್ಟೇಟ್ ಬ್ಯಾಂಕ್ ನ ಮೂರು ಹಿರಿಯ ನಾಗರಿಕರಾದ ಸರ್ವಶ್ರೀ . ರಮೇಶ . ಪಿ . ಎಸ್ , ವೆಂಕಟಸುಬ್ಬಯ್ಯ ಹಾಗೂ ಗುರುಪ್ರಸಾದ್ ರವರುಗಳು ಹೈದರಾಬಾದಿಗೆ ತೆರಳಿ ಅಲ್ಲಿಂದ ಮತ್ತೊಬ್ಬ ಅದೇ ಬ್ಯಾಂಕಿನ ನಿವೃತ್ತ ಅಧಿಕಾರಿಯೊಂದಿಗೆ ವಾರಂಗಲ್ , ಭುವನಗಿರಿ , ಯಡಾದ್ರಿ ಹಾಗೂ ಸುರೇಂದ್ರಪುರಿಗಳನ್ನೊಳಗೊಂಡ ಚಾರಿತ್ರಿಕ , ಪೌರಾಣಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಮೂರು ದಿನದ ಪ್ರವಾಸವನ್ನು ಮುಗಿಸಿ ಮರಳಿ ಬೆಂಗಳೂರಿಗೆ ಇಂದು ಮುಂಜಾನೆ ಆಗಮಿಸಿದರು . ಈ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಮೊದಲು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ಹಾಗೂ ಪೌರಾಣಿಕ ಸಂಕ್ಷಿಪ್ತ ಮಾಹಿತಿಗಳನ್ನು ಈ ಕೆಳಗೆ ವಿವರಿಸಿರುವಂತೆ ಸಂಗ್ರಹಿಸಲಾಯಿತು . ಅದನ್ನು ಎಲ್ಲ ಸಹ ಪ್ರಯಾಣಿಕರಲ್ಲೂ ಹಂಚಿಕೊಂಡು ಅನಂತರ ಪ್ರವಾಸವನ್ನು ಮಾಡಲಾಯಿತು . ಪ್ರವಾಸದ ನಂತರ ಈ ಮಾಹಿತಿಗಳಮೇಲೆ ಮತ್ತೊಮ್ಮೆ ಕಣ್ಣುಹಾಯಿಸಲಾಯಿತು . ಇದರಿಂದ ಎಲ್ಲ ಸದಸ್ಯರಿಗೂ ಹೆಚ್ಚಿನ ಸಂತೋಷವುಂಟಾಯಿತು . ( ವಿ . ಸೂ . ಈ ಮಾಹಿತಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಹಾಗೂ ಬೇರೆ ಯಾರಾದರೂ ಈ ಸ್ಥಳಗಳಿಗೆ ಭೇಟಿಕೊಡುವ ಉದ್ದೇಶವಿದ್ದಲ್ಲಿ ಅವರಿಗೆ ಸ್ವಲ್ಪಮಟ್ಟಿನ ಮಾರ್ಗದರ್ಶನವು ಸಿಗಬಹುದೆಂಬ ಉದ್ದೇಶ ಮಾತ್ರವೇ ಹೊರತು ಬೇರೇನೂ ಇರುವುದಿಲ್ಲ .) ಪ್ರಸ್ತಾವನೆ : ವಾರಂಗಲ್ ನಗರವು ವಾರಂಗಲ್ ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೇಂದ್ರ ನಗರ . ತೆಲಂಗಾಣಾ ರಾಜ್ಯದ...